




ಮುಂಬೈ: ಮಹಾರಾಷ್ಟ್ರದ ನಾಸಿಕ್ನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಯುವಸೇನಾ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಾಸಿಕ್ ಜಿಲ್ಲೆಯ ನಿಫಾಡ್ ನಗರ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಶಿವಸೇನೆಯ ಯುವ ಘಟಕದ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಂಧವೆ ನೇತೃತ್ವದಲ್ಲಿ ಕಾರ್ಯಕರ್ತರು ಚೀಲದಲ್ಲಿ ತಂದಿದ್ದ ಎರಡು ಬೀದಿ ನಾಯಿ ಮರಿಗಳನ್ನು ನೇರವಾಗಿ ಮುಖ್ಯಾಧಿಕಾರಿ ಧೀರಜ್ ಭಾಮ್ರೆ ಅವರ ಮೇಜಿನ ಮೇಲೆಯೇ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಿಗಳು ಟೇಬಲ್ ಮೇಲೆ ಓಡಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಅಧಿಕಾರಿಯ ಮೇಜಿನ ಮೇಲೆ ನೋಟುಗಳ ಹಾರವನ್ನಿಟ್ಟು ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.
ನಿಫಾಡ್ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿದ್ದು, ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ ಹಲವು ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ಸಾರ್ವಜನಿಕರು ನಿರಂತರವಾಗಿ ದೂರು ನೀಡುತ್ತಿದ್ದರೂ ನಗರ ಪಂಚಾಯತ್ ಆಡಳಿತ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣೇಶೋತ್ಸವದ ಸಂದರ್ಭದಲ್ಲೂ ನಾಯಿಗಳ ಕಾಟ ಹೆಚ್ಚಾಗಿದ್ದು, ಪೆಂಡಾಲ್ಗಳಿಗೆ ಬರುವ ಭಕ್ತರು ಭಯದಲ್ಲೇ ಓಡಾಡುವಂತಾಗಿದೆ ಎಂದು ರಂಧವೆ ದೂರಿದ್ದಾರೆ.
ಕೂಡಲೇ ಸಂತಾನಹರಣ ಅಭಿಯಾನ ಆರಂಭಿಸಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಆಡಳಿತ ಕೇವಲ ಟೆಂಡರ್ ಪ್ರಕ್ರಿಯೆಯಲ್ಲೇ ಕಾಲಹರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಮತ್ತೆ ಕಚೇರಿಯೊಳಗೆ ನಾಯಿಗಳನ್ನು ಬಿಟ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.








