Sunday, April 28, 2024
spot_imgspot_img
spot_imgspot_img

ತಿರುಪತಿ ತಿರುಮಲದಲ್ಲಿ ಕರ್ನಾಟಕ ಯಾತ್ರಿ ನಿವಾಸ: ಸಿಎಂ ನೆರವೇರಿಸಲಿದ್ದಾರೆ ಶಿಲಾನ್ಯಾಸ!

- Advertisement -G L Acharya panikkar
- Advertisement -


ಬೆಂಗಳೂರು: ಕರ್ನಾಟಕದಿಂದ ತಿರುಮಲ ತಿರುಪತಿಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರಕಾರ ಯೋಜನೆಯನ್ನು ರೂಪಿಸಿದ್ದು, ಮುಂದಿನ ತಿಂಗಳು ಶಿಲಾನ್ಯಾಸ ನೆರವೇರುವ ಸಾಧ್ಯತೆ ಇದೆ. ಖುದ್ದು ಮುಖ್ಯಮಂತ್ರಿಯವರೇ ಶಂಕುಸ್ಥಾಪನೆ ಮಾಡಲಿದ್ದಾರೆ.


ಆಂಧ್ರ ಪ್ರದೇಶದ ತಿರುಪತಿ ತಿರುಮಲದಲ್ಲಿ ಕರ್ನಾಟಕ ಸರಕಾರವು 7.5 ಎಕರೆ ಭೂಮಿಯನ್ನು ಹೊಂದಿದೆ. ಇದರಲ್ಲಿ 200 ಕೋಟಿ ರೂ. ಮೊತ್ತದಲ್ಲಿ ಯಾತ್ರಿ ನಿವಾಸ, ಕಲ್ಯಾಣ ಮಂಟಪ, ಕಲ್ಯಾಣಿ, ಇತರೆ ಸೌಲಭ್ಯ ಕಲ್ಪಿಸುವ ಯೋಜನೆಗೆ ಕಳೆದ ಜೂನ್ ತಿಂಗಳಲ್ಲೇ ಸಚಿವ ಸಂಪುಟ ಅನುಮೋದನೆ ನೀಡಿದೆ.

ಟಿಟಿಡಿಯಿಂದ ಯೋಜನೆ ಅನುಷ್ಠಾನ
ತಿರುಪತಿ ತಿರುಮಲದಲ್ಲಿರುವ ಭೂಮಿಯು ವ್ಯಾಜ್ಯದಲ್ಲಿತ್ತು. ಇತ್ತೀಚೆಗೆ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ಸೇರಿದೆ ಎಂದು ತೀರ್ಪು ನೀಡಿದೆ. ಇದರಿಂದ ಹಿಂದು ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಂಸ್ಥೆಗಳ ಇಲಾಖೆಯ ಅಧೀನ ಇರುವ ಜಮೀನಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ವಿಸ್ತೃತ ಯೋಜನಾ ವರದಿಯನ್ನು ಇಲಾಖೆ ತಯಾರಿಸಿದೆ. ಯೋಜನೆಯನ್ನು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಗೆ ಕಾರ್ಯಗತಗೊಳಿಸಲು ಸೂಚಿಸಲಾಗಿರುವುದರಿಂದ ಟಿಟಿಡಿ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಪುರಾತನ ಕಲ್ಯಾಣಿ ಅಭಿವೃದ್ಧಿಯೂ ಇದೆ
ಧಾರ್ಮಿಕ ದತ್ತಿ ಇಲಾಖೆಯ ಉನ್ನತಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈ ಜಾಗದಲ್ಲಿ ಪ್ರಸ್ತುತ ಮೂರು ವಸತಿ ಸಮುಚ್ಚಯಗಳು, ಒಂದು ಕಲ್ಯಾಣ ಮಂಟಪ, ಸ್ಥಳದಲ್ಲಿರುವ ಪುರಾತನ ಕಲ್ಯಾಣಿಯ ಅಭಿವೃದ್ಧಿ, ಮಂಟಪ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿ ಸೌಧ ನವೀಕರಣ ಸೇರಿ ಹಲವು ಅಭಿವೃದ್ಧಿ ಯೋಜನೆಗೆ ನೀಲಿ ನಕ್ಷೆ ರೂಪಿಸಲಾಗಿದೆ. ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಒಟ್ಟು 198.17 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳನ್ನು ಸರಕಾರ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.

ಕರ್ನಾಟಕ ರಾಜ್ಯದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಎಲ್ಲ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಯೋಜನೆಯ ಕಾರ್ಯಾನುಷ್ಠಾನಕ್ಕೂ ಪೂರ್ವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಎಲ್ಲ ಸಿದ್ಧತೆ ಪೂರ್ಣಗೊಂಡ ಬಳಿಕ ಶಂಕು ಸ್ಥಾಪನೆ ನಡೆಸಿ, ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಹಿಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!