



2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಅಜೇಯ ಓಟ ಮುಂದುವರೆದಿದೆ. ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.ರೋಹಿತ್ ಶರ್ಮಾ ನಾಯಕತ್ವದಲ್ಲಿ, ಟೀಂ ಇಂಡಿಯಾ ಮತ್ತೊಮ್ಮೆ 242 ರನ್‌ಗಳ ಗುರಿಯನ್ನು ಯಾವುದೇ ತೊಂದರೆಯಿಲ್ಲದೆ ಅದ್ಭುತ ರೀತಿಯಲ್ಲಿ ಬೆನ್ನಟ್ಟಿದೆ. ಟೀಂ ಇಂಡಿಯಾದ ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ಏಕೆಂದರೆ ಸಂಕಷ್ಟದ ಸಮಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇತ್ತ ಭಾರತದ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ, ತನ್ನದೇ ತವರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆಯಾದರೂ, ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬೀಳುವ ಅಂಚಿನಲ್ಲಿದೆ.
ಫೆಬ್ರವರಿ 23 ರ ಭಾನುವಾರ ದುಬೈನಲ್ಲಿ ನಡೆದ ಈ ಬ್ಲಾಕ್‌ಬಸ್ಟರ್ ಪಂದ್ಯಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಆದರೆ ಅಭಿಮಾನಿಗಳು ನಿರೀಕ್ಷಿಸಿದ ಮತ್ತು ಬಯಸಿದಷ್ಟು ರೋಮಾಂಚನಕಾರಿಯಾಗಿ ಈ ಪಂದ್ಯ ನಡೆಯಲಿಲ್ಲ. ಇಡೀ ಪಂದ್ಯದಲ್ಲಿ ಪಾಕ್ ಅಭಿಮಾನಿಗಳು ಸಂತಸ ಪಡುವಂತಹ ಒಂದೇ ಒಂದು ಸನ್ನಿವೇಶವನ್ನು ಪಾಕ್ ತಂಡ ಸೃಷ್ಟಿಸಲಿಲ್ಲ. ಆದರೆ ಭಾರತೀಯ ಅಭಿಮಾನಿಗಳಿಗೆ ಮಾತ್ರ ಈ ಪಂದ್ಯ ಹಬ್ಬದಂತ್ತಿತ್ತು. ಏಕೆಂದರೆ ಈ ಪಂದ್ಯವನ್ನು ಭಾರತ ಏಕಪಕ್ಷೀಯವಾಗಿ ಗೆದ್ದುಕೊಂಡರೆ, ಇನ್ನೊಂದು ಖುಷಿಯ ವಿಚಾರವೆಂದರೆ ಇಷ್ಟು ದಿನ ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ರೋಹಿತ್ ಶರ್ಮಾ ಬೇಗನೆ ಔಟಾದ ನಂತರ ಕ್ರೀಸ್‌ಗೆ ಬಂದ ಕೊಹ್ಲಿ, ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ಜೊತೆಯಾಟವನ್ನು ಹಂಚಿಕೊಂಡಿದಲ್ಲದೆ, ತಂಡಕ್ಕೆ ಗೆಲುವು ತಂದುಕೊಟ್ಟರು. ಇದರ ಜೊತೆಗೆ ತಮ್ಮ 51 ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು.