ಡಾ. ಮೈತ್ರಿ ಭಟ್, ವಿಟ್ಲ
ಏಕತಾನತೆ ತುಂಬಿದ ಬದುಕಿಗೆ ಸಂತಸ, ನೆಮ್ಮದಿಯನ್ನು ತರುವ ಹಬ್ಬಗಳ ಆಚರಣೆಯು ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಅದರಲ್ಲೂ ಈ ‘ಯುಗಾದಿ’ ಎನ್ನುವುದು ಕನಸು ಮತ್ತು ವಾಸ್ತವಗಳ ಸಂಗಮ. ನಮ್ಮ ಮನದೊಳಗೆ ಕುಡಿಯೊಡೆಯುವ ಕನಸುಗಳನ್ನು ಸಾಕಾರಗೊಳಿಸುತ್ತಾ, ಚೈತನ್ಯದೊಡಗೂಡಿ ವಾಸ್ತವಗಳಿಗೆ ಮುಖಾಮುಖಿಯಾಗುತ್ತಾ, ದೃಢ ಸಂಕಲ್ಪ ಹೊಂದಿ, ಮುಂದಡಿ ಇಡಬೇಕೆಂಬ ಸಂದೇಶವನ್ನು ಸಾರುವ ಈ ಬೇವು-ಬೆಲ್ಲದ ಹಬ್ಬದ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಹಳೆಯದನ್ನು ಮರೆತು ಹೊಸದರತ್ತ ಮುಖ ಮಾಡುವ, ಹೊಸ ಆಲೋಚನೆಗಳತ್ತ ತೆರೆದುಕೊಳ್ಳುವ, ಬದುಕನ್ನು ಮತ್ತೆ ಚಲನಶೀಲಗೊಳಿಸುವ ‘ಯುಗಾದಿ’ ಹಿಂದೂಗಳಿಗೆ ಅತ್ಯಂತ ಸಂಭ್ರಮದ ಹಬ್ಬ. ಮನ-ಮನಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಾ, ನೋವು-ನಲಿವುಗಳ ಮರೆತು ಹೊಸ ದಿನಗಳಿಗೆ ಅಣಿಯಾಗುವಾಗ ಪ್ರಕೃತಿಯೇ ಅಲಂಕೃತವಾಗಿ ಸಿಂಗಾರಗೊಳ್ಳುತ್ತದೆ. ಬನ ಬನದಲ್ಲಿಯೂ ಹೊಸ ವರ್ಷದ ಹೆಸರು ಅಚ್ಚಾದಂತೆ ಗರಿಗೆದರಿದ ಪ್ರಕೃತಿಯ ನೂತನ ವಿಲಾಸ ಮೈನವಿರೇಳಿಸುತ್ತದೆ.



ಎಲೆಗಳನ್ನು ಕಳಚಿಕೊಂಡು ಮತ್ತೆ ಚಿಗೊರೊಡೆದು ಮರುಹುಟ್ಟು ಪಡೆಯುವ ಮರಗಳು ಪ್ರಕೃತಿಗೆ ಮತ್ತೆ ಹೊಸ ರೂಪ, ನವೋತ್ಸಾಹ ತರುವ ಕಾಲವಾದರೆ, ಚೈತ್ರ-ವಸಂತರ ಆಗಮನದಿಂದ ಪ್ರಕೃತಿ ತಳೆದ ಹೊಸ ರೂಪ ಎಲ್ಲೆಡೆ ಸಂಭ್ರಮ ಉಲ್ಲಾಸವನ್ನು ಮೊಗೆಮೊಗೆದು ತುಂಬುತ್ತದೆ.‘ಯುಗಾದಿ’ ಹೆಸರೇ ಹೇಳುವಂತೆ ಯುಗದ ಆದಿ. ಅಂದರೆ ಸೃಷ್ಟಿಯ ಆರಂಭ. ಭಾರತದಲ್ಲಿ ಈ ದಿನವನ್ನು ಚಾಂದ್ರಮಾನ ಹಾಗೂ ಸೌರಮಾನ ಎಂದು ಎರಡು ರೀತಿಯಲ್ಲಿ ಆಚರಿಸಲಾಗುತ್ತದೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ‘ಚಾಂದ್ರಮಾನ’ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ‘ಸೌರಮಾನ’ ಎನ್ನುತ್ತಾರೆ.

ಪುರಾಣಗಳ ಪ್ರಕಾರ, ಮಹಾ ಜಲಪ್ರಳಯದ ನಂತರ ಬ್ರಹ್ಮದೇವ ಯುಗಾದಿಯಂದು ಲೋಕದ ಸೃಷ್ಟಿಕಾರ್ಯ ಆರಂಭಿಸಿದನು ಎಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ರಾವಣನನ್ನು ಯುದ್ಧದಲ್ಲಿ ಸೋಲಿಸಿ, ಅಯೋಧ್ಯೆಗೆ ತೆರಳಿ ಯುಗಾದಿಯ ದಿನದಂದು ರಾಜ್ಯಭಾರ ನಡೆಸಿದನು ಎಂದು ಹೇಳಲಾಗಿದೆ. ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈಯಂತಹ ಈ ಹಬ್ಬ ಒಳಿತು-ಕೆಡುಕು ಏನೇ ಬಂದರೂ ಎಲ್ಲವನ್ನೂ ಸ್ವಾಗತಿಸುತ್ತಾ, ಚಿರವಿನೂತನ ಮಂದಹಾಸವ ಉಳಿಸಿಕೊಳ್ಳಬೇಕಿದೆ ಎಂಬುದನ್ನು ಎಚ್ಚರಿಸುವ ಹಬ್ಬವೂ ಹೌದು.

ಯುಗಾದಿ ಬೇರೆಲ್ಲಾ ಹಬ್ಬಗಳಿಗಿಂತ ಭಿನ್ನವಾಗಿದ್ದು, ಹೊಸ ವರ್ಷದ ಮೊದಲ ಹಬ್ಬವಾಗಿರುವುದರಿಂದ ಮನೆ-ಮನೆಯಲ್ಲೂ ಹಬ್ಬದ ರಂಗು ಸಹಜವಾಗಿ ಮೂಡುತ್ತದೆ. ಪ್ರಾತಃಕಾಲದಲ್ಲಿ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಅಭ್ಯಂಜನ ಮಾಡಿ, ಮನೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಹೊಸ ಬಟ್ಟೆ ಧರಿಸಿ, ಕುಲದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಂತರ ಪಂಚಾಂಗ ಶ್ರವಣ ಮಾಡುವುದು ಈ ದಿನದ ವಿಶೇಷ.
ಈ ದಿನದ ಮತ್ತೊಂದು ಆಕರ್ಷಣೆಯೆಂದರೆ ಬೇವು-ಬೆಲ್ಲದ ಸೇವನೆ. ಕಳೆದು ಹೋದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ಮುಂದೆ ಸಾಧಿಸಬೇಕೆನ್ನುವುದಕ್ಕೆ ಸಂಕಲ್ಪ ತೊಡುವಂತೆ ಮಾಡುವ ಯುಗಾದಿ ಸುಖ-ದುಃಖಗಳ ರೂಪ.ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ನಮ್ಮ ಬದುಕು ಕೂಡಾ ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಾಶೆಗಳಿಗೆ ಕುಗ್ಗದೆ ಸದಾ ಆಶಾವಾದಿಯಾಗಿರಬೇಕು. ಪ್ರಕೃತಿಯ ಆಶಯವನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಸಾರುವುದೇ ಈ ಹಬ್ಬದ ವಿಶೇಷ.

ನಾವೆಲ್ಲರೂ ಸ್ವಾರ್ಥತೆಯನ್ನು ತೊರೆದು, ವಿಶಾಲ ಹೃದಯಿಗಳಾದಾಗ ಮಾತ್ರ ಯುಗಾದಿ ಹಬ್ಬದ ಆಚರಣೆ ಪೂರ್ಣವಾಗುತ್ತದೆ. ಬೇವು ತಿಂದವರಿಗೆ ಬೆಲ್ಲ ತಿನ್ನಿಸುವ ಪರಿಪಾಠವನ್ನು ಬೆಳೆಸುವುದೇ ಯುಗಾದಿ ಹಬ್ಬ ಆಚರಣೆಯ ಉದ್ದೇಶ.
ಜೀವನ ಎಂಬುದು ಕೇವಲ ಸುಖದ ಕಲ್ಪನೆಯಲ್ಲ. ಹಾಗೆಂದು ಕಷ್ಟಕೋಟಲೆಯ ಕಾಡಲ್ಲ. ಹಗಲು-ರಾತ್ರಿಗಳಂತೆ, ಹೂವು-ಮುಳ್ಳುಗಳಂತೆ ಮನುಷ್ಯನ ಬದುಕು ನೋವು-ನಲಿವುಗಳ ಸಂಗಮ. ಜೀವನದಲ್ಲಿ ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಇದೀಗ ಯುಗಾದಿ ಮತ್ತೆ ಬಂದಿದೆ. ಅದು ಮತ್ತೆ ಮತ್ತೆ ಬಂದೇ ಬರುತ್ತದೆ. ಹೀಗಿರುವಾಗ ಈ ಯುಗಾದಿಯಂದು ಸೇವಿಸುವ ಬೇವು-ಬೆಲ್ಲ ಸಮರಸದ ಬದುಕಿಗೆ ಬುನಾದಿಯಾಗಲಿ.. ಹೊಸ ಭರವಸೆಯ ಕನಸುಗಳು ನನಸಾಗಲಿ ಎಂದು ಆಶಿಸೋಣವೇ…?








