Thursday, September 10, 2026
spot_imgspot_img
spot_imgspot_img

‘ನಿಮಿಷ ನ್ಯೂಸ್ ಪುತ್ತೂರು’ ಉದ್ಘಾಟನಾ ಸಮಾರಂಭ-ವಸ್ತುನಿಷ್ಠ ವರದಿ ದೇಶವ್ಯಾಪಿ ಹರಡಲಿ : ಡಾ. ಪಿ.ಎಸ್.‌ ಪ್ರಕಾಶ್

- Advertisement -
- Advertisement -

ಪುತ್ತೂರು: ಸಮಾಜದ ಸಮಯೋಚಿತ ವರದಿ ನೀಡುವ ಉದ್ದೇಶದೊಂದಿಗೆ ಆರಂಭವಾಗಿರುವ ‘ನಿಮಿಷ ನ್ಯೂಸ್ ಪುತ್ತೂರು’ ವಾಹಿನಿಯ ಉದ್ಘಾಟನೆಯು ಸೆಪ್ಟೆಂಬರ್ 09, ಬುಧವಾರ ಬಪ್ಪಳಿಗೆ ಟವರ್ಸ್, ಬೈಪಾಸ್ ರಸ್ತೆ, ಪುತ್ತೂರಿನಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆಗೈದು ಮಾತನಾಡಿದ ಹೊಸದಿಗಂತ ದಿನಪತ್ರಿಕೆಯ ಪ್ರಧಾನ ಸಂಪಾದಕ ಪಿ.ಎಸ್. ಪ್ರಕಾಶ್, ಸುದ್ದಿ ಮಾಧ್ಯಮದಲ್ಲಿ ಸದಾ ಹೊಸತನಗಳು ತುಂಬಿರಬೇಕು. ಪುತ್ತೂರು ಸುದ್ದಿಗಳ ಆಗರ. ಇಲ್ಲಿ ಸತ್ಯ ನ್ಯಾಯದೊಂದಿಗೆ ಮುಂದುವರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜನರಿಗೆ ಅರ್ಥವಾಗುವ ರೀತಿಯಲ್ಲಿ ಸುದ್ದಿ ನೀಡುವುದು ಪತ್ರಕರ್ತನ ಆದ್ಯ ಕರ್ತವ್ಯ. ಈ ಜವಬ್ದಾರಿಯನ್ನು ಪತ್ರಕರ್ತ ಎಂದೂ ಮರೆಯಬಾರದು. ಯುವಶಕ್ತಿ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಮನೆ, ಶಾಲೆ ಮತ್ತು ಸಮಾಜ ಸರಿಯಿರಬೇಕು. ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ಇಂದು ಎಲ್ಲವೂ ಸಿಗುತ್ತಿದೆ. ಹಾಗಾಗಿ ಸಕಾರಾತ್ಮಕ ವಿಷಯಗಳಿಗೆ ಹೆಚ್ಚು ಒತ್ತನ್ನು ನೀಡುವುದು ಎಲ್ಲಾ ನ್ಯೂಸ್ ಚಾನೆಲ್‌ಗಳ‌ ಬಹುದೊಡ್ಡ ಜವಾಬ್ದಾರಿ. ಕ್ಯಾಂಪ್ಕೋದಂತಹ ವಿಶ್ವವಿಖ್ಯಾತ ಸಂಸ್ಥೆ ಪ್ರಾರಂಭವಾಗಿದ್ದು ಪುತ್ತೂರಿನಲ್ಲಿ ಜೊತೆಗೆ ಅನೇಕ ಸಂಘಸಂಸ್ಥೆಗಳಲ್ಲಿ ಉತ್ತಮ ಹೆಸರನ್ನು ಹತ್ತೂರಿನಲ್ಲಿ ಪಡೆಯುವವರು ಪುತ್ತೂರಿಗರು. ಅನೇಕ ಹೊಸತನಗಳಿಗೆ ಹೆಚ್ಚು ಚಾಲನೆ ದೊರೆಯುವುದು ಈ ಊರಿನಲ್ಲಿ. ಇದೇ ಹಾದಿಯಲ್ಲಿ ಇದೀಗ ನಿಮಿಷ ನ್ಯೂಸ್‌ ಬರುತ್ತಿದೆ. ಯಾವುದೇ ಒತ್ತಡಕ್ಕೂ ಮಣಿಯದೇ ಈ ಮಾಧ್ಯಮ ವಿಶ್ವವ್ಯಾಪ್ತಿ ಹೆಸರು ಮಾಡಲಿ ಎಂದರು.

ವೆಬ್‌ಸೈಟ್‌ ಉದ್ಘಾಟಿಸಿದ ಯು.ಆರ್.‌ ಪ್ರಾಪರ್ಟೀಸ್‌ ಮಾಲಕ ಉಜ್ವಲ್‌ ಪ್ರಭು ಮಾತನಾಡಿ ಇಂದು ಕೆಲವೊಂದು ಮಾಧ್ಯಮಗಳು ತಮ್ಮನ್ನು ತಾವು ಮಾರಿಕೊಳ್ಳುವ ಸ್ಥಿತಿಗೆ ತಲುಪುತ್ತಿದೆ. ಬ್ಲಾಕ್‌ಮೇಲ್‌ ಜರ್ನಲಿಸಂ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜದ ಸಮಯೋಚಿತ ವರದಿ ಎಂದ ಉತ್ತಮ ಧ್ಯೇಯವಾಕ್ಯವನ್ನಿಟ್ಟುಕೊಂಡು ನಿಮಿಷ ನ್ಯೂಸ್‌ ಸಮಾಜದ ಮುಂದೆ ಬರುತ್ತಿದೆ. ವಸ್ತುನಿಷ್ಠ ವರದಿಯೊಂದಿಗೆ ಈ ಮಾಧ್ಯಮ ದೇಶವ್ಯಾಪಿ ಹರಡಲಿ ಎಂದರು.

ಅಧ್ಯಕ್ಷತೆ ವಹಿಸಿದ ಪುತ್ತೂರಿನ ಆದರ್ಶ ಆಸ್ಪತ್ರೆಯ ವೈದ್ಯ ಡಾ. ಎಂ.ಕೆ. ಪ್ರಸಾದ್‌ ಮಾತನಾಡಿ ನಾವು ಬಾಲ್ಯದಲ್ಲಿರುವಾಗ ಸುದ್ದಿ ತಿಳಿಯಬೇಕೆಂದರೆ ದಿನಪತ್ರಿಕೆ ನೋಡಬೇಕಾಗಿತ್ತು. ಆದರೆ ಇಂದು ಅಂಗೈಯಲ್ಲೇ ಎಲ್ಲಾ ಮಾಧ್ಯಮಗಳಿವೆ. ಆದರೆ ಇಂದಿನ ಚಾನೆಲ್‌ಗಳು ದಿಕ್ಕು ತಪ್ಪುತ್ತಿವೆ. ನಿಮಿಷ ನ್ಯೂಸ್‌ ಇವೆಲ್ಲವನ್ನು ಮೀರಿ ನಿಲ್ಲುವ ಚಾನೆಲ್‌ ಆಗಬೇಕು. ಸಮಾಜದ ನಕಾರಾತ್ಮಕತೆಗಳಿಗೆ ಧ್ವನಿಯಾಗದೆ ಸಕಾರಾತ್ಮಕತೆಗೆ ಹೆಚ್ಚು ಒತ್ತು ಕೊಡುವಲ್ಲಿ ನಿಮಿಷ ನ್ಯೂಸ್‌ ತೊಡಗಸಿಕೊಳ್ಳುವುದು ಅಗತ್ಯ. ತೆರೆಮರೆಯ ಪ್ರತಿಭೆಗಳನ್ನು ಸಮಾಜದಲ್ಲಿ ಮುಂದೆ ತರುವ ಕೆಲಸಗಳನ್ನು ಮಾಧ್ಯಮಗಳು ಮಾಡಬೇಕು. ಈ ನಿಟ್ಟಿನಲ್ಲಿ ನಿಮಿಷ ನ್ಯೂಸ್‌ ಕೆಲಸ ಮಾಡುತ್ತದೆ ಎಂಬ ನಂಬಿಕೆ ಜನರಲ್ಲಿ ಮೂಡುವಂತಾಗಲಿ ಎಂದರು.

ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಇದರ ಪುತ್ತೂರಿನ ಅಧ್ಯಕ್ಷ ರಾಮದಾಸ್‌ ಶೆಟ್ಟಿ ವಿಟ್ಲ ಮಾತನಾಡಿ, ಸತ್ಯ ಸಂಗತಿಗಳಿಗೆ ಒತ್ತು ನೀಡುವುದು ಪ್ರತಿಯೊಂದು ಮಾಧ್ಯಮದ ಕರ್ತವ್ಯ. ಈ ನಿಟ್ಟಿನಲ್ಲಿ ಬೆಳೆಯುತ್ತಿರುವ ಪುತ್ತೂರಿಗೆ ನಿಮಿಷ ನ್ಯೂಸ್‌ ಶೋಭೆಯನ್ನು ತಂದಿದೆ. ಶೀಘ್ರದಲ್ಲೇ ಈ ಚಾನೆಲ್‌ ಸ್ಯಾಟ್‌ಲೈಟ್‌ನಲ್ಲಿ ಸಿಗುವಂತಾಗಲಿ ಎಂದು ಹಾರೈಸಿದರು.

ವಿಶ್ವ ಹಿಂದೂ ಪರಿಷತ್‌ನ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಶಾರದಾ ಭಜನಾ ಮಂಡಲಿಯ ಅಧ್ಯಕ್ಷ ಸೀತಾರಾಮ ಕೆದಂಬಾಡಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ, ಬಪ್ಪಳಿಗೆ ಟವರ್ಸ್‌ ಮಾಲಕ ಅಮರನಾಥ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭಹಾರೈಸಿದರು.

ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಕುಲಾಲ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನ್ಮಥ ಶೆಟ್ಟಿ ಸ್ವಾಗತಿಸಿ, ವಂದಿಸಿದರು.‌ ರಿಷಿಕಾ ಪ್ರಾರ್ಥಿಸಿ, ಬಾಲಕೃಷ್ಣ ಪೊರ್ದಾಲ್‌ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!