- Advertisement -
- Advertisement -



ಬೆಂಗಳೂರು: ಕಾರಿನ ಇಎಂಐ ಕಟ್ಟಲು ಹಣದ ಕೊರತೆಯಿಂದ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಯುವಕನೊಬ್ಬ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕ ಘಟನೆ ಬಸವನಗುಡಿಯ ತ್ಯಾಗರಾಜನಗರದಲ್ಲಿ ನಡೆದಿದೆ. ಉತ್ತರಹಳ್ಳಿ ನಿವಾಸಿ ಶರತ್ ಕುಮಾರ್ (31) ಬಂಧಿತ ಆರೋಪಿ.
ಆರೋಪಿಯ ದೊಡ್ಡಮ್ಮ ಸುಮಾರು 25 ವರ್ಷಗಳಿಂದ ಮನೆ ಮಾಲಕಿಯವರ ಬಳಿ ಕೆಲಸ ಮಾಡುತ್ತಿದ್ದು, ಮನೆ ಮಾಲಕಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. ನಂಬಿಕೆಯಿಂದ ಮನೆಯ ಹೆಚ್ಚುವರಿ ಕೀ ನೀಡಲಾಗಿತ್ತು. ಇದೇ ಅವಕಾಶ ಬಳಸಿಕೊಂಡ ಶರತ್, ದೊಡ್ಡಮ್ಮನಿಗೆ ತಿಳಿಯದಂತೆ ಕೀ ಪಡೆದು ಕಳೆದ ವರ್ಷ ಅಕ್ಟೋಬರ್ 22ರಂದು ಚಿನ್ನಾಭರಣ ಕಳವು ಮಾಡಿದ್ದ.
ಕಳವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ 36 ಲಕ್ಷ ರೂ. ಮೌಲ್ಯದ 241 ಗ್ರಾಂ ಚಿನ್ನ, 2.8 ಕೆ.ಜಿ ಬೆಳ್ಳಿ ಹಾಗೂ 1.30 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ದೊಡ್ಡಮ್ಮನ ಪಾತ್ರ ಇಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
- Advertisement -








