




ಆನೇಕಲ್: ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ಅರಸೀಕೆರೆ ಮೂಲದ ಕರಡಿಹಳ್ಳಿ ಗ್ರಾಮದ ಹರ್ಷಿತಾ(18) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಹಾಸ್ಟೆಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಇದು ಆತ್ಮಹತ್ಯೆಯೋ? ಕೊಲೆಯೋ ಎನ್ನುವುದು ತಿಳಿದು ಬರಬೇಕಿದೆ.
ಹರ್ಷಿತ ಪಿಯುಸಿ ಹಾಗೂ CET ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಮೆರಿಟ್‌ನಲ್ಲಿ ಎಂಜಿನಿಯರಿಂಗ್ ಸೀಟ್ ಪಡೆದಿದ್ದಳು. ಹಾಸನ ಮೂಲದ ಹರ್ಷಿತಾ ಮೆರೀಟ್ ಸೀಟ್‌ನಲ್ಲಿ ಎಂಜಿನಿಯರಿಂಗ್ ಸೀಟ್ ಪಡೆದಿದ್ದಳು. ನಿನ್ನೆ ಸಂಜೆ ಸಹೋದರನ ಫೋನ್‌ಗೆ ಕರೆ ಮಾಡಿ ಎಂದಿನಂತೆ ಕುಟುಂಬಸ್ಥರ ಜೊತೆ ಮಾತಾಡಿದ್ದಾಳೆ. ನಂತರ ಹಾಸ್ಟೆಲ್‌ನಲ್ಲಿ ನಡೆದ ಸ್ನೇಹಿತೆಯ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿ ಕೇಕ್ ಕಟ್ ಮಾಡಿದ್ದಾರೆ. ರಾತ್ರಿ 10:30 ರ ಸುಮಾರಿಗೆ ತನ್ನ ಹಾಸ್ಟೆಲ್ ರೂಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ 11:30 ರ ಸುಮಾರಿಗೆ ಹರ್ಷಿತಾ ಕುಟುಂಬಸ್ಥರಿಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮೃತ ಹರ್ಷಿತ ಮೊಬೈಲ್ ಸೀಜ್ ಮಾಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.








