


ಬಳ್ಳಾರಿ: ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಪ್ರವಾಸಕ್ಕೆಂದು ತೆರಳಿದ್ದ ಬಳ್ಳಾರಿ ಮೂಲದ 35 ಪ್ರವಾಸಿಗರು ದುಬೈನಲ್ಲಿ ಸಿಲುಕಿ ಪರದಾಡುವಂತಾಗಿದೆ.
35 ಪ್ರವಾಸಿಗರ ಪೈಕಿ ಒಂದೇ ಕುಟುಂಬದ 15 ಜನರು ದುಬೈನಲ್ಲಿ ಲಾಕ್ ಆಗಿದ್ದಾರೆ. ಯಾಳ್ಪಿ ಪಂಪನಗೌಡ ಕುಟುಂಬದ 15 ಜನ ಸೇರಿ ಬಳ್ಳಾರಿಯಿಂದ 35 ಜನ ದುಬೈ ಪ್ರವಾಸಕ್ಕೆ ತೆರಳಿದ್ದರು. ಇರಾನ್-ಇಸ್ರೇಲ್ ಯುದ್ಧ ಹಿನ್ನೆಲೆ ವಿಮಾನ ಹಾರಾಟ ವ್ಯತ್ಯಯದಿಂದಾಗಿ 35 ಪ್ರವಾಸಿಗರು ದುಬೈನಲ್ಲೇ ಉಳಿದುಕೊಂಡಿದ್ದಾರೆ. ದುಬೈನಲ್ಲಿ ಸಿಲುಕಿರುವ ಪ್ರವಾಸಿಗರು ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಾವುದೇ ಆತಂಕ ಇಲ್ಲ, ನಾವು ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರ ಜೊತೆ ಪ್ರವಾಸಿಗರು ಹೇಳಿದ್ದಾರೆ ಎನ್ನಲಾಗಿದೆ.
ಫೆ.24ರಂದು ಚಿತ್ರದುರ್ಗದ 15 ಮಂದಿ, ಬಳ್ಳಾರಿಯ 35 ಮಂದಿ ಸೇರಿ 50 ಜನರ ತಂಡ ಐದು ದಿನಗಳ ದುಬೈ ಪ್ರವಾಸಕ್ಕೆಂದು ತೆರಳಿದ್ದರು. ಫೆ.28ರಂದು ರಾತ್ರಿ 9 ಗಂಟೆಯ ವಿಮಾನದ ಮೂಲಕ ವಾಪಸ್ ಭಾರತಕ್ಕೆ ಬರಬೇಕಿತ್ತು. ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬರುವಷ್ಟರಲ್ಲಿ ಯುದ್ಧ ಆರಂಭವಾಗಿದೆ. 3 ಗಂಟೆಯೊಳಗೆ ಬಂದಿದ್ದರೆ ಏರ್ಪೋರ್ಟ್ ತಲುಪಬಹುದಿತ್ತು. ಆದರೆ ಮೂರು ಗಂಟೆಯ ನಂತರ ಬಂದ ಹಿನ್ನೆಲೆ ಏರ್‌ಪೋರ್ಟ್ ಸಿಬ್ಬಂದಿ ವಿಮಾನ ನಿಲ್ದಾಣದ ಒಳಗೆ ಬಿಡಲಿಲ್ಲ. ಇದೀಗ ಹಣವೂ ಇಲ್ಲದೇ ಬಳ್ಳಾರಿ ಮೂಲದ ಪ್ರವಾಸಿಗರು ಪರದಾಡುದುತ್ತಿದ್ದು, ಕೂಡಲೇ ನಮ್ಮನ್ನು ರಕ್ಷಿಸಿ ಎಂದು ಶಾಸಕ ಭರತ್ ರೆಡ್ಡಿ ಮತ್ತು ನಾಗೇಂದ್ರ ಅವರಿಗೆ ಮನವಿ ಮಾಡಿದ್ದಾರೆ. ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುವಂತೆ ಶಾಸಕ ಬಿ ನಾಗೇಂದ್ರ ಸಲಹೆ ನೀಡಿದ್ದಾರೆ. ಇನ್ನು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿ ಬಳ್ಳಾರಿ ಕ್ಷೇತ್ರದ ಜನರ ಬಗ್ಗೆ ಶಾಸಕ ಬಿ.ನಾಗೇಂದ್ರ ಮಾಹಿತಿ ನೀಡಿದ್ದಾರೆ.
ನಾಗೇಂದ್ರ ಜೊತೆ ಮಾತನಾಡಿ ಘಟನೆಯ ವಿವರ ಪಡೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ದುಬೈನಲ್ಲಿ ಬಳ್ಳಾರಿ ನಗರ ಶಾಸಕ ನಾರಾ.ಭರತ್ ರೆಡ್ಡಿ ಕೂಡ ಸಿಲುಕಿಕೊಂಡಿದ್ದು, ಅವರು ಉಳಿದುಕೊಂಡ ಹೋಟೆಲ್‌ನ ಸನಿಹದಲ್ಲೇ ಮಿಸೈಲ್ ದಾಳಿ ನಡೆದಿದೆ. ಸದ್ಯ ಭರತ್ ರೆಡ್ಡಿ ಹೋಟೆಲ್‌ನಲ್ಲಿ ಸೇಫಾಗಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








