Tuesday, April 30, 2024
spot_imgspot_img
spot_imgspot_img

ಮುನ್ನಡೆಯುವ ದಾರಿಗೆ ಬಲವು ನಮ್ಮೊಳಗಿದೆ

- Advertisement -G L Acharya panikkar
- Advertisement -

ಮನಸ್ಸು ಹಾಗೇ, ಕೆಲವೊಮ್ಮೆ ಅದು ತಗೋಬೇಕು ; ಇದು ಇನ್ನೂ ಒಂದು ಇರಬೇಕು, ಅದು ಬೇಡವೇ ಬೇಡ ಸುಮ್ಮನೆ ಹಣದಂಡ! ಇದು ಚೆನ್ನಾಗಿದೆಯೆಂದೋ ಅಥವಾ ಇನ್ನೂ ಒಂದೆರಡು ಹಾಕಿದ್ರೆ ಒಳ್ಳೆಯದಾಗುತ್ತಿತ್ತು . ಆದರೆ ಹಾಕಲೇ ಇಲ್ಲ ಸೀದಾ ಹೋಗ್ಬಿಟ್ರು, ಅನ್ನುವ ಮಾತುಗಳು ನರನ ನಾಲಿಗೆಯ ದಿನನಿತ್ಯದ ಕಂಠ ಶೋಷಣೆಯಾಗಿರುತ್ತವೆ. ಯಾಕೆ ಹಾಗಾಗಬೇಕು? ಯಾವತ್ತೂ ಕಟ್ಟಿಕೊಟ್ಟ ಬುತ್ತಿಯ ತರ ಇರಬಾರದು. ಇತರರನ್ನು ನೋಡಿ ಕರುಬುವುದು ಅಥವಾ ಅಳತೆ ಮಾಡುವುದು ಖಂಡಿತಾ ಸರಿಯಲ್ಲ. ಪ್ರಾಣಿಗಳು ಆಸ್ತಿ ಅಂತಸ್ತಿಗೋಸ್ಕರ ಎಂದೂ ತಮ್ಮ ಒಡನಾಡಿಗಳನ್ನು ದೂರ ಮಾಡುವುದಿಲ್ಲ, ದೂರುವುದೂ ಇಲ್ಲ. ಮನುಷ್ಯ ಪ್ರಾಣಿಗಳು ಮಾತ್ರ ತಮ್ಮ ಹಕ್ಕಿನದು ದಕ್ಕಿದ್ರೆ ಸರಿ, ಇಲ್ಲಾಂದ್ರೆ ಇನ್ನೊಬ್ಬ ತಿಂತಾನೆ ಆತನ ಹೆಂಡ್ತಿ ಮಕ್ಕಳು ಸುಖವಾಗಿರ್ತಾರೆ ನಮಗೆ ಯಾಕೆ ಕೊಡಲ್ಲ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಅಥವಾ ತಂದೆ ತಾಯಿಗೆ ಆತ ಮಾತ್ರ ಮಗನಾ? ನಾವು ಯಾರು ಅಲ್ವಾ ಎಂದು ಅಣ್ಣ ತಮ್ಮಂದಿರು ಅಥವಾ ಅಕ್ಕ ತಂಗಿಯರು ಪಕ್ಷಪಾತಿಯಾಗಿ ವರ್ತಿಸುತ್ತಿರುತ್ತಾರೆ. ಹಾಗಾಗದೇ ಇರಲು ಅದಕ್ಕೆ ಬೇಕಾಗಿರುವುದು ಒಳ್ಳೆಯ ಮನಸ್ಸು ಹಾಗೂ ಒಳ್ಳೆಯ ಭಾವನೆ. ಒಳ್ಳೆಯ ಮನಸ್ಸಿನವರಿಗೆ ಕಷ್ಟಗಳೇ ಸಿಗುವಂತದ್ದು. ಆದರೂ ಬಾಳೆಹಣ್ಣು ಸಿಪ್ಪೆ ಸುಲಿದು ತಿಂದಷ್ಟೇ ಸುಲಭವಾಗುವುದು. ಕೂತು ತಿಂದವ ರಾಜನಾಗಿ ಕಷ್ಟಪಟ್ಟು ದುಡಿದವ ಬೈರಾಗಿಯಂತಾಗಿ ಬಿಡುತ್ತಾನೆ.

ಜೀವನದಲ್ಲಿ ಏನೇ ಸೌಕರ್ಯಗಳಿರಲಿ ಇಲ್ಲದಿರಲಿ ಅದೆಲ್ಲವನ್ನು ಸಾವಧಾನವಾಗಿ ನಿಭಾಯಿಸುವ ಮನಸ್ಸೊಂದು ಮುಖ್ಯವಾಗಿ ಇರಲೇಬೇಕು. ಆಗ ಯಾವುದೇ ಅಡೆತಡೆಗಳಿದ್ದರೂ ಏನೂ ಮಾಡಲಾಗದು. ಮೂರು ದಿನ ಇರುವ ಈ ಬದುಕಲ್ಲಿ ಹತ್ತಿರದವರೇ ತುಂಬಾ ನೋವು ಕೊಡುವವರೂ ಆಗಿರುತ್ತಾರೆ ಹಾಗೆಯೇ ಸಂತಸ ನೀಡುವವರೂ ಆಗಿರುತ್ತಾರೆ. ಅವರಿಗಾಗಿ ಪಡುವ ಪಾಡು ಆ ದೇವರಿಗೇ ಪ್ರೀತಿ. ಹಾಗಾಗಿಯೇ ಜೀವನದಲ್ಲಿ ಯಾರನ್ನು ಅಷ್ಟಾಗಿ ಹಚ್ಚಿಕೊಳ್ಳಬಾರದು . ತುಂಬಾ ಹಚ್ಚಿಕೊಂಡಲ್ಲಿ ನೋವು ತಾನಾಗಿ ಉದ್ಭವವಾಗುತ್ತದೆ. ಹಾಗೆಂದು ಸಂಸಾರದೊಳಗೆ ಈಜದೇ ಪಲಾಯನ ಗೈಯಲು ಸಾಧ್ಯವಾಗುವುದೇ ಇಲ್ಲ. ನಿರಾಸೆಯ ಕೂಪಕ್ಕೆ ಇಳಿದ ಮನಸ್ಸು ಮತ್ತೆ ಎಲ್ಲವನ್ನೂ ತಿರಸ್ಕಾರ ಮಾಡುತ್ತಾ ಹೋಗುತ್ತದೆ. ಮನಸ್ಸು ಗೆಲುವಾಗಲು ಸುಂದರವಾದ ಸುಸ್ಪಷ್ಟ ದಾರಿಯನ್ನು ಕ್ರಮಿಸುತ್ತಿರಬೇಕು. ನಿಂತಲ್ಲೇ ನಿಲ್ಲದೇ ಅಥವಾ ಕುಳಿತಲ್ಲೇ ಕುಳಿತುಕೊಳ್ಳದೇ ಕೊನೇ ಪಕ್ಷ ನಡೆಯುವ ಕಾರ್ಯವನ್ನಾದರೂ ಮೈಗೂಡಿಸಿಕೊಳ್ಳಬೇಕು. ಜಡತ್ವ ಹಿಡಿದ ಮನಸ್ಸು ಮತ್ತೆ ಕಾರ್ಯರೂಪಕ್ಕೆ ಇಳಿಯಲು ಕೆಲವು ಸಮಯಗಳಾದರೂ ಬೇಕೇ ಬೇಕು.

ಗಳಿಸಿದ ಸಂಪತ್ತಿಗೆ ಮೂರು ದಾರಿಗಳು ಇರುತ್ತವೆ. ಜೀವನದಲ್ಲಿ ಕಷ್ಟಪಟ್ಟು ಮಾಡಿದ ಸಂಪತ್ತು ದೇವರಿಗೆ ಅಥವಾ ಧರ್ಮ ಕಾರ್ಯಕ್ಕೆ ಹೋಗಬಾರದು ನಮ್ಮವರಿಗೇ ಸೇರಬೇಕು ಅಂತ ಏನಾದರೂ ಅನ್ಕೊಂಡು ಅವರಿವರ ಪ್ರೀತಿಗಾಗಿ ಕರ್ಮವನ್ನು ಮಾಡಿದರೆ ದೇವರು ಹಾಗೆ ಮಾಡಲು ಬಿಡುವುದಿಲ್ಲ. ನಾಲ್ಕನೆಯ ದಾರಿ ಎಂದಿಗೂ ಇರುವುದಿಲ್ಲ. ಸ್ವತಃ ಅವರವರೇ ತಿನ್ನಬೇಕು, ಇಲ್ಲ ಯಾರಿಗಾದರೂ ಕೈಯೆತ್ತಿ ಕೊಡಬೇಕು. ಹಾಗೂ ಆಗಲಿಲ್ಲವೆಂದಾದರೆ ಕಳೆದುಕೊಳ್ಳಲೇಬೇಕು. ಇದಲ್ಲದೇ ಬೇರೆ ಏನು ಪರಿಹಾರವೇ ಇಲ್ಲ. ಭೋಗ- ದಾನ -ನಾಶ. ಅವರು ದುಡಿದು ಅವರವರೇ ತಿನ್ನುವುದು ಭೋಗ ಎನಿಸಿಕೊಳ್ಳುತ್ತದೆ. ಜೀವನ ಪರ್ಯಂತ ದುಡ್ಡು ಸಂಪಾದನೆ ಮಾಡಿದರೆ ಅದನ್ನು ಅನುಭೋಗಿಸಲು ಅವರವರಿಗೆ ಕಷ್ಟ ಸಾಧ್ಯ. ತಂದದ್ದನ್ನು ಎಲ್ಲವನ್ನೂ ತಿನ್ನುವುದು ಕನಸಿನ ಮಾತು. ಮರಳಿನೀಡಲೆಂದು ದೇವರಿಗೆ ನೀಡಲು ನಮಗೆ ಕೊಡುವುದು. ಎಲ್ಲಿಂದ ಬಂತೋ ಅದನ್ನು ಅಲ್ಲಿಗೇ ಕಳಿಸಿಕೊಡುವುದು ದೊಡ್ಡ ಪ್ರಕೃತಿಯ ನಿಯಮವೇ ಆಗಿದೆ . ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಂಪಾದನೆ ಮಾಡುವಾಗ ಎರಡೂ ಕೈಯಲ್ಲಿ ದುಡಿಯಬೇಕು. ಆದರೆ ಇತರರಿಗೂ ಬಾಳಲನುವು ಮಾಡಿಕೊಡಬೇಕು. ಬೇಕಾಗಿದ್ದಕ್ಕಿಂತಲೂ ಹೆಚ್ಚು ಸಂಪಾದನೆ ಮಾಡಿದರೆ ಅದು ಭಗವಂತನ ಸಂಪತ್ತನ್ನು ಕಳ್ಳತನ ಮಾಡಿದಂತೆ ಎಂದು ದಾರ್ಶನಿಕರು ಹೇಳುತ್ತಾರೆ . ದೇವರಿಗೆಂದು ನಾವು ಎತ್ತಿಡದೇ ಇದ್ದರೆ ಅವನು ನಮ್ಮಿಂದ ಕೊಟ್ಟದ್ದನ್ನು ವಾಪಸ್ಸು ಎತ್ತಿಕೊಳ್ಳುತ್ತಾನೆ. ಕೆಲವರು ಮಾತಾಡುವುದು ಕೇಳಿರಬಹುದು, ಅವರ ಅಪ್ಪ ತುಂಬಾ ಸಂಪಾದನೆ ಮಾಡಿ ಬೇಕಾದಷ್ಟು ಮಾಡಿಟ್ಟಿದ್ದರು, ಆದರೆ ಮಗ ಎಲ್ಲವನ್ನೂ ಕಳ್ಕೊಂಡುಬಿಟ್ಟ. ಅಲ್ಲಿ ಮಗ ಕಳ್ಕೊಳ್ಳುವುದಲ್ಲ, ದೇವರು ಕಳುಹಿಸುವುದು. ದೇವರು ಅವನ ಉಪಭೋಗಕ್ಕೆ ಬಾರದ ಹಾಗೆ ನೋಡಿಕೊಳ್ಳುವುದು. ದೇವರಿಗೆಂತ ಇಟ್ಟಿದ್ರೆ ದೇವರು ನಿಂಗ್ಯಾಕೆ ನೀನು ಹೋಗೋ ನಿನ್ನ ಮಗನನ್ನ ನಾನು ನೋಡ್ಕೋತೀನಿ ಎನ್ನುತ್ತಾನೆ.

ದೇವರ ಮೇಲೆ ನಂಬಿಕೆ ಇರಿಸಿ ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿಯೇ ನೀಡುತ್ತಾನೆ. ದೇವರನ್ನುತ್ತಾನೆ ನನಗೆ ಕೊಡು ನೀನು, ನಿನಗೆ ನಾನು ಕೊಡುವೆ. ಹೀಗಿರುವಾಗ ದೇವರು ಕೊಟ್ಟ ಹಾಗೆ ಕೊಡೋರು ಈ ಜಗತ್ತಲ್ಲಿ ಯಾರೂ ಇಲ್ಲ. ಹಾಗಾಗಿ ದೇವರಿಗೆ ಪ್ರಿಯವಾದ ಭಜನೆ, ಸತ್ಸಂಗ ದಿನವೂ ನಡೆಯುತ್ತಿರಲಿ.

ಭಾರತೀಯ ಶಿಕ್ಷಣ ಭಾರತೀಕರಣದಂತೆ ಆಗಲಿ. ಗದ್ದೆಯಲ್ಲಿ ಚೆನ್ನಾಗಿ ಬೆಳೆ ಬರಬೇಕಾದರೆ ಗದ್ದೆಗೆ ಮೊದಲು ಬೇಲಿಕಟ್ಟಬೇಕು. ಕಷ್ಟದ ಸಂದರ್ಭದಲ್ಲಿ ಕಂಗಾಲಾಗಿ ಮನಸ್ಸು ಕ್ಷೋಭೆಗೊಳ್ಳುತ್ತದೆ. ಈ ನಮ್ಮ ತಾಯಿನಾಡು ಭಾರತಾಂಬೆಯ ಮಡಿಲಲ್ಲಿ ಘನತೆಯಿಂದ ಬದುಕಬೇಕು. ಸತ್ತರೆ ವೀರ ಸ್ವರ್ಗ ಸಿಕ್ಕುವ ಆದರ್ಶವನ್ನು ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ, ಧರ್ಮಕ್ಕಾಗಿ ಒಂದು ಮುಖ್ಯ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಪುಣ್ಯ ಶಾಲೆ, ಧರ್ಮಶಾಲೆ ಇದ್ದು ನಡೆಸಬೇಕು. ಹಿಂದಿನ ವೇದ ಪಾಠಗಳು, ಮೌಲ್ಯಗಳು, ಸಂಸ್ಕಾರಯುತ ಜೀವನ ಶೈಲಿಯಂತಹ ಶಕ್ತಿ ಸಾಮರ್ಥ್ಯಗಳು ಭಾರತದಲ್ಲಿವೆ. ಈ ಪ್ರಪಂಚದಲ್ಲಿ ಸೂರ್ಯನ ಬೆಳಕು, ವಿಶ್ರಾಂತಿ, ವ್ಯಾಯಾಮ, ಮಿತ ಆಹಾರ, ಆತ್ಮಸ್ಥೈರ್ಯ ಮತ್ತು ಸ್ನೇಹಿತರೆಂಬ ಅತ್ಯುತ್ತಮವಾದ ಆರು ವೈದ್ಯರುಗಳು ನಮ್ಮಲ್ಲಿ ನವ ಚೈತನ್ಯವನ್ನು ದಿನವೂ ಹರಿಸಬಲ್ಲವರಾಗಿದ್ದಾರೆ. ಅದನ್ನು ಅನುಭವಿಸಿಕೊಳ್ಳುತ್ತಾ ದಿನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗ ಮುನ್ನಡೆಯುವ ದಾರಿಗೆ ಬಲವು ತಾನಾಗಿ ಬಂದೊದಗುತ್ತದೆ. ಮುನ್ನಡೆಯುವ ದಾರಿಗೆ ಬಲವು ನಮ್ಮೊಳಗೇ ಇದೆ. ಆವಿಷ್ಕಾರ ಮಾಡಿಕೊಳ್ಳುವ ಬುದ್ಧಿ ಬೆಳೆಸಿಕೊಳ್ಳಬೇಕು ಅಷ್ಟೆ.

✍️ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಹವ್ಯಾಸಿ ಬರಹಗಾರರು.
ಮುಕ್ರಂಪಾಡಿ ದರ್ಬೆ ಪುತ್ತೂರು ದ ಕ 574202

- Advertisement -

Related news

error: Content is protected !!