




ವಿಟ್ಲ: ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಅಳವಡಿಸಿರುವ ಹೈಮ್ಯಾಕ್ಸ್ ಲೈಟ್ ಒಂದು ಕೆಟ್ಟುಹೋಗಿರುವುದರಿಂದ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಕೆಲ ಸಮಯಗಳ ಹಿಂದೆ ಕ್ಯಾಂಪ್ಕೋ ವತಿಯಿಂದ ಹೈಮ್ಯಾಕ್ಸ್ ಲೈಟ್ ಅಳವಡಿಸಲಾಗಿತ್ತು. ಬಳಿಕದ ದಿನಗಳಲ್ಲಿ ಅದು ಕೆಟ್ಟು ಹೋಗಿತ್ತು. ಈ ವಿದ್ಯುತ್ ದೀಪದ ನಿರ್ವಹಣೆ ಪಟ್ಟಣ ಪಂಚಾಯತ್ ನ ಹೊಣೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಟ್ಟಣ ಪಂಚಾಯತ್ ಗೆ ಮನವಿ ಮಾಡಿದ್ದರು. ಬಳಿಕದ ದಿನಗಳಲ್ಲಿ ಅದನ್ನು ಸರಿಪಡಿಸುವ ಕೆಲಸವಾಯಿತಾದರೂ ಸ್ವಲ್ಪ ದಿನದಲ್ಲೇ ಮತ್ತೆ ಆ ಲೈಟ್ ಕೆಟ್ಟುಹೋಗಿ ಅದರಲ್ಲಿರುವ ಗಾಜು ತುಂಡಾಗಿ ಕೆಳಗೆ ಬೀಳಲಾರಂಭಿಸಿದೆ.

ಆ ದಾರಿಯಾಗಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ತೆರಳುತ್ತಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಪದೇ ಪದೇ ಸಮಸ್ಯೆ ಮರುಕಳಿಸುತ್ತಿರುವ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತ್ ನ ಅಧಿಕಾರಿಗಳ ಗಮನಕ್ಕೆ ತಂದರಾದರೂ, ವಿದ್ಯುತ್ ದೀಪದ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಿದ್ದೇವೆ ಅವರು ಸರಿಪಡಿಸುತ್ತಾರೆ ಎನ್ನುವ ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಪಾಯ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತು ವಿದ್ಯುತ್ ದೀಪವನ್ನು ಸರಿಪಡಿಸುವಂತೆ ನಾಗರಿಕರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.