




ಭಾರತೀಯ ಹಬ್ಬಗಳ ವೈಶಿಷ್ಟ್ಯವೇ ಇದು – ಅವು ಹಾಗೆಯೇ ಯಾವುದೋ ಒಂದು ದಿನವಾಗಿ, ಆಚರಣೆಯಾಗಿ ಬಂದು ಹೋಗುವುದಿಲ್ಲ. ಅವು ಕಥೆಯೊಂದನ್ನು ಹೊತ್ತು ಬರುತ್ತವೆ; ಆ ಕಥೆಯೊಳಗೆ ಕಾಲವನ್ನು ಮೀರಿದ ಒಂದು ಸತ್ಯವನ್ನು ಬಚ್ಚಿಟ್ಟಿರುತ್ತವೆ. ವರ್ಷದಿಂದ ವರ್ಷಕ್ಕೆ ಹಬ್ಬ ಮರುಕಳಿಸಿದರೂ, ಅದರ ಅರ್ಥ ಮಾತ್ರ ಪ್ರತಿಯೊಂದು ಕಾಲಘಟ್ಟದಲ್ಲೂ ಹೊಸದಾಗಿ ತೆರೆದುಕೊಳ್ಳುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿಯೂ ಅಂತಹದ್ದೇ ಒಂದು ಹಬ್ಬ. ಕೃಷ್ಣನ ಜನನವನ್ನು ನೆನಪಿಸಿಕೊಳ್ಳುವ ದಿನವಾದರೂ, ವಾಸ್ತವದಲ್ಲಿ ಅದು ಕತ್ತಲೆಯ ನಡುವೆಯೂ ಬೆಳಕನ್ನು ನಿರೀಕ್ಷಿಸುವ ಮನುಷ್ಯನ ಮನಸ್ಸಿನ ಹಬ್ಬ.
ಅದು ಮಥುರೆಯ ಕಾರಾಗೃಹ. ಹೊರಗೆ ಕಂಸನ ಕ್ರೌರ್ಯದ ನೆರಳು. ಒಳಗೆ ಬಂಧನದಲ್ಲಿರುವ ದೇವಕಿ ಮತ್ತು ವಸುದೇವ. ಭಯದ ನಡುವೆ, ನಿರಾಶೆಯ ನಡುವೆ, ಮಧ್ಯರಾತ್ರಿಯ ನಿಶ್ಶಬ್ದತೆಯಲ್ಲಿ ಕೃಷ್ಣ ಜನಿಸುತ್ತಾನೆ ಎಂಬುದು ಪೌರಾಣಿಕ ನಂಬಿಕೆ. ಈ ಜನ್ಮದ ಸನ್ನಿವೇಶವೇ ಕೃಷ್ಣನ ಕಥೆಯ ಮೊದಲ ತಾತ್ವಿಕ ಸಂದೇಶವನ್ನು ಹೊತ್ತುಕೊಂಡಿದೆ. ಅದುವೇ – ಬೆಳಕು ಯಾವಾಗಲೂ ಬೆಳಕಿನಲ್ಲೇ ಹುಟ್ಟುವುದಿಲ್ಲ; ಕೆಲವೊಮ್ಮೆ ಅದು ಕತ್ತಲೆಯ ಕರಾಳ ಗರ್ಭದಿಂದಲೇ ಉದಯಿಸುತ್ತದೆ.
ಮನುಷ್ಯನ ಬದುಕಿನಲ್ಲೂ ಮಥುರೆಗಳಿವೆ, ಕಾರಾಗೃಹಗಳಿವೆ. ಅವು ಕಬ್ಬಿಣದ ಸರಳುಗಳಿಂದ ನಿರ್ಮಿತವಾಗಿರಬೇಕೆಂದಿಲ್ಲ. ಭಯ, ಆತಂಕ, ಸೋಲು, ಅಸಹಾಯಕತೆ, ಸ್ವಾರ್ಥ, ದ್ವೇಷ, ನಿರಾಶೆ ಇವೆಲ್ಲವೂ ಮನಸ್ಸಿನ ಕಾರಾಗೃಹಗಳೇ. ಅಂತಹ ಹೊತ್ತಿನಲ್ಲಿ ಹೊರಗಿನಿಂದ ಯಾರಾದರೂ ಬಂದು ನಮ್ಮ ಕತ್ತಲೆಯನ್ನು ದೂರ ಮಾಡುತ್ತಾರೆ ಎಂಬ ನಿರೀಕ್ಷೆಗಿಂತ, ನಮ್ಮೊಳಗೇ ಒಂದು ಬೆಳಕು ಹುಟ್ಟಬೇಕು ಎಂಬ ಅರಿವು ಕೃಷ್ಣ ಜನ್ಮದಿನದ ಆಚರಣೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸುತ್ತದೆ.
ಕೃಷ್ಣ ಎಂದರೆ ಕೇವಲ ಗಂಭೀರ ತತ್ತ್ವವಲ್ಲ. ಕೃಷ್ಣನ ಬಾಲ್ಯಕ್ಕೆ ಕಾಲಿಟ್ಟರೆ ಬದುಕಿನ ಬಣ್ಣವೇ ಬದಲಾಗುತ್ತದೆ. ಗೋಕುಲದ ಬೀದಿಗಳಲ್ಲಿ ಓಡುವ ತುಂಟ ಬಾಲಕ, ಯಶೋದೆಯ ಮಡಿಲಿನ ಮಗು, ಗೆಳೆಯರ ಜೊತೆ ನಗುವ ಸಖ, ಬೆಣ್ಣೆಯ ಮಡಕೆಯ ಮುಂದೆ ನಿಲ್ಲುವ ಕಳ್ಳ, ಯಮುನಾ ತೀರದಲ್ಲಿ ಕೊಳಲು ನುಡಿಸುವ ಮೋಹಕ ಕೃಷ್ಣನ ರೂಪಗಳು ಬದುಕು ಎಷ್ಟು ಗಂಭೀರವಾಗಿದ್ದರೂ ಅದರೊಳಗೆ ನಗುವಿಗೆ, ಆಟಕ್ಕೆ, ಸಂಗೀತಕ್ಕೆ ಮತ್ತು ಸಹಜತೆಗೆ ಜಾಗವಿರಬೇಕು ಎಂಬುದನ್ನು ನೆನಪಿಸುತ್ತವೆ.
ಇಂದಿನ ಬದುಕಿನಲ್ಲಿ ಈ ಬಾಲಕೃಷ್ಣ ಇನ್ನಷ್ಟು ಅಗತ್ಯವಾಗಿದ್ದಾನೆ. ಮಕ್ಕಳ ಕೈಯಲ್ಲಿ ಆಟಿಕೆಗಳಿಗಿಂತ ಮೊಬೈಲ್‌ಗಳು ಹೆಚ್ಚಾಗುತ್ತಿರುವಾಗ, ಆಟದ ಮೈದಾನಕ್ಕಿಂತ ಪರದೆಗಳು ದೊಡ್ಡದಾಗುತ್ತಿರುವಾಗ, ಅಂಕಗಳ ಓಟದಲ್ಲಿ ಬಾಲ್ಯದ ನಗು ಹಿಂದೆ ಸರಿಯುತ್ತಿರುವಾಗ ಕೃಷ್ಣನ ಬಾಲಲೀಲೆ ಕೇವಲ ಪುರಾಣದ ನೆನಪಾಗಿ ಉಳಿಯಬಾರದು. ಮಗುವಿನೊಳಗಿನ ಕುತೂಹಲವನ್ನು ಉಳಿಸುವುದು, ಪ್ರಕೃತಿಯೊಂದಿಗೆ ಬೆರೆಯಲು ಬಿಡುವುದು, ಮುಕ್ತವಾಗಿ ಆಟವಾಡಲು ಅವಕಾಶ ನೀಡುವುದು ಇವೆಲ್ಲವೂ ಕೃಷ್ಣನ ಬಾಲ್ಯವನ್ನು ಅರ್ಥಮಾಡಿಕೊಳ್ಳುವ ಸಮಕಾಲೀನ ಮಾರ್ಗಗಳಾಗಬಹುದು.
ಕೃಷ್ಣನ ಕೈಯಲ್ಲಿರುವ ಕೊಳಲು ಮತ್ತೊಂದು ಅದ್ಭುತ ರೂಪಕ. ಕೊಳಲಿನ ವಿಶೇಷತೆ ಅದರೊಳಗಿನ ಖಾಲಿತನ. ಅದು ತನ್ನೊಳಗೆ ಏನನ್ನೂ ಹಿಡಿದಿಟ್ಟುಕೊಳ್ಳುವುದಿಲ್ಲ; ಆದರೆ ಅದರೊಳಗೇ ನಾದ ಹುಟ್ಟುತ್ತದೆ. ಮನುಷ್ಯನ ಮನಸ್ಸಿಗೂ ಕೆಲವೊಮ್ಮೆ ಇಂತಹ ಖಾಲಿತನ ಬೇಕು. ನಿರಂತರ ಮಾಹಿತಿಯ ಗದ್ದಲ, ಅಭಿಪ್ರಾಯಗಳ ಒತ್ತಡ, ಸ್ಪರ್ಧೆಯ ಆತುರ, ಇತರರೊಂದಿಗೆ ಹೋಲಿಕೆಯ ಚಿಂತೆ ಇವೆಲ್ಲದರ ನಡುವೆ ಮೌನಕ್ಕೆ ಜಾಗವೇ ಇಲ್ಲದಂತಾಗಿದೆ. ಕೃಷ್ಣನ ಕೊಳಲು ನೀಡುವುದು ಸರಳವಾದ ಸಂದೇಶ: ಒಳಗೆ ಸ್ವಲ್ಪ ಖಾಲಿ ಜಾಗವಿದ್ದಾಗಲೇ ಬದುಕಿನಲ್ಲಿ ಹೊಸ ನಾದ ಹುಟ್ಟುತ್ತದೆ.
ಕೃಷ್ಣನ ವ್ಯಕ್ತಿತ್ವದ ಮತ್ತೊಂದು ಆಯಾಮ ಮಹಾಭಾರತದ ಕುರುಕ್ಷೇತ್ರದಲ್ಲಿ ತೆರೆದುಕೊಳ್ಳುತ್ತದೆ. ಗೋಕುಲದ ತುಂಟ ಬಾಲಕನಿಂದ ಕುರುಕ್ಷೇತ್ರದ ಸಾರಥಿಯಾಗುವವರೆಗಿನ ಪಯಣವೇ ಕೃಷ್ಣನ ಬಹುಮುಖ ವ್ಯಕ್ತಿತ್ವದ ಅದ್ಭುತತೆ. ಅರ್ಜುನನ ಕೈಯಲ್ಲಿ ಗಾಂಡೀವವಿದ್ದರೂ ಮನಸ್ಸಿನಲ್ಲಿ ಗೊಂದಲವಿತ್ತು. ಯುದ್ಧಭೂಮಿಯ ಮಧ್ಯದಲ್ಲಿ ನಿಂತಿದ್ದ ಅವನಿಗೆ ಎದುರು ಕಾಣಿಸಿದ್ದು ಶತ್ರುಗಳಲ್ಲ; ತನ್ನವರೇ. ಕರ್ತವ್ಯ ಮತ್ತು ಕರುಣೆ, ಸಂಬಂಧ ಮತ್ತು ಜವಾಬ್ದಾರಿ, ಭಾವನೆ ಮತ್ತು ಧರ್ಮ ಎಲ್ಲವೂ ಒಂದೇ ಕ್ಷಣದಲ್ಲಿ ಮುಖಾಮುಖಿಯಾಗಿದ್ದವು.
ಅಲ್ಲಿ ಸಾರಥಿಯಾದ ಕೃಷ್ಣ ರಥವನ್ನು ಮಾತ್ರವಲ್ಲ, ಗೊಂದಲಗೊಂಡ ಮನಸ್ಸನ್ನೂ ಮುನ್ನಡೆಸುತ್ತಾನೆ. ಭಗವದ್ಗೀತೆಯ ಮೂಲಕ ಕರ್ಮ, ಧರ್ಮ, ಜ್ಞಾನ ಮತ್ತು ಸಮತ್ವದ ಕುರಿತು ಚಿಂತನೆಗೆ ದಾರಿ ಮಾಡಿಕೊಡುತ್ತಾನೆ. ಇಂದಿನ ಮನುಷ್ಯನ ಕುರುಕ್ಷೇತ್ರ ಬೇರೆ ಇರಬಹುದು. ಉದ್ಯೋಗದ ಆಯ್ಕೆ, ಸಂಬಂಧಗಳ ಬಿಕ್ಕಟ್ಟು, ಭವಿಷ್ಯದ ಆತಂಕ, ಸೋಲಿನ ಭಯ, ಯಶಸ್ಸಿನ ಒತ್ತಡ ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಯಾವುದೋ ಒಂದು ಯುದ್ಧಭೂಮಿಯಲ್ಲಿ ನಿಂತಿರುತ್ತಾರೆ. ಅಂತಹ ಸಂದರ್ಭದಲ್ಲಿ ಕೃಷ್ಣನ ಸಂದೇಶದ ಸಾರ ಒಂದೇ: ಗೊಂದಲದ ನಡುವೆ ಕರ್ತವ್ಯದ ದಿಕ್ಕನ್ನು ಮರೆಯಬಾರದು.
ಕೃಷ್ಣನ ಮತ್ತೊಂದು ಮುಖ ಸ್ನೇಹದಲ್ಲಿ ಕಾಣುತ್ತದೆ. ಸುದಾಮನೊಂದಿಗೆ ಅವನ ಸಂಬಂಧವು ಸಂಪತ್ತು ಮತ್ತು ಸ್ಥಾನಮಾನಗಳಾಚೆಯ ಸ್ನೇಹದ ಅರ್ಥವನ್ನು ತೋರಿಸುತ್ತದೆ. ಅರಮನೆಯ ಕೃಷ್ಣನಿಗೆ ಬಡ ಸುದಾಮನ ಪ್ರೀತಿಯಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ. ಇಂದಿನ ಜಗತ್ತಿನಲ್ಲಿ ಸಂಬಂಧಗಳಿಗೂ ಕೆಲವೊಮ್ಮೆ ಲೆಕ್ಕಾಚಾರದ ನೆರಳು ಬೀಳುತ್ತಿದೆ. ಯಾರು ಎಷ್ಟು ಕೊಡುತ್ತಾರೆ, ಎಷ್ಟು ಪಡೆಯುತ್ತಾರೆ, ಯಾವ ಸ್ಥಾನದಲ್ಲಿದ್ದಾರೆ ಎಂಬ ಪ್ರಶ್ನೆಗಳು ಸಂಬಂಧಗಳ ಮೌಲ್ಯವನ್ನು ಅಳೆಯಲು ಆರಂಭಿಸಿವೆ. ಇಂತಹ ಸಂದರ್ಭದಲ್ಲಿ ಕೃಷ್ಣ–ಸುದಾಮನ ಸ್ನೇಹ ಮನುಷ್ಯನನ್ನು ಅವನ ಸಂಪತ್ತಿನಿಂದಲ್ಲ, ಹೃದಯದಿಂದ ನೋಡಬೇಕೆಂದು ನೆನಪಿಸುತ್ತದೆ.
ಕೃಷ್ಣನ ಜೀವನ ಪ್ರಕೃತಿಯೊಂದಿಗೂ ಆಳವಾಗಿ ಬೆಸೆದುಕೊಂಡಿದೆ. ಯಮುನಾ ತೀರ, ಗೋವುಗಳು, ವೃಂದಾವನ, ಗೋವರ್ಧನ ಇವೆಲ್ಲವೂ ಕೃಷ್ಣನ ಕಥೆಯ ಭಾಗಗಳಷ್ಟೇ ಅಲ್ಲ; ಮನುಷ್ಯ ಮತ್ತು ಪ್ರಕೃತಿಯ ನಡುವಿನ ಆತ್ಮೀಯತೆಯ ಸಂಕೇತಗಳೂ ಹೌದು. ಹೀಗಾಗಿ ಕೃಷ್ಣನನ್ನು ಪೂಜಿಸುವ ಕೈಯೇ ಪ್ರಕೃತಿಯನ್ನು ಕಾಪಾಡುವ ಕೈಯಾಗಬೇಕು. ಹಬ್ಬದ ಅಲಂಕಾರಕ್ಕಿಂತ ಪರಿಸರದ ಕಾಳಜಿ ಮುಖ್ಯವಾಗಬೇಕು. ಯಮುನೆಗೆ ನಮಸ್ಕರಿಸುವುದರ ಜೊತೆಗೆ ನಮ್ಮ ಊರಿನ ನದಿ, ಕೆರೆ, ಹೊಳೆಗಳನ್ನೂ ಉಳಿಸುವ ಸಂಕಲ್ಪ ಮೂಡಬೇಕು.
ಕೃಷ್ಣನ ಜೀವನದ ವೈವಿಧ್ಯವೇ ಅವನನ್ನು ಅನನ್ಯನನ್ನಾಗಿಸುತ್ತದೆ. ಯಶೋದೆಗೆ ಆತ ಮುದ್ದಿನ ಕಂದ. ಗೆಳೆಯರಿಗೆ ಆತ ಸಖ. ಗೋಪಿಕೆಯರಿಗೆ ಪ್ರೀತಿಯ ಅನುಭೂತಿ. ದ್ರೌಪದಿಗೆ ಆಪದ್ಬಾಂಧವ. ಅರ್ಜುನನಿಗೆ ಸಾರಥಿ ಮತ್ತು ಜ್ಞಾನಗುರು. ಅನ್ಯಾಯದ ಎದುರು ಹೋರಾಡುವವರಿಗೆ ಧೈರ್ಯ. ಗೊಂದಲದಲ್ಲಿರುವವರಿಗೆ ದಾರಿ. ಹೀಗೆ ಪ್ರತಿಯೊಂದು ಸಂಬಂಧಕ್ಕೂ, ಪ್ರತಿಯೊಂದು ಸಂದರ್ಭಕ್ಕೂ ಅದರದೇ ಆದ ಅರ್ಥವನ್ನು ನೀಡಿದ ಬಹುಮುಖ ವ್ಯಕ್ತಿತ್ವ ಕೃಷ್ಣನದು.
ಆದ್ದರಿಂದ ಜನ್ಮಾಷ್ಟಮಿಯ ಆಚರಣೆ ಕೇವಲ ಕೃಷ್ಣನ ವೇಷ ತೊಡುವ ಮಕ್ಕಳಲ್ಲಿ, ತೊಟ್ಟಿಲಿನ ಅಲಂಕಾರದಲ್ಲಿ, ಮಧ್ಯರಾತ್ರಿಯ ಪೂಜೆಯಲ್ಲಿ ಅಥವಾ ಉತ್ಸವದ ಸಂಭ್ರಮದಲ್ಲಿ ಕೊನೆಗೊಳ್ಳಬಾರದು. ಕೃಷ್ಣನ ಜನನವನ್ನು ಆಚರಿಸುವುದಕ್ಕಿಂತ ಕೃಷ್ಣನ ಮೌಲ್ಯಗಳು ನಮ್ಮೊಳಗೆ ಜನಿಸುವುದು ಮುಖ್ಯ.
ಮನಸ್ಸಿನೊಳಗಿನ ಕಂಸನನ್ನು ಅಂದರೆ ಅಹಂಕಾರ, ದ್ವೇಷ, ಕ್ರೌರ್ಯ, ಸ್ವಾರ್ಥವನ್ನು ಗುರುತಿಸಬೇಕು. ನಾವು ಬದುಕಿನ ಕುರುಕ್ಷೇತ್ರದಲ್ಲಿ ಎಂದಿಗೂ ಕರ್ತವ್ಯದಿಂದ ಹಿಂದೆ ಸರಿಯಬಾರದು. ಸಂಬಂಧಗಳಲ್ಲಿ ಸುದಾಮನ ಸ್ನೇಹದ ಸರಳತೆ ಇರಬೇಕು. ಕೊಳಲಿನಂತೆ ಕೇಳುವ ಮೌನ ಇರಬೇಕು. ಗೋವರ್ಧನದಂತೆ ಪ್ರಕೃತಿಯ ರಕ್ಷಣೆಯ ಹೊಣೆಗಾರಿಕೆ ಇರಬೇಕು. ನಾವು ಮನೆ ಬಾಗಿಲಲ್ಲಿ ಬಿಡಿಸುವ ಪುಟ್ಟ ಕೃಷ್ಣನ ಹೆಜ್ಜೆ ಗುರುತುಗಳು ಬೆಳಗಾಗುವಷ್ಟರಲ್ಲಿ ಮಾಸಬಹುದು. ಆದರೆ ಅವು ತೋರಿಸುವ ದಾರಿ ಮಾತ್ರ ನಮ್ಮೊಳಗೆ ಉಳಿಯಬೇಕು.
ಕೃಷ್ಣ ಜನಿಸಿದ ರಾತ್ರಿ ಮಥುರೆಯ ಕತ್ತಲಿನಲ್ಲಿ ಒಂದು ಬೆಳಕು ಮೂಡಿತು ಎನ್ನುವುದು ಪುರಾಣ. ಆದರೆ ಕೃಷ್ಣನ ತತ್ತ್ವ ನಮ್ಮೊಳಗೆ ಹುಟ್ಟುವ ಕ್ಷಣವೇ ನಿಜವಾದ ಜನ್ಮಾಷ್ಟಮಿ. ಹೀಗಿರುವಾಗ ಈ ಜನ್ಮಾಷ್ಟಮಿಯಲ್ಲಿ ತೊಟ್ಟಿಲಿನಲ್ಲಿ ಮಾತ್ರವಲ್ಲ, ಮನದ ಮಥುರೆಯಲ್ಲೂ ಕೃಷ್ಣೋದಯವಾಗಲಿ. ಕತ್ತಲೆ ಕಡಿಮೆಯಾಗಲಿ. ಮನುಷ್ಯತ್ವ ಬೆಳಗಲಿ. ಬದುಕು ಹೊಸ ಅರ್ಥ ಪಡೆಯಲಿ.
✍ಡಾ. ಮೈತ್ರಿ ಭಟ್, ವಿಟ್ಲ








