Friday, April 26, 2024
spot_imgspot_img
spot_imgspot_img

ಅರ್ಥಪೂರ್ಣವಾದ ಸರಳ ದಸರಾ ಆಚರಣೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

- Advertisement -G L Acharya panikkar
- Advertisement -

ಕೊರೋನಾ ಸೋಂಕು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅರ್ಥಪೂರ್ಣವಾದ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೆರೆಯ ಕೇರಳದಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್, ಓಣಂ ಆಚರಣೆಗೆ ಮುಕ್ತ ಅವಕಾಶ ಕೊಟ್ಟ ಬಳಿಕ ಹೆಚ್ಚಿದೆ. ಪ್ರತಿದಿನ ಏಳೆಂಟು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅದೇ ತಪ್ಪು ಮೈಸೂರಿನಲ್ಲಿ ಮರುಕಳಿಸಬಾರದು ಎಂಬ ಕಾರಣಕ್ಕೆ ಸರಳ ದಸರಾ ಆಚರಣೆಗೆ ತಜ್ಞರು ಮತ್ತು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಸಚಿವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.

“ಮೈಸೂರಿನಲ್ಲಿ ಮೊದಲು ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಾವು ಸಂಭವಿಸಿರಲಿಲ್ಲ. ಈ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಈಗ ನಿಯಂತ್ರಣ ತಪ್ಪಿದೆ. ಅದಕ್ಕಾಗಿ ತುರ್ತಾಗಿ ನಗರಕ್ಕೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ, ಸೋಂಕು ನಿಯಂತ್ರಣಕ್ಕೆ ತರಲು ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ,” ಎಂದು ವಿವರಿಸಿದರು.

“ಸದ್ಯಕ್ಕೆ ರಾಜ್ಯದಲ್ಲಿ ವೆಂಟಿಲೇಟರ್ ಕೊರತೆ ಇಲ್ಲ. ರಾಜ್ಯಾದ್ಯಂತ 33 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಮೈಸೂರು ಜಿಲ್ಲೆಯ ಎಲ್ಲ ಹಿರಿಯ ನಾಗರಿಕರನ್ನು ಪರೀಕ್ಷೆಗೊಳಪಡಿಸುವಂತೆ ಸೂಚಿಸಲಾಗಿದೆ,” ಎಂದು ತಿಳಿಸಿದರು.

ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕುರಿತು ಮಾತನಾಡಿದ ಸಚಿವರು, “ಕಳೆದ 6 ತಿಂಗಳ ಕಾಲ ಅರಿವು ಮೂಡಿಸುವ ಕೆಲಸ ಮಾಡಿದ್ದರೂ ಜನರು ನಿರ್ಲಕ್ಷ್ಯ ತೋರಿದರೆ ಏನು ಮಾಡಬೇಕು?” ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್, ಶಾಸಕರಾದ ನಾಗೇಂದ್ರ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.

ಸಭೆಯ ಪ್ರಮುಖಾಂಶಗಳು

*ಇದು ದೀರ್ಘ ಹೋರಾಟ. ಲಸಿಕೆ ಸಿಗುವವರೆಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಬೂತ್ ಮಟ್ಟದ ಕಾರ್ಯಪಡೆಗಳನ್ನು ಕ್ರಿಯಾಶೀಲಗೊಳಿಸಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಇದ್ದಕ್ಕಿದ್ದಂತೆ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಲು ಕಾರಣಗಳನ್ನು ಪತ್ತೆಹಚ್ಚಿ ಸರಿಪಡಿಸಿಕೊಳ್ಳಬೇಕು.

*ರಾಜ್ಯಕ್ಕೆ ಮಾದರಿಯಾಗಿದ್ದ ಜಿಲ್ಲೆಯಲ್ಲಿ ಸಾವಿನ ಪ್ರಮಾಣ 1.9% ರಷ್ಟಿದೆ. ರಾಜ್ಯದ ಪ್ರಮಾಣ 1.5% ಇದ್ದರೆ, ರಾಷ್ಟ್ರದ ಪ್ರಮಾಣ 1.6% ರಷ್ಟಿದೆ. ಜಾಗತಿಕ ಮಟ್ಟದಲ್ಲಿ ಸಾವಿನ ಪ್ರಮಾಣ 3.5% ರಷ್ಟಿದೆ. ಕಳೆದ ಒಂದು ವಾರದಲ್ಲಿ ಮೈಸೂರಿನಲ್ಲಿ ಆಗಿರುವ ಸಾವಿನ ಪ್ರಮಾಣ 3.9% ರಷ್ಟಿದ್ದು, ಜಾಗತಿಕ ಮಟ್ಟಕ್ಕಿಂತ ಹೆಚ್ಚಿದೆ. ಹಾಗೆಯೇ ಸೋಂಕಿನ ಪ್ರಮಾಣ ಶೇ.10 ರಷ್ಟಿದೆ. ಪರೀಕ್ಷೆಗೆ ನಿಗದಿಪಡಿಸಿದ ಗುರಿ ತಲುಪಿಲ್ಲ. ಅದು ಕೇವಲ 65% ರಷ್ಟಿದೆ. ಇದು ಸಮಾಧಾನಕರವಲ್ಲ.

*ಹೋಮ್ ಐಸೋಲೇಶನ್ ನಲ್ಲಿರುವ ರೋಗಿಗಳಿಗೆ ನೀಡಿರುವ ಚಿಕಿತ್ಸೆ ಮತ್ತು ಸಾವಿನ ಪ್ರಮಾಣ ಸರಿಯಾಗಿ ದಾಖಲು ಮಾಡುತ್ತಿಲ್ಲ. ಮನೆಯಲ್ಲೇ 11 ಸಾವು ಆಗಿರುವುದು ಆತಂಕಕಾರಿ. ಇದನ್ನು ಸರಿಪಡಿಸಿಕೊಳ್ಳಬೇಕು. ಟೆಲಿ ಮೆಡಿಸಿನ್ ವ್ಯವಸ್ಥೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದು ಮರುಕಳಿಸಬಾರದು.

*ಕೋವಿಡ್ ಆಸ್ಪತ್ರೆಗೆ 68 ರೆಸಿಡೆಂಟ್ ಡಾಕ್ಟರ್ ಗಳನ್ನು ನಿಯೋಜಿಸಲಾಗಿದೆ. ಆದರೂ ಸರಿಯಾಗಿ ಚಿಕಿತ್ಸೆ ಸಿಗದ ದೂರು ಬರುತ್ತಿದೆ ಎಂದರೆ ಸಹಿಸಲು ಸಾಧ್ಯವಿಲ್ಲ.

*ಸೋಂಕಿತರ ಪತ್ತೆ ಕಾರ್ಯ ಸರಿಯಾಗಿ ನಡೆಯಬೇಕು. ಸಿಬ್ಬಂದಿ ನೇಮಕಕ್ಕೆ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಕೋವಿಡ್ ಸಾವಿನ ಆಡಿಟ್ ಬಾಕಿ ಇದ್ದು, ಬೇಗ ಪೂರ್ಣಗೊಳಿಸಿ, ಚಿಕಿತ್ಸೆಯ ಲೋಪ ಸರಿಪಡಿಸಿಕೊಳ್ಳಬೇಕು.

*ಜನಜಾಗೃತಿಗೆ ಪ್ರಭಾವಿಗಳು, ಗಣ್ಯರು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಬಳಸಿಕೊಳ್ಳಿ. ಮಾರುಕಟ್ಟೆ ಮತ್ತು ಜನಸಂದಣಿ ಪ್ರದೇಶಗಳಲ್ಲಿ ಪರೀಕ್ಷೆ ಸಂಖ್ಯೆ ಹೆಚ್ಚಿಸಿ.

*ದಸರಾಗೆ ಸಂಬಂಧಿಸಿದಂತೆ ಕಾರ್ಯತಂತ್ರ ಸಿದ್ಧಪಡಿಸಬೇಕು. ಕೋವಿಡ್ ಮುಕ್ತ ಗ್ರಾಮ ಎಂಬ ಕಾರ್ಯಕ್ರಮ, 65 ವಾರ್ಡುಗಳಲ್ಲಿ ಸೋಂಕು ಮುಕ್ತಗೊಳಿಸಲು ಕ್ರಿಯಾ ಯೋಜನೆ ರೂಪಿಸಬೇಕು.

*ಔಷಧ ಮಳಿಗೆಗಳಲ್ಲಿ ಐಎಲ್‍ಐ ಚಿಕಿತ್ಸೆಗೆ ಔಷಧ ಖರೀದಿಸುವವರ ಮಾಹಿತಿ ಪಡೆದು ಅವರ ಮೇಲೆ ನಿಗಾ ವಹಿಸಬೇಕು.

*ನಾನಾ ರೋಗಗಳಿಂದ ಬಳಲುತ್ತಿರುವ 96 ಸಾವಿರ ಹಿರಿಯ ನಾಗರಿಕರ ಪರೀಕ್ಷೆ ನಡೆಸಿ, ಅವರನ್ನು ರಿವರ್ಸ್ ಕ್ವಾರಂಟೈನ್ ಗೆ ಒಳಪಡಿಸಬೇಕು. ಮನೆಯಲ್ಲಿ ಬೇರೆ ಯಾರೂ ಇಲ್ಲದಿದ್ದಲ್ಲಿ, ಜಿಲ್ಲಾಡಳಿತ ಜವಾಬ್ದಾರಿ ಹೊರಬೇಕು.

*ಜಿಲ್ಲಾಸ್ಪತ್ರೆ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಇನ್ನು ನೆಪಗಳನ್ನು ಹೇಳುವುದನ್ನು ಕೇಳಲು ಆಗುವುದಿಲ್ಲ. ಖಾಸಗಿ ಆಸ್ಪತ್ರೆಗಳಿಂದ 50% ರಷ್ಟು ಹಾಸಿಗೆಗಳನ್ನು ಪಡೆದು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು.

*ಖಾಸಗಿ ಆಸ್ಪತ್ರೆಗಳು ಸಹಕರಿಸದಿದ್ದರೆ ಕಾನೂನು ಬಳಕೆ ಮೂಲಕ ಅವರನ್ನು ನಿಯಂತ್ರಣ ಮಾಡಲೇಬೇಕು. ಜಿಲ್ಲಾಧಿಕಾರಿಯವರು ಎಲ್ಲಾ ಆಸ್ಪತ್ರೆಗಳ ಆಡಳಿತ ಮಂಡಳಿ ಸಭೆ ನಡೆಸಬೇಕು. ಹೆಚ್ಚುವರಿ ಶುಲ್ಕದ ದೂರು ಇರಬಾರದು.

*ಒಂದು ವೇಳೆ ಹೆಚ್ಚು ವಸೂಲಿ ಮಾಡಿದರೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.

- Advertisement -

Related news

error: Content is protected !!