ಬೆಂಗಳೂರು : ಜೊಮ್ಯಾಟೋ ಡೆಲಿವರ್ ಬಾಯ್ ಹಲ್ಲೆ ಮಾಡಿದ್ದಾನೆ ಎಂಬ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಯುವತಿ ವಿರುದ್ಧ ಈಗ ಎಫ್ ಐ ಆರ್ ದಾಖಲಿಸಲಾಗಿದೆ.

ಜೊಮ್ಯಾಟೋ ಡೆಲಿವರಿ ಬಾಯ್ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಹಲ್ಲೆ ಮತ್ತು ನಿಂದನೆಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲಾಗಿದೆ.

ಕಳೆದ ಮಂಗಳವಾರದ ಮಧ್ಯಾಹ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಜೊಮ್ಯಾಟೋ ಡೆಲಿವರಿ ಬಾಯ್ ಯುವತಿಯೊಬ್ಬಳಿಗೆ ಮೂಗು ಮುರಿಯುವಂತೆ ಗುದ್ದಿದ್ದಾಗಿ, ಆ ಯುವತಿಯೇ ಸೋಷಿಯನ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಳು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜೊಮ್ಯಾಟೋ, ಡೆಲಿವರಿ ಬಾಯ್ ಕಾಮರಾಜ್ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿತ್ತು.

ದೂರು ಆದರಿಸಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಡೆಲಿವರಿ ಬಾಯ್ ಕಾಮರಾಜ್ ಅವರನ್ನು ಬಂಧಿಸಿದ್ದರು. ಆದರೆ ಜೊಮ್ಯಾಟೋ ಡೆಲಿವರಿ ಬಾಯ್ ಅಂದು ನಡೆದಂತ ಘಟನೆಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

ಊಟಕ್ಕೆ ಆರ್ಡರ್ ಮಾಡಿದ್ದ ಯುವತಿಯ ಮನೆಗೆ 40 ನಿಮಿಷಕ್ಕೂ ಹೆಚ್ಚು ಕಾಲ ತಡವಾಗಿ ತೆರಳಿದ್ದೆ. ರಸ್ತೆಯನ್ನು ಅಗೆದಿದ್ದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಆರ್ಡರ್ ತಲುಪಿಸಲು ತಡವಾಯಿತು ಎಂದು ಕ್ಷಮೆ ಯಾಚಿಸಿದ್ದೆ. ಆದರೂ ಆಕೆ ನಿಂದಿಸಿ ನನ್ನ ಮೇಲೆಯೇ ಹಲ್ಲೆ ಮಾಡಲು ಮುಂದಾದರು. ಆ ವೇಳೆ ಅವರು ಹಾಕಿದ್ದ ಉಂಗುರ ಅವರ ಮೂಗಿಗೆ ಗಾಯ ಮಾಡಿತು. ನಾನು ಆಕೆ ಮೇಲೆ ಹಲ್ಲೆ ಮಾಡಲಿಲ್ಲ ಎಂದು ಕಾಮರಾಜ್ ಸತ್ಯಾಂಶ ಬಿಚ್ಚಿಟ್ಟಿದ್ದರು.










