


ಪೆರುವಾಯಿ: ಹಿರಿಯ ಜಾನಪದ ಕಲಾವಿದೆ ಕಮಲಾ ನಲಿಕೆ ಪೆರುವಾಯಿಯವರು “ವೀರ ರಾಣಿ ಅಬ್ಬಕ್ಕ ” ಗೌರವ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ABRSM-KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿರುವ “ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹಿಳಾ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಕೇರಳದ ಕುಂಬಳೆ ಆರಿಕ್ಕಾಡಿ ದಿ.ಗೋಪಾಲ ನಲಿಕೆ ಮತ್ತು ಯಮುನಾ ದಂಪತಿಗಳ ಪುತ್ರಿಯಾಗಿ ಜನಿಸಿರುವ ತಾವು ಪೆರುವಾಯಿ ಗ್ರಾಮದ ಮುಂಚಿರಬೆಟ್ಟು ನಿವಾಸಿ ಪ್ರಸಿದ್ಧ ದೈವನರ್ತಕರಾಗಿದ್ದ ದಿ. ಕೊರಗು ನಲಿಕೆಯವರ ಪ್ರಥಮ ಪುತ್ರ ಮಾಂಕು ನಲಿಕೆ ಎಂಬವರ ಪತ್ನಿ.
ಎಳೆ ವಯಸ್ಸಿನಲ್ಲಿ ಕೂಡು ಕುಟುಂಬದೊAದಿಗೆ ಸಂಸಾರವನ್ನು ನಿಭಾಯಿಸುತ್ತಾ, ತನ್ನ ಮಾವ ಹಾಗೂ ಪತಿಯೊಂದಿಗೆ ದೈವಾರಾಧನೆ ಕ್ಷೇತ್ರದಲ್ಲಿ ತೆಂಬರೆ ಬಡಿಯುತ್ತಾ, ಪಾಡ್ದನ ಹೇಳುತ್ತಾ ದೈವರಾಧನೆ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನೀಡುತ್ತಾ ಬಂದಿರುತ್ತಾರೆ. ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಸೇರಿದಂತೆ ಹಲವಾರು ವೇದಿಕೆಗಳಲ್ಲಿ ಜಾನಪದ ಕಲೆಗಳಾದ ಮಾದಿರ ಕುಣಿತ, ಕನ್ಯಾಪು ಕುಣಿತವನ್ನು ಪ್ರದರ್ಶಿಸಿ ಬಹುಮಾನದ ಜೊತೆಗೆ ಪ್ರಶಂಸೆಯನ್ನು ಗಳಿಸಿರುತ್ತಾರೆ.
ತಮ್ಮ ಬಡತನದ ಜೀವನದ ನಡುವೆಯೂ ತನ್ನ ಎಲ್ಲಾ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ, ಎಲ್ಲಾ ಮಕ್ಕಳಿಗೂ ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ಗೌರವ ನೀಡುವಲ್ಲಿ ತಾವು ಪಟ್ಟ ಶ್ರಮ ಇವರ ಜೀವನ ಇಂದಿನ ಜೀವನ ಶೈಲಿಗೆ ಸ್ಪೂರ್ತಿ. ವೃತ್ತಿ ಬದುಕಿನ ಜೊತೆ ಚಾಪೆಹಣೆಯುವುದು, ಮುಟ್ಟಾಳೆ ತಯಾರಿಕೆಯಲ್ಲಿ ತಾವು ಪರಿಣಿತರಾಗಿದ್ದಾರೆ.
ಪೆರುವಾಯಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆಯಾಗಿ ರಾಜಕೀಯ ಕ್ಷೇತ್ರದಲ್ಲೂ ಜನರ ಸೇವೆ ಮಾಡುತ್ತಾ ಬಂದಿರುವ ಇವರ ಜಾನಪದ ಕಲೆ ಹಾಗೂ ದೈವಾರಧನೆ ಕ್ಷೇತ್ರದ ಸೇವೆಯನ್ನು ಗುರುತಿಸಿ ಹಲವು ವೇದಿಕೆಗಳಲ್ಲಿ ಗೌರವಿಸಿ ಸನ್ಮಾನಿಸಲಾಗಿದೆ.
ಇವರ ಜಾನಪದ ಕ್ಷೇತ್ರದ ಕಲಾ ಸಾಧನೆಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯ ಗೌರವ ಇನ್ನಷ್ಟು ಉತ್ತುಂಗಕ್ಕೆ ಏರಲು ಅನುವು ಮಾಡಿಕೊಟ್ಟಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಫೆ. 16 ರಂದು ಪುತ್ತೂರು ನೆಹರೂ ನಗರದ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.








