

ಬೆಂಗಳೂರು: ಲ್ಯಾಪ್ ಟಾಪ್ ಕಂಪನಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೋರ್ವನು ಲ್ಯಾಪ್ಟಾಪ್ ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ ಆತನನ್ನು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಹಾರಾಷ್ಟ್ರ ಮೂಲದ ಸುಮೀತ್ ಸಿಂಗ್(30) ಎಂದು ಗುರುತಿಸಲಾಗಿದೆ.
ಅಂಗಡಿ ಹಾಗೂ ಗೋದಾಮುಗಳಲ್ಲಿ ಇದ್ದ ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಆರೋಪ ಈತನ ಮೇಲಿದೆ. ಕಂಪನಿಯಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಮೀತ್ ಲ್ಯಾಪ್ ಟಾಪ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.


ಕಂಪನಿಯಲ್ಲಿ ಲ್ಯಾಪ್ಟಾಪ್ ಕಳ್ಳತನವಾಗಿರುವ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.ಇನ್ಸ್ಪೆಕ್ಟರ್ ಪ್ರಶಾಂತ್ ಹಾಗೂ ಸಿಬ್ಬಂದಿ ಆರೋಪಿಯ ಮಾಹಿತಿ ಕಲೆ ಹಾಕಿ ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿ ಕಂಪನಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಮೂರು ತಿಂಗಳಿಂದ ಮಾಲೀಕರಿಗೆ ಗೊತ್ತಾಗದಂತೆ ಲ್ಯಾಪ್ಟಾಪ್ ಕಳತನ ಮಾಡಿ, ಸ್ನೇಹಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾನೆ. ಹಲವು ಲ್ಯಾಪ್ಟಾಪ್ ಆತನ ರೂಮ್ನಲ್ಲೇ ಇಟ್ಟುಕೊಂಡಿದ್ದನು ಎಂದು ಹೇಳಿದ್ದಾರೆ. ಆರೋಪಿ ನೀಡಿದ ಮಾಹಿತಿ ಮೇರೆಗೆ 6.25 ಲಕ್ಷ ರೂ ಬೆಲೆಯ 25 ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ.










