




ಬಂಟ್ವಾಳ: ಅಳಿಕೆ ಗ್ರಾಮದ ಮುಳಿಯದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ (ರಿ.) ಇದರ 27ನೇ ವಾರ್ಷಿಕೋತ್ಸವವು ಡಿ.30ರ ಮಂಗಳವಾರ ಭಕ್ತಿಭಾವ, ಧಾರ್ಮಿಕ ವೈಭವ, ವಿಧಿವಿಧಾನಗಳೊಂದಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆಯಿಂದ ರಾತ್ರಿ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜನಾ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ 5 ಗಂಟೆಗೆ ದೀಪ ಪ್ರಜ್ವಲನ ಹಾಗೂ ಗಣಪತಿ ಹೋಮ ನೆರವೇರಲಿದ್ದು, ಬಳಿಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 6 ಗಂಟೆಗೆ ಭಜನಾ ಕಾರ್ಯಕ್ರಮದ ಆರಂಭ, 10 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವರ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 12.45ಕ್ಕೆ ಪ್ರಸಾದ ವಿತರಣೆ, ನಂತರ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ಗಂಟೆಗೆ ಭಜನಾ ಮಂಗಲೋತ್ಸವ, ರಾತ್ರಿ 7ರಿಂದ 8 ಗಂಟೆಯವರೆಗೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ, ಮುಳಿಯ ಇವರಿಂದ ಯಕ್ಷಗಾನ ಪ್ರಸಂಗ ‘ನರಕಾಸುರ ಮೋಕ್ಷ’ ಪ್ರದರ್ಶನ ನಡೆಯಲಿದೆ. ರಾತ್ರಿ 9 ಗಂಟೆಗೆ ಜಲ್ಲೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆಗಳು ನಡೆಯಲಿದ್ದು, ಶ್ರೀ ಅಯ್ಯಪ್ಪ ಸ್ವಾಮಿಗೆ ಸಮರ್ಪಿತವಾದ ಭಕ್ತಿಗೀತೆಗಳು, ಪ್ರಾರ್ಥನೆಗಳು ಮತ್ತು ಧಾರ್ಮಿಕ ಆಚರಣೆಗಳು ಭಕ್ತರನ್ನು ಆಕರ್ಷಿಸಲಿವೆ.
ಭಜನಾ ಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದು, ಎಲ್ಲಾ ಭಕ್ತಾದಿಗಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಭಜನಾ ಮಂದಿರದ ವತಿಯಿಂದ ಮನವಿ ಮಾಡಲಾಗಿದೆ.








