Sunday, July 26, 2026
spot_imgspot_img
spot_imgspot_img

ಸಚಿವ ಝಮೀರ್ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರ ಬಂಧನ

- Advertisement -
- Advertisement -

ಬೆಂಗಳೂರು : ವಸತಿ ಸಚಿವ ಝಮೀರ್ ಅಹ್ಮದ್ ಅವರ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣದ ಕಳ್ಳತನವಾಗಿರುವ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಇಲ್ಲಿನ ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಚಿವ ಝಮೀರ್ ಅವರ ತಾಯಿಯ ಸ್ವಂತ ರಕ್ತಸಂಬಂಧಿಯೇ ಈ ಪ್ರಕರಣದ ಸೂತ್ರಧಾರ ಎಂದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಸೈಯದ್ ಅಮೀರ್ ಹಾಗೂ ಅಮಿರ್ ಅಹ್ಮದ್ ಎಂಬವರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ಬರೋಬ್ಬರಿ 1.13 ಕೋಟಿ ರೂಪಾಯಿ ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇವರಲ್ಲಿ ಸೈಯದ್ ಅಮೀರ್ ಎಂಬಾತ ಸಚಿವ ಝಮೀರ್ ಅವರ ತಾಯಿಗೆ ಅತ್ಯಂತ ಹತ್ತಿರದ ಸಂಬಂಧಿ. ಮತ್ತೊಬ್ಬ ಆರೋಪಿ ಅಮಿರ್ ಅಹ್ಮದ್, ಸೈಯದ್ ಜೊತೆ ಟ್ರಾವೆಲ್ಸ್ ಉದ್ಯಮದಲ್ಲಿ ಪಾಲುದಾರನಾಗಿದ್ದ. ಇಬ್ಬರೂ ಸೇರಿ ಈ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಿಬ್ಬರೂ ಸೇರಿ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರು. ಆದರೆ, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಇವರ ಉದ್ಯಮ ಪಾತಾಳಕ್ಕೆ ಕುಸಿದಿತ್ತು. ಆದ ನಷ್ಟವನ್ನು ಸರಿದೂಗಿಸಲು ಮತ್ತು ಸಾಲಗಾರರಿಂದ ಪಾರಾಗಲು ಹಣದ ತೀವ್ರ ಅವಶ್ಯಕತೆ ಇತ್ತು. ಎಲ್ಲಿಯೂ ಸಾಲ ಸಿಗದಿದ್ದಾಗ, ಸೈಯದ್ ತನ್ನ ಸಂಬಂಧಿಯಾದ ಸಚಿವ ಝಮೀ‌ರ್ ಮನೆಯನ್ನೇ ಟಾರ್ಗೆಟ್ ಮಾಡಿದ್ದ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವರ ತಾಯಿಯ ರಕ್ತಸಂಬಂಧಿ ಆಗಿದ್ದರಿಂದ ಸೈಯದ್ ಅಮೀರ್‌ಗೆ ಝಮೀರ್ ಅವರ ಮನೆಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬರುತ್ತಿದ್ದ ಈತ, ಎಲ್ಲರೊಂದಿಗೂ ಅಚ್ಚುಮೆಚ್ಚಿ ನವನಂತೆ ನಟಿಸುತ್ತಿದ್ದ. ಇದೇ ನಂಬಿಕೆಯನ್ನು ಬಂಡವಾಳವಾಗಿಟ್ಟುಕೊಂಡ ಈತ, 2023ರರಿಂದಲೇ ಯಾರಿಗೂ ಅನುಮಾನ ಬಾರದಂತೆ ಸ್ವಲ್ಪ ಸ್ವಲ್ಪವೇ ಚಿನ್ನಾಭರಣಗಳನ್ನು ಕದಿಯಲಾರಂಭಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವ ವಿಚಾರ ಕುಟುಂಬಸ್ಥರ ಗಮನಕ್ಕೆ ಬರುತ್ತಿದ್ದಂತೆ, ಸೈಯದ್ ಅಮೀ‌ರ್ ಎಚ್ಚೆತ್ತುಕೊಂಡಿದ್ದ. ಪ್ರತಿದಿನ ಮನೆಗೆ ಬರುತ್ತಿದ್ದವನು ದಿಢೀರ್ ಎಂದು ಬರುವುದನ್ನು ನಿಲ್ಲಿಸಿದ್ದ. ಕುಟುಂಬದವರು ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈತನ ವರ್ತನೆಯಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಶಿವಾಜಿನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!