Monday, July 20, 2026
spot_imgspot_img
spot_imgspot_img

ವಿಜಯನಗರದಲ್ಲಿ ಭೀಕರ ತ್ರಿವಳಿ ಹತ್ಯೆ-ಮಗನಿಂದಲೇ ತಂದೆ–ತಾಯಿ, ಸಹೋದರಿ ಕೊಲೆ; ಮನೆಯೊಳಗೆ ಹೂತುಹಾಕಿದ್ದ ಮೃತದೇಹಗಳು ಪತ್ತೆ

- Advertisement -
- Advertisement -

ವಿಜಯನಗರ: ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ಒಂದೇ ಕುಟುಂಬದ ಮೂವರು ಸದಸ್ಯರ ಹತ್ಯೆ ಪ್ರಕರಣವು ಶನಿವಾರ ಸಂಪೂರ್ಣವಾಗಿ ಬಯಲಾಗಿದ್ದು, ಮೃತದೇಹಗಳನ್ನು ಮನೆಯೊಳಗೇ ಹೂತುಹಾಕಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಬೆಚ್ಚಿಬೀಳಿಸುವ ಪ್ರಕರಣದ ಆರೋಪಿ ಮನೆಯ ಮಗನೇ ಆಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.


ಹತ್ಯೆಯಾದವರು ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾ ಎಂದು ಗುರುತಿಸಲಾಗಿದೆ. ಪ್ರಕರಣದ ಆರೋಪಿ ಮೃತರ ಮಗ ಅಕ್ಷಯ್ ಕುಮಾರ್ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜ.26ರ ರಾತ್ರಿ ಅಕ್ಷಯ್ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಹತ್ಯೆಗೈದು, ಮನೆಯೊಳಗೇ ಸುಮಾರು ನಾಲ್ಕಡಿ ಆಳದ ಗುಂಡಿ ತೋಡಿದ್ದಾನೆ. ಮೊದಲಿಗೆ ತಾಯಿಯ ಮೃತದೇಹ, ಅದರ ಮೇಲೆ ಸಹೋದರಿಯ ಮೃತದೇಹ ಮತ್ತು ಕೊನೆಯಲ್ಲಿ ತಂದೆಯ ಮೃತದೇಹವನ್ನು ಹಾಕಿ, ಮೇಲ್ಭಾಗವನ್ನು ಟೈಲ್ಸ್ ಅಳವಡಿಸಿ ಮುಚ್ಚಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಹತ್ಯೆಗೈದ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದನು. ನಂತರ ಕುಟುಂಬದವರು ಕಾಣೆಯಾಗಿದ್ದಾರೆ ಎಂದು ಹೇಳಿ ಬೆಂಗಳೂರು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದ್ದಾನೆ. ಈ ವೇಳೆ ಆರೋಪಿಯ ವರ್ತನೆ ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ತಿಲಕ್ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಜಯನಗರ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ಆರೋಪಿಯನ್ನು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆತರಲಾಗಿದ್ದು, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ಸಮ್ಮುಖದಲ್ಲಿ ಮಹಜರು ನಡೆಸಲಾಯಿತು. ಈ ವೇಳೆ ಮನೆಯೊಳಗೆ ಹೂತಿಟ್ಟಿದ್ದ ಒಂದೇ ಗುಂಡಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ತಕ್ಷಣವೇ ಅವುಗಳನ್ನು ಹೊರತೆಗೆದು ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಘಟನಾ ಸ್ಥಳ ಹಾಗೂ ಆಸ್ಪತ್ರೆ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!