Thursday, July 9, 2026
spot_imgspot_img
spot_imgspot_img

ವಯನಾಡು: 48 ಗಂಟೆಗಳ ಕಾರ್ಯಾಚರಣೆ ಯಶಸ್ವಿ – ರಸ್ತೆ ಮೇಲೆ ಬಿದ್ದಿದ್ದ ಬೆಟ್ಟ, ಬಂಡೆಗಳ ತೆರವು

- Advertisement -
- Advertisement -

ವಯನಾಡು: ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಸಮೀಪ ಸಂಭವಿಸಿದ್ದ ಭೀಕರ ಬೆಟ್ಟ ಕುಸಿತದ ಬಳಿಕ ಕೈಗೊಂಡಿದ್ದ ಮೊದಲ ಹಂತದ ರಕ್ಷಣಾ ಮತ್ತು ತೆರವು ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸುಮಾರು 48 ಗಂಟೆಗಳ ಕಾಲ ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಪ್ರಮುಖ ರಸ್ತೆ ಹಾಗೂ ಮೀನಾಕ್ಷಿ ನದಿ ಸೇತುವೆಯ ಮೇಲಿದ್ದ ಮಣ್ಣು, ಬಂಡೆಗಳು ಮತ್ತು ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದೆ.

ಬೆಟ್ಟ ಕುಸಿತದ ವೇಳೆ ಬೃಹತ್ ಗಾತ್ರದ ಬಂಡೆಗಳು ರಸ್ತೆ ಹಾಗೂ ಸೇತುವೆಯ ಮೇಲೆ ಉರುಳಿ ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಭಾರೀ ಯಂತ್ರೋಪಕರಣಗಳ ಸಹಾಯದಿಂದ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ ರಸ್ತೆ ತೆರವು ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಇದೇ ವೇಳೆ, ದುರಂತದ ತೀವ್ರತೆಗೆ ಸಾಕ್ಷಿಯಾಗುವ ಮತ್ತೊಂದು ಅಚ್ಚರಿಯ ಬೆಳವಣಿಗೆ ಬೆಳಕಿಗೆ ಬಂದಿದೆ. ಬೆಟ್ಟದಿಂದ ಸುಮಾರು 500 ಅಡಿ ಆಳಕ್ಕೆ ಉರುಳಿ ಬಿದ್ದಿದ್ದ ಬೃಹತ್ ಜೆಸಿಬಿ ಯಂತ್ರಗಳು ಎರಡು ದಿನಗಳ ಬಳಿಕ ಕೆಸರು ಮತ್ತು ಮಣ್ಣಿನಡಿ ಪತ್ತೆಯಾಗಿವೆ. ಕಾರ್ಯಾಚರಣೆಯ ವೇಳೆ ಮಣ್ಣಿನ ಪದರ ತೆರವುಗೊಳಿಸುತ್ತಿದ್ದಾಗ ಈ ಯಂತ್ರಗಳು ಕಂಡುಬಂದಿದ್ದು, ಅವುಗಳನ್ನು ಹೊರತೆಗೆಯುವುದೇ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಪಾರ ಪ್ರಮಾಣದ ಮಣ್ಣು ಮತ್ತು ಬಂಡೆಗಳಡಿ ಸಿಲುಕಿರುವ ಕಾರಣ ಜೆಸಿಬಿಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುತ್ತಿಲ್ಲ.

ಇನ್ನೊಂದೆಡೆ, ಬೆಟ್ಟ ಕುಸಿತ ಸಂಭವಿಸಿ 48 ಗಂಟೆಗಳು ಕಳೆದರೂ ಕಣ್ಮರೆಯಾಗಿರುವ ಐವರ ಸುಳಿವು ಇನ್ನೂ ಲಭ್ಯವಾಗಿಲ್ಲ. ಭಾರೀ ಪ್ರಮಾಣದ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಬದುಕುಳಿದಿರುವ ಸಾಧ್ಯತೆ ಕ್ಷೀಣಿಸುತ್ತಿದ್ದರೂ ಎನ್‌ಡಿಆರ್‌ಎಫ್ ತಂಡ ಶೋಧ ಕಾರ್ಯವನ್ನು ಮುಂದುವರಿಸಿದೆ.ಕಠಿಣ ಪರಿಸ್ಥಿತಿಯ ನಡುವೆಯೂ ಕೊನೆಯ ಕ್ಷಣದವರೆಗೂ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಇನ್ನೂ ಶೋಧ ಮತ್ತು ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಕಣ್ಮರೆಯಾದವರ ಪತ್ತೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!