ಕಾರ್ಖಾನೆ ಸಂಪೂರ್ಣ ಸೀಲ್ ಡೌನ್
300ಕ್ಕಿಂತಲೂ ಅಧಿಕ ಮಂದಿ ಆತಂಕದಲ್ಲಿ
ವಿಟ್ಲ: ವಿಟ್ಲ ಸಮೀಪದ ಕೊಡಂಗಾಯಿ ಬಲಿಪಗುಳಿಯಲ್ಲಿರುವ ಇಕೋ-ಬ್ಲಿಝ್ ಕಂಪನಿಯ 9ನೌಕರರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಇದರಿಂದ ಕಂಪೆನಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದ್ದು, ಸುಮಾರು 300ಕ್ಕೂ ಹೆಚ್ಚಿನ ಕಾರ್ಮಿಕರಲ್ಲಿ ಆತಂಕ ವ್ಯಕ್ತವಾಗಿದೆ.

ಹಾಳೆತಟ್ಟೆ ತಯಾರಿಕೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಇಕೋ-ಬ್ಲಿಝ್ ಕಂಪೆನಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಸಾಕಷ್ಟು ಜನ ಕಾರ್ಮಿಕರಿದ್ದಾರೆ. ಅದೇ ರೀತಿ ಸ್ಥಳೀಯರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇದೀಗ 9ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಮಂಗಳವಾರ ಕಂಪೆನಿಗೆ ಆಗಮಿಸಿದ ಟಾಸ್ಕ್ ಫೋರ್ಸ್ ಅಧಿಕಾರಿಗಳ ತಂಡ ಸೀಲ್ ಡೌನ್ ಮಾಡಿದ್ದಾರೆ. ಪಾಸಿಟಿವ್ ಪತ್ತೆಯಾದ ಕಾರ್ಮಿಕರಲ್ಲಿ ಯಾವುದೇ ರೋಗದ ಲಕ್ಷಣ ಕಂಡ ಬಾರದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ನೀಡಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವು ಮಂದಿಗೆ 17ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗಿದೆ.

ವಿಶ್ವದಾದ್ಯಂತ ಮಾರಕ ಸೋಂಕು ಜನರನ್ನು ಬಲಿಪಡೆಯುತ್ತಿದ್ದರೂ ಕಂಪನಿಯ ಆಡಳಿತ ವರ್ಗ ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಬೇಜವಾಬ್ದಾರಿಯಿಂದ ಹೊರರಾಜ್ಯದ ಕಾರ್ಮಿಕರನ್ನು ಬಳಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಬೇಜವಾಬ್ದಾರಿಯಿಂದಾಗಿ ವಿಟ್ಲ ಪಡ್ನೂರು ಗ್ರಾಮ, ಕೊಳ್ನಾಡು ಗ್ರಾಮ, ಸಾಲೆತ್ತೂರು ಗ್ರಾಮ, ಮಂಚಿ ಗ್ರಾಮಗಳು ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯಂತೆ ಕೊರೊನಾ ಹಾಟ್ ಸ್ಪಾಟ್ ಆಗಲಿದೆಯೋ..? ಎಂಬ ಭೀತಿ ಕಾಡುತ್ತಿದೆ.
