ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿ, ಮುರ್ಶಿದುಲ್ ಅನಾಮ್ ಸ್ವಲಾತ್ ಕಮಿಟಿ ಮತ್ತು ವಿಟ್ಲ-ಪುತ್ತೂರು ಟೋಪ್ಕೋ ಜ್ಯುವೆಲ್ಲರಿ ವತಿಯಿಂದ ಕೋವಿಡ್-19 ನಿರ್ವಹಣೆ ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಶಿಬಿರ ಉಕ್ಕುಡ ಮದ್ರಸ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಸಾಮಾಜಿಕ ಕಾರ್ಯಕರ್ತ ಉಮ್ಮರ್ ಯು.ಎಚ್. ಅವರು ಮಾತನಾಡಿ ಜಿಲ್ಲೆಯಲ್ಲಿ ನಿರಂತರವಾಗಿ ಸಮುದಾಯಿಕವಾಗಿ ಸೋಂಕು ಹರಡುತ್ತಿದೆ. ಕೊರೊನಾ ದೇಶದ ಸಮಸ್ಯೆಯಲ್ಲ. ಕೊರೊನಾ ಬಗ್ಗೆ ಯಾವುದೇ ಭಯಪಡದೇ ಒಟ್ಟಾಗಿ ಹೋರಾಟ ನಡೆಸಬೇಕು. ಸೋಂಕು ಹರಡದಂತೆ ಪ್ರತಿಯೊಬ್ಬರು ನಿಯಮಗಳನ್ನು ಪಾಲಿಸುವ ಮೂಲಕ ಜಾಗೃತಗೊಳ್ಳಬೇಕು ಎಂದು ಹೇಳಿದರು.

ಉಕ್ಕುಡ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ದುವಾಃ ಆಶೀರ್ವಚನ ನೀಡಿದರು. ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್ ಹಾಗೂ ಟೋಪ್ಕೋ ಜ್ಯುವೆಲ್ಲರಿ ಪಾಲುದಾರ ಮೊಹಮ್ಮದ್ ಟಿ.ಕೆ. ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ನೆಕ್ಕರೆಕಾಡು, ಕಾರ್ಯದರ್ಶಿ ಶರೀಫ್ ತೈಬಾ, ಕಾರ್ಯಾಧ್ಯಕ್ಷ ಅಬ್ಬಾಸ್ ಟಿ.ಎಚ್.ಎಂ.ಎ, ಕೋಶಾಧಿಕಾರಿ ವಿ.ಕೆ. ಅಬ್ದುರ್ರಹ್ಮಾನ್ ಹಾಜಿ ಕೇಪು, ಮುರ್ಶಿದುಲ್ ಅನಾಮ್ ಸ್ವಲಾತ್ ಕಮಿಟಿ ಅಧ್ಯಕ್ಷ ಹನೀಫ್ ಕುದ್ದುಪದವು ಉಪಸ್ಥಿತರಿದ್ದರು. ಜಮಾಅತ್ ಕಮಿಟಿ ಸದಸ್ಯರಾದ ರಶೀದ್ ವಿಟ್ಲ ಸ್ವಾಗತಿಸಿ, ನಿರೂಪಿಸಿದರು.
