ಉಪ್ಪಿನಂಗಡಿ ಸಂಗಮ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ–ಮಹಾಕಾಳಿ ದೇವಸ್ಥಾನದಿಂದ ಏಕಾದಶ ಕಲಶ ತೀರ್ಥ ರಥ ಹಾಗೂ ಹಸಿರುವಾಣಿ ಮೆರವಣಿಗೆ




ಉಪ್ಪಿನಂಗಡಿ: ಬಂಟ್ವಾಳ ತಾಲೂಕಿನ ಕರೋಪಾಡಿ – ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ನಡೆಯಲಿದೆ. ಬ್ರಹ್ಮಕಲಶಾಭಿಷೇಕವು ನೇಪಾಳದ ಗಂಡಕಿ, ಗಂಗಾ, ಯಮುನಾ, ಸರಸ್ವತಿ ಇತ್ಯಾದಿ ಅಖಂಡ ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ ನಡೆಯಲಿದೆ.
ಮಾರ್ಚ್ 30ರಂದು ಏಕಾದಶ ಕಲಶ ತೀರ್ಥ ರಥ ಹಾಗೂ ಹಸಿರುವಾಣಿ ಮೆರವಣಿಗೆ ನಡೆಯಲಿದ್ದು, ಇದರ ಆರಂಭವು ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ–ಮಹಾಕಾಳಿ ದೇವಸ್ಥಾನದಿಂದ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, 10.30ಕ್ಕೆ ಸಾಮೂಹಿಕ ಪ್ರಾರ್ಥನೆ ಹಾಗೂ ಸಂಗಮ ತೀರ್ಥ ಸಂಗ್ರಹ ಕಾರ್ಯಕ್ರಮ ನಡೆಯಲಿದೆ. ನಂತರ 11 ಗಂಟೆಗೆ ಸಾಧು-ಸಂತರ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.








