



ಬೆಂಗಳೂರು: ಇಂದಿನಿಂದ 3 ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದ್ದು, ಕಸ್ತೂರಿ ರಂಗನ್ ವರದಿ ಹಾಗೂ ಬರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಪಶ್ಚಿಮಘಟ್ಟದ ಕುರಿತಾದ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಚರ್ಚೆ ನಡೆಲಿದೆ. ವಂದೇ ಮಾತರಂ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ಸಂಘರ್ಷಕ್ಕಿಳಿಯುವ ಸಾಧ್ಯತೆ ಇದೆ. 2 ಸಾಲಲ್ಲ, ಪೂರ್ತಿ ಸಾಲು ಹಾಡುತ್ತೀವಿ ಎಂದು ಬಿಜೆಪಿ ಹಠ ಹಿಡಿದಿದೆ.
ಮೊನ್ನೆಯಷ್ಟೇ ಸಿಎಂ ಇದ್ದ ವೇದಿಕೆಯಲ್ಲೇ ಬಿಜೆಪಿ ಶಾಸಕರೊಬ್ಬರು ಪ್ರತಿಭಟನೆ ಮಾಡಿದ್ದರು. ವಂದೇ ಮಾತರಂ ಪೂರ್ಣ ಹಾಡುವಂತೆ ಶಾಸಕ ಚನ್ನಬಸಪ್ಪ ಒತ್ತಾಯಿಸಿದ್ದರು. ಸದನದಲ್ಲೇ ಪೂರ್ಣ ಹಾಡುತ್ತೇವೆ ಎಂದು ಅಶೋಕ್ ಸವಾಲು ಹಾಕಿದ್ದು, ಸರ್ಕಾರದ ಆದೇಶದಂತೆ ವಿಧಾನಸಭೆಯಲ್ಲಿ ಎರಡೇ ಸಾಲು ಮೊಳಗಲಿದೆ. ಬಿಜೆಪಿ ಶಾಸಕರು ಪೂರ್ಣ ಸಾಲುಗಳನ್ನು ಹಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ವಿಶೇಷ ಅಧಿವೇಶನದಲ್ಲಿ ರಾಜ್ಯದಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಬಿಡದಿ ಟೌನ್ಶಿಪ್, ನೈಸ್ ಟೋಲ್, ಕೆಪಿಎಸ್ಸಿ ಹಗರಣ ಸೇರಿದಂತೆ ಪ್ರಮುಖ ವಿಚಾರಗಳನ್ನು ಚರ್ಚೆಗೆ ಅವಕಾಶಕ್ಕೆ ಆಗ್ರಹಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿವೆ ಎಂಬುದಾಗಿ ವರದಿ ಮೂಲಕ ತಿಳೀದುಬಂದಿದೆ.








