


ಚೆನ್ನೈ: ಟಿವಿಕೆ ಪಕ್ಷದ ಭರವಸೆಗಳಲ್ಲಿ ಒಂದಾದ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ ಯೋಜನೆಯನ್ನು ಜೂ.22ರಿಂದ ಪೂರ್ವಾನ್ವಯ ಆಗುವಂತೆ ಸೆ.15ರಿಂದ ಜಾರಿಗೆ ತರಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರ ನಿರ್ಧರಿಸಿದೆ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಇದು ಅನ್ವಯ ಆಗಲಿದೆ.
ತಮಿಳುನಾಡಿನಲ್ಲಿ ಶಾಶ್ವತವಾಗಿ ವಾಸಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲಾ ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನವಾದ ಜೂನ್ 22 ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ. ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ಸುಮಾರು 13,600 ರೂ. ಮೌಲ್ಯದ 1 ಗ್ರಾಂ ಚಿನ್ನದ ಉಂಗುರವನ್ನು ಶಿಶುಗಳಿಗೆ ನೀಡಲಾಗುತ್ತದೆ. ಈ ಯೋಜನೆಗಾಗಿ ಸರ್ಕಾರವು ವಾರ್ಷಿಕವಾಗಿ 755.83 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ತಮಿಳುನಾಡಿನಲ್ಲಿ ಮಗು ಜನಿಸಿದಾಗ ಮನೆಗೆ ಬರಮಾಡಿಕೊಳ್ಳಲು ಸೋದರ ಮಾವನ ಕಡೆಯಿಂದ ಚಿನ್ನದ ಉಡುಗೊರೆ ನೀಡುವ (ತೈಮಾಮನ್ ಸೀರ್) ಪದ್ಧತಿ ಇದೆ. ಈಗ ಸರ್ಕಾರವೇ ಸಾಂಕೇತಿಕವಾಗಿ ಆ ಸೋದರ ಮಾವನ ಜವಾಬ್ದಾರಿಯನ್ನು ಹೊತ್ತು, ಪ್ರತಿ ಮಗುವಿಗೆ ಪ್ರೀತಿ ಈ ಚಿನ್ನದ ಉಂಗುರವನ್ನು ನೀಡಲು ಮುಂದಾಗಿದೆ.
ಚಿನ್ನದ ಉಂಗುರದ ಆಕರ್ಷಣೆಯಿಂದಾಗಿ ಗ್ರಾಮೀಣ ಹಾಗೂ ಬಡ ಕುಟುಂಬಗಳು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾಲ ಮಾಡುವುದು ತಪ್ಪುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗಳನ್ನು ಉತ್ತೇಜಿಸುವುದು ಮತ್ತು ನವಜಾತ ಶಿಶು ಹಾಗೂ ತಾಯಂದಿರನ್ನು ಗೌರವಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಗಂಡು ಮಗು ಅಥವಾ ಹೆಣ್ಣು ಮಗು ಎಂಬ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಈ ಉಂಗುರ ಸಿಗಲಿದೆ. ಕುಟುಂಬದ ಎಷ್ಟನೇ ಮಗುವಾಗಿದ್ದರೂ (ಮೊದಲ, ಎರಡನೇ ಅಥವಾ ಮೂರನೇ ಮಗು) ಈ ಯೋಜನೆಯ ಲಾಭ ಪಡೆಯಬಹುದು. ಫಲಾನುಭವಿಗಳು ತಮಿಳುನಾಡಿನ ನಿವಾಸಿಗಳಾಗಿರಬೇಕು ಮತ್ತು ಅದಕ್ಕಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ಒದಗಿಸಬೇಕಾಗುತ್ತದೆ.
ತಮಿಳುನಾಡು ನಿವಾಸಿಯಾಗಿದ್ದರೂ, ಹೆರಿಗೆಯು ಯಾವುದೇ ಖಾಸಗಿ ನರ್ಸಿಂಗ್ ಹೋಮ್ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ನಡೆದರೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಯೋಜನೆಯಡಿ ಕೇವಲ 1 ಗ್ರಾಂ ತೂಕದ ಅಧಿಕೃತ ಚಿನ್ನದ ಉಂಗುರವನ್ನು ಮಾತ್ರ ನೀಡಲಾಗುತ್ತದೆ. ಅದರ ಬದಲಿಗೆ ನಗದು ಹಣವನ್ನು ಪಡೆಯಲು ಯಾವುದೇ ಅವಕಾಶ ಇರುವುದಿಲ್ಲ
ತಮಿಳುನಾಡಿನಲ್ಲಿ ವರ್ಷಕ್ಕೆ 7.8 ಲಕ್ಷ ಮಕ್ಕಳ ಜನನವಾಗುತ್ತಿದ್ದು, ಈ ಪೈಕಿ 4.2 ಲಕ್ಷ ಜನನನ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸರಾಸರಿ 63 ಸಾವಿರ ರೂ. ಖರ್ಚಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ 1,300 ರೂ. ಆಗುತ್ತದೆ.








