ಕೃಪೆ:– ಪರಿಸರವಾದಿ ದಿನೇಶ್ ಹೊಳ್ಳ.
ಇಂದು ದೇಶದಾದ್ಯಂತ ರಕ್ಷಾ ಬಂಧನದ ಸಂಭ್ರಮ. ಅಣ್ಣ, ತಂಗಿ ಬಾಂಧವ್ಯ, ಸ್ನೇಹ ದ ಪರವಾಗಿ ರಕ್ಷೆ ಕಟ್ಟುವ ಒಂದು ಸಂಪ್ರದಾಯ. ಆದರೆ ಇಂದು ಮಾನವ, ಮಾನವೀಯ ಸ್ನೇಹ, ಪ್ರೀತಿ, ಸಂಬಂಧಗಳೇ ದೂರವಾಗುವ ಈ ಸಮಯದಲ್ಲಿ ಮನುಷ್ಯ ತನ್ನ ಸ್ನೇಹ , ಸಂಬಂಧ, ಪ್ರೀತಿ, ಕಾಳಜಿಯನ್ನು ಪ್ರಕೃತಿಯೊಡನೆ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇಂದು ನಮ್ಮೆದುರು ಇವೆ. ಸರಿಯಾಗಿ ಯೋಚಿಸಿದರೆ ಇಂದು ಆಗುತ್ತಿರುವ ಎಲ್ಲಾ ಪ್ರಾಕೃತಿಕ ದುರಂತಗಳ ಹಿಂದೆ ಮಾನವ ತನ್ನ ದೌರ್ಜನ್ಯ, ದಬ್ಬಾಳಿಕೆಯಿಂದ ಪ್ರಕೃತಿಯ ಮೇಲೆ ಮಾರಣಾಂತಿಕ ಏಟು ನೀಡುತ್ತಿರುವ ಸತ್ಯವನ್ನು ನಾವು ಕಾಣಬಹುದು. ಬರಗಾಲ, ಜಲ ಪ್ರವಾಹ, ಭೂಕುಸಿತ, ಚಂಡ ಮಾರುತ, ಸುನಾಮಿ, ಕೊರೋನ ಸಹಿತ ಎಲ್ಲಾ ದುರಂತಗಳ ಹಿಂದೆ ಸರಕಾರ ಮತ್ತು ಮಾನವರ ಪ್ರಕೃತಿ ಮೇಲಿನ ಅತಿರೇಕದ ಯೋಜನೆಗಳು, ಯೋಚನೆಗಳೇ ನೇರ ಕಾರಣ. ಪ್ರಕೃತಿಯನ್ನು ಸ್ನೇಹ, ಪ್ರೀತಿಯಿಂದ ಆರಾಧಿಸುವುದನ್ನು ಬಿಟ್ಟು ಮಾರಣಾಂತಿಕ ಏಟು ನೀಡಿ ಪ್ರಕೃತಿ ವಿಕೋಪ ಆದ ಕೂಡಲೇ ನಾವೇ ಅಪರಾಧಿ ಗಳಾದರೂ ಪ್ರಕೃತಿಯ ಮೇಲೆ ದೋಷಾರೋಪಣೆ ಮಾಡಿ ಇನ್ನೊಂದು ದುರಂತಕ್ಕೆ ಅಣಿ ಯಾಗುವ ಕಾಲ ಇದು.
ಇಂತಹ ಸಂದರ್ಭದಲ್ಲಿ ನಾವು ಪ್ರಕೃತಿಯ ಜೊತೆ ಹತ್ತಿರ ಆಗಬೇಕು, ಸ್ನೇಹ ಸಂಪರ್ಕ ಬೆಳೆಸಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡಿರುವ ಬೆಳ್ತಂಗಡಿ ಮುಂಡಾಜೆ ಯ ಕೃಷಿಕ, ಸಾಮಾಜಿಕ ಚಿಂತಕ, ಪರಿಸರ ಪ್ರೇಮಿ, ಸಹ್ಯಾದ್ರಿ ಸಂಚಯದ ಸಕ್ರಿಯ ಸದಸ್ಯ ಸಚಿನ್ ಭಿಡೆ ಯವರು ಈ ರಕ್ಷಾ ಬಂಧನದ ಸಂದರ್ಭದಲ್ಲಿ ಮರ, ಗಿಡಗಳಿಗೆ ರಕ್ಷೆಯನ್ನು ಕಟ್ಟುವ ಮೂಲಕ ‘ ವೃಕ್ಷಾ ಬಂಧನ ‘ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿ ಸಮಾಜಕ್ಕೆ ಮತ್ತು ನಿಸರ್ಗಕ್ಕೆ ಒಳಿತು ಆಗುವ ಹಿತ ದೃಷ್ಟಿಯಿಂದ ಎಲ್ಲರಿಗೂ ಪ್ರೇರಣೆ ಆಗುವಂತೆ ಹೊಸ ಸಂದೇಶವನ್ನು ಸಾರಿದರು.
ಸಚಿನ್ ರವರು ಇತ್ತೀಚೆಗೆ ತನ್ನ ನಾಲ್ಕೂವರೆ ಎಕರೆ ಕೃಷಿ ಜಾಗವನ್ನು ‘ ಕಾರ್ಗಿಲ್ ವನ ‘ ಎಂಬ ಅಡವಿ ನಿರ್ಮಾಣ ಮಾಡಿ ದೇಶಕ್ಕೆ ಮತ್ತು ಪರಿಸರಕ್ಕೆ ವಿನೂತನ ಕೊಡುಗೆ ನೀಡಿರುತ್ತಾರೆ. ಇಂದು ಅದೇ ಕಾರ್ಗಿಲ್ ವನದಲ್ಲಿ ಕಾರ್ಗಿಲ್ ಹುತಾತ್ಮರ ನೆನಪಿನ ಸ್ಮರಣಾರ್ಥವಾಗಿ ಅಲ್ಲಿನ ಗಿಡಗಳಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನಕ್ಕೆ ವಿಶೇಷ ಮೆರುಗು ನೀಡಿರುವರು. ನಾವು ಗಿಡ, ಮರಗಳ ಜೊತೆಗೂ ಅವುಗಳೂ ನಮ್ಮಂತೆಯೇ ಎಂದು ಸ್ನೇಹ, ಪ್ರೀತಿ, ಕಾಳಜಿ, ರಕ್ಷಣೆ ಇಟ್ಟುಕೊಳ್ಳಬೇಕು ಎಂಬುದು ಇದರ ಮೂಲ ಉದ್ದೇಶವಾಗಿದೆ. ಗಿಡ, ಮರಗಳ ಜೊತೆ ನಾವು ಪ್ರೀತಿ, ಒಡನಾಟ, ಸಂಬಂಧ ಇಟ್ಟು ಕೊಳ್ಳದೆ ಹೋದರೆ ಭವಿಷ್ಯದಲ್ಲಿ ಇನ್ನಷ್ಟು ಪ್ರಾಕೃತಿಕ ದುರಂತಗಳನ್ನು ಅನುಭವಿಸಲೇ ಬೇಕು ಎಂಬ ಸಂದೇಶದ ಜೊತೆ ಎಚ್ಚರಿಕೆಯೂ ಇದರ ಹಿಂದೆ ಇದೆ.
ಮೊನ್ನೆ ಕಾರ್ಗಿಲ್ ವನದ ಉದ್ಘಾಟನೆಗೆ ನಮ್ಮ ದೇಶದ ಸೈನಿಕರನ್ನು ಕರೆಸಿ ಅವರಿಂದಲೇ ಉದ್ಘಾಟನೆ ಮಾಡಿದ ವಿಶಿಷ್ಟ ರೀತಿಯಲ್ಲೇ ಇಂದು ಈ ‘ ವೃಕ್ಷ ರಕ್ಷಾ ಬಂದನ ‘ ಕಾರ್ಯಕ್ರಮಕ್ಕೆ ಮುಂಡಾಜೆ ಗ್ರಾಮ ಕೊರೋನ ವಾರಿಯರ್ಸ್ ಆಶಾ ಕಾರ್ಯ ಕರ್ತೆಯರಾದ ಶ್ರೀಮತಿ ಗಾಯತ್ರಿ, ಶ್ರೀಮತಿ ಶಶಿ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಜಯಂತಿ ಯವರು ತೆಂಗಿನ ಮರದ ಗರಿಯನ್ನು ವಿನ್ಯಾಸ ಗೊಳಿಸಿ ಅದನ್ನೇ ರಕ್ಷಾ ಬಂಧನ ವನ್ನಾಗಿ ಗಿಡಗಳಿಗೆ ಕಟ್ಟಿರುವರು. ಅಂತೂ ಊರಿಡೀ ಆಗಿರುವ ರಕ್ಷಾ ಬಂಧನಕ್ಕಿಂತ ವಿಭಿನ್ನವಾಗಿ ಪ್ರಕೃತಿ ಸಂರಕ್ಷಣಾ ರೀತಿಯಲ್ಲಿ ಮರ, ಗಿಡಗಳು ಈ ಭೂಮಿಯ ಪ್ರತ್ಯಕ್ಷ ದೇವರು ಮತ್ತು ನಮ್ಮಂತೆಯೇ ಜೀವಿಗಳಾಗಿದ್ದು ನಮ್ಮ ಬದುಕಿಗೆ ಚೇತನಾ ಶಕ್ತಿ ನೀಡುವ ಒಡನಾಡಿಗಳು ಅವುಗಳನ್ನು ರಕ್ಷಿಸಬೇಕು ಎಂಬ ಧ್ಯೇಯ ಸಂದೇಶ ದೊಂದಿಗೆ ಈ ಕಾರ್ಯಕ್ರಮ ಸಾರ್ಥಕತೆ ಪಡೆಯಿತು ಮತ್ತು ಮನುಷ್ಯ – ಮನುಷ್ಯ ಸಂಬಂಧಗಳ ಹಾಗೆ ಗಿಡ, ಮರಗಳೊಂದಿಗೂ ನಿರಂತರ ಸ್ನೇಹ, ಪ್ರೀತಿ ಇಟ್ಟು ಕೊಳ್ಳಬೇಕೆಂಬ ಶಾಶ್ವತ ಸಂದೇಶ ಈ ಕಾರ್ಯಕ್ರಮದಲ್ಲಿ ರವಾನೆ ಆದದ್ದು ವಿಶಿಷ್ಟವಾಗಿತ್ತು. ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಪ್ರೇರಣೆ ಆಗಿ ಗಿಡ, ಮರಗಳಿಗೆ ರಕ್ಷೆ ಕಟ್ಟಿ ರಕ್ಷಿಸುವ ಜವಾಬ್ದಾರಿ ಬೆಳೆದು ಪ್ರಕೃತಿ ಸಂರಕ್ಷಣೆಗೆ ಒಂದು ಕೊಡುಗೆ ಆಗಲಿ ಮತ್ತು ಕಾರ್ಗಿಲ್ ವನ ಹಚ್ಚ ಹಸಿರಾಗಿ ದಟ್ಟವಾಗಿ ಬೆಳೆಯಲಿ ಎಂಬುದು ನಮ್ಮೆಲ್ಲರ ಅಭಿಲಾಷೆ.