Saturday, May 18, 2024
spot_imgspot_img
spot_imgspot_img

ವಿಟ್ಲ: ಎಸ್ಸಾರ್ ಪೆಟ್ರೋಲ್ ಬಂಕ್ ನ ದರೋಡೆ ಪ್ರಕರಣ-ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು..!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಜನವರಿ 24 ತಡರಾತ್ರಿ ಕಳ್ಳರು ನುಗ್ಗಿ ದರೋಡೆ ನಡೆಸಿದ್ದರು. ಬಂಕ್ ನ ಕಚೇರಿಯ ಬೀಗ ಒಡೆದು ನುಗ್ಗಿದ ದರೋಡೆ ಕೋರರು ಕಂಪ್ಯೂಟರ್ ಮತ್ತು ಸಿಸಿ ಕ್ಯಾಮೆರಾ ಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ದೋಚಿದ್ದರು.

ಕಚೇರಿಯ ಎಲ್ಲಾ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿ, ಸುಮಾರು 2 ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಇದೀಗ ವಿಟ್ಲ ಪೊಲೀಸರು ಖದೀಮರನ್ನು ಹಿಡಿದು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಸಾರ್ ಪೆಟ್ರೋಲ್ ಬಂಕ್ ನಿಂದ ಕಳವಾದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರ ಜಾಡು ಹಿಡಿದು ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ ನಾಗರಾಜ್ ಮತ್ತು ವಿಟ್ಲ ಪಿ ಎಸ್ ಐ ವಿನೋದ್ ರೆಡ್ಡಿ ತಂಡ ಯಶಸ್ವಿಯಾಗಿದ್ದಾರೆ.

ಎಸ್ಸಾರ್ ಸಂಸ್ಥೆಯ ಮಾಲಕರಾದ ಮೋಹನ್ ಕೆ .ಎಸ್ ಉರಿಮಜಲು ಇವರಿಗೆ ಸೇರಿದ ಪರವಾನಿಗೆ ಇದ್ದ ರಿವಾಲ್ವರ್ ನ ಸುಮಾರು14 ಸಜೀವ ಗುಂಡುಗಳನ್ನು ಕಳ್ಳರು ದೋಚಿದ್ದರು. ಅದನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿಗಳಾದ ಸಜಿಪ ಗ್ರಾಮದ ಫಾರೂಕ್ ಯಾನೆ ಉಮ್ಮರ್ ಫಾರೂಕ್ ,ಮಂಗಳೂರು ಬೆಂಗ್ರೆ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಸರತ್ ಯಾನೆ ಕರೂ,ಹಫೀಝ್ ಯಾನೆ ರಫೀಝ್ ಯಾನೆ ಅಪ್ಪಿ ಮತ್ತು ಇಬ್ರಾಹಿಂ ಇವರ ಮೇಲೆ ಪ್ರಕರಣ ದಾಖಲಾಗಿದೆ.


ಪ್ರಕರಣಕ್ಕೆ ರೋಚಕ ತಿರುವು:
ಈ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳಿಗ್ಗೆ 6 ಗಂಟೆಗೆ ಆರೋಪಿಗಳಿರುವ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿಟ್ಲ ಪಿಎಸ್ಐ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ಆರೋಪಿಗಳಿಗೆ ಹೊಂಚು ಹಾಕುತ್ತಿದ್ದಾಗ ಕದ್ದ 14 ಸಜೀವ ಗುಂಡುಗಳನ್ನು ಮಾರಾಟಕ್ಕೆ ಹೊರಟಿದ್ದ ವೇಳೆ ಮೋಟಾರ್ ಸೈಕಲ್ ನಲ್ಲಿ ಬಂದಿದ್ದ ಆರೋಪಿಗಳಾದ ಫಾರೂಕ್ ಮತ್ತು ಮಹಮ್ಮದ್ ಸಫ್ವಾನ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆರೋಪಿಗಳನ್ನು ಠಾಣೆಗೆ ತಂದು ವಿಚಾರಣೆ ನಡೆಸಿದಾಗ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು ಸಿನಿಮೀಯ ಮಾದರಿಯಲ್ಲಿ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಕದ್ದ ಬೈಕ್ ನಲ್ಲಿ ಆರೋಪಿಗಳಿಂದ ಸರಣಿ ಕಳ್ಳತನ:
ಆರೋಪಿಗಳಾದ ಫಾರೂಕ್, ಸಫ್ವಾನ್,ಹಫೀಝ್ ಜ.22 ರಂದು ಮಂಗಳೂರು ತಾಲೂಕು ನೀರುಮಾರ್ಗದ ಮಾನೂರಿನಿಂದ ಪಲ್ಸರ್ ಬೈಕ್ ಕಳ್ಳತನ ಮಾಡಿದ್ದರು. ಕದ್ದ ಬೈಕ್ ನಲ್ಲಿ ಬಂಟ್ವಾಳ ತಾಲೂಕಿನ ವಗ್ಗ ರಾಜೇಶ್ ಬಾರಿಗೆ ಬಂದು ನಗದು ಮತ್ತು ಇತರ ಸೊತ್ತುಗಳನ್ನು ದೋಚಿರುತ್ತಾರೆ. ಅದೇ ದಿನ ರಾತ್ರಿ ನಾವೂರಿನ ಚರ್ಚ್ ಗೆ ನುಗ್ಗಿ 5 ಕಾಣಿಕೆ ಹುಂಡಿಗಳನ್ನು ಹೊಡೆದಿರುತ್ತಾರೆ.

ಜ.23 ರಂದು ಅದೇ ಕದ್ದ ಬೈಕಿನಲ್ಲಿ ಮೂವರು ಮಂಗಳೂರು ಬೊಂಡಂತಿಲ ಸಹಕಾರಿ ಬ್ಯಾಂಕಿನ ಬೀಗ ಹೊಡೆದು ನುಗ್ಗಿ ಅಲ್ಲಿನ ಲಾಕರ್ ಓಪನ್ ಆಗದೆ ಇದ್ದಾಗ, ಅಲ್ಲಿದ್ದ ಸಿಸಿಟಿವಿ ಡಿವಿಆರ್ ನ್ನು ದೋಚಿರುತ್ತಾರೆ. ಕದ್ದ ಡಿವಿಆರ್ ನ್ನು ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲುವಿನಲ್ಲಿ ಬಿಸಾಕಿರುತ್ತಾರೆ.

ಜ.24 ರಂದು ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ನುಗ್ಗಿರುತ್ತಾರೆ. ಅಲ್ಲಿಂದ ಹೊಸಂಗಡಿಗೆ ಬಂದು ಹಿಲ್ ಸೈಡ್ ಹಾಲ್ ನ ಹಿಂಬದಿ ಮನೆಯಿಂದ ಮತ್ತೊಂದು ಪಲ್ಸರ್ ಬೈಕನ್ನು ಎಗರಿಸಿರುತ್ತಾರೆ. ಅದನ್ನು ಸಾಲೆತ್ತೂರು ಕೊಡಂಗೆಯಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ.

ಈ ಕೃತ್ಯದ ಪ್ರಮುಖ ಆರೋಪಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ನ ಮೇಲೆ ಬಂಟ್ವಾಳ ಗ್ರಾಮಾಂತರ ಮತ್ತು ಬಂಟ್ವಾಳ ನಗರ, ಉಪ್ಪಿನಂಗಡಿ, ಮಂಗಳೂರು ಗ್ರಾಮಾಂತರಗಳಲ್ಲಿ ದಸ್ತಗಿರಿ ಆಗಲು ಬಾಕಿ ಇರುವ 9 ಮೊಕದ್ದಮೆಗಳು ಮತ್ತು ಕಡಬ, ಕೊಣಾಜೆ, ಬಜ್ಪೆ ಠಾಣೆಗಳಲ್ಲಿ ದಸ್ತಗಿರಿ ಆಗಿರುವ 25 ಮೊಕದ್ದಮೆಗಳು ಸೇರಿ ಒಟ್ಟು 30 ಕ್ಕಿಂತಲೂ ಹೆಚ್ಚು ಪ್ರಕರಣಗಳ ಆರೋಪಿಯಾಗಿರುತ್ತಾನೆ.

ಎರಡನೇ ಆರೋಪಿ ಮಹಮ್ಮದ್ ಸಫ್ವಾನ್ ಈತನ ಮೇಲೆ ಪಣಂಬೂರು, ಬಂದರು ಠಾಣೆ ವಿಟ್ಲ ಠಾಣೆ, ಬಂಟ್ವಾಳ ಗ್ರಾಮಾಂತರ, ಮಂಗಳೂರು ಗ್ರಾಮಾಂತರ ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಮೂರನೇ ಆರೋಪಿ ಹಫಿಜ್ ಈತನ ಮೇಲೆ ಬಂಟ್ವಾಳದ ಸುರಭಿ ಬಾರ್ ನಲ್ಲಿ ಕಳ್ಳತನದ ಕೇಸು ದಾಖಲಾಗಿದೆ.

ಆರೋಪಿಗಳು ಕದ್ದ ಎಲ್ಲಾ ಡಿವಿಆರ್ ಗಳನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳು ಉರಿಮಜಲು ಪೆಟ್ರೋಲ್ ಬಂಕ್ ನಲ್ಲಿ ಕದ್ದ ಡಿವಿಆರ್ ನ್ನು ಕೊಡಂಗಾಯಿ ಹೊಳೆಗೆ ಎಸೆದಿರುತ್ತಾರೆ. ಬೊಂಡಂತಿಲ ಸಹಕಾರಿ ಬ್ಯಾಂಕಿನಲ್ಲಿ ಕದ್ದ ಡಿವಿಆರ್ ನ್ನು ಬ್ರಹ್ಮರಕೂಟ್ಲುವಿನಲ್ಲಿ ಬಿಸಾಡಿರುತ್ತಾರೆ.

ಆರೋಪಿಗಳಿಂದ 2 ಬಜಾಜ್ ಪಲ್ಸರ್ ಬೈಕ್, ಕೃತ್ಯಕ್ಕೆ ಬಳಸಿದ 2 ಆಯುಧ, ಸಜೀವ ಗುಂಡುಗಳು, 4 ಸಿಸಿ ಕ್ಯಾಮರದ ಡಿವಿಆರ್ ಹಾಗೂ ಲಕ್ಷಾಂತರ ರೂ. ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖಆರೋಪಿ ಫಾರೂಕ್ ತನ್ನ ತಂದೆ ಇಬ್ರಾಹಿಂ ನ ಪ್ರಚೋದನೆಯಿಂದ ಈ ಕೃತ್ಯ ಎಸಗಿದ್ದು, ಕಳ್ಳತನ ಮಾಡಿದ ಎಲ್ಲಾ ನಗದನ್ನು ತನ್ನ ತಂದೆಗೆ ನೀಡುತ್ತಿದ್ದ.

ಕಾರ್ಯಚರಣೆಯಲ್ಲಿ ಭಾಗಿಯಾದ ತಂಡ ಪೊಲೀಸ್ ವರಿಷ್ಟಧಿಕಾರಿ ಲಕ್ಷ್ಮೀ ಪ್ರಸಾದ್ ಮತ್ತು ಡಿ ವೈ ಎಸ್ ಪಿ ವೆಲೈಂಟಿನ್ ಡಿಸೋಜ, ಇವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ ನಾಗರಾಜ್ ಇವರ ನೇತೃತ್ವದಲ್ಲಿ, ವಿಟ್ಲ ಪಿ ಎಸ್ ಐ ವಿನೋದ್ ರೆಡ್ಡಿ, ಬಂಟ್ವಾಳ ಗ್ರಾಮಾಂತರ ಪಿ ಎಸ್ ಐ ಪ್ರಸನ್ನ, ಬಂಟ್ವಾಳ ನಗರ ಪಿ ಎಸ್ ಐ ಅವಿನಾಶ್, ವಿಟ್ಲ ಠಾಣಾ ಹೆಡ್ ಕಾನ್ ಸ್ಟೇಬಲ್ ಗಳಾದ ಪ್ರಸನ್ನ, ಜಯರಾಮ್ ಕೆ. ಟಿ,ಜಯಕುಮಾರ್, ಸಿಬ್ಬಂದಿಗಳಾದ ಪ್ರತಾಪ್ ರೆಡ್ಡಿ, ವಿನಾಯಕ, ಲೋಕೇಶ್, ಹೇಮರಾಜ್ ಬಂಟ್ವಾಳದ ಕುಮಾರ, ಬಸಪ್ಪ, ವಿವೇಕ್ ಎಸ್ಪಿ ಕಚೇರಿಯ ಕಂಪ್ಯೂಟರ್ ವಿಭಾಗದ ದಿವಾಕರ್ ಮತ್ತು ಸಂಪತ್ ಇವರ ತಂಡ ಕಾರ್ಯಚರಣೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!