


ಜೈಪುರ: ವಿವಾಹಿತ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದ ಯುವಕ ಆಕೆಯ ಪ್ರೀತಿಯನ್ನು ಪಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದ. ಆದರೆ, ಆಕೆ ಆತನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ಆತ ತನಗೆ ಸಿಕ್ಕದ ಆ ಮಹಿಳೆ ಆಕೆಯ ಗಂಡನಿಗೂ ಸಿಗಬಾರದು ಎಂದು ಆಕೆಯನ್ನು ಕೊಂದಿದ್ದಾನೆ. ಬಳಿಕ ಆಕೆಯ ಶವವನ್ನು ತಬ್ಬಿ ನೆಲದ ಮೇಲೆ ಮಲಗಿದ್ದಾನೆ.
ಶಾಂತಿ ದೇವಿ ಎಂಬ ಮಹಿಳೆಗೆ ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದರು. ಆಕೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಅವರು ಕೆಲಸಕ್ಕೆ ಜೋಜಾವರ್ ನಾಡಿ ಎಂಬ ಊರಿಗೆ ಹೋಗಿದ್ದರು. ಆಗ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶಾಂತಿ ದೇವಿಯ ಬಳಿ ಬಂದ ಅದೇ ಗ್ರಾಮದ 21 ವರ್ಷದ ಗಣೇಶ್ ಮೀನಾ ಎಂಬಾತ ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದನು.

ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿ ಹೇಳಿ ಕಿರುಕುಳ ನೀಡುತ್ತಿದ್ದ ಗಣೇಶ್ ವಿರುದ್ಧ ಕೋಪಗೊಂಡ ಶಾಂತಿ ದೇವಿ ನಾನು ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ, ನನಗೆ ಮದುವೆಯಾಗಿ ಮಕ್ಕಳಿದ್ದಾರೆ ಎಂದು ಬುದ್ಧಿ ಹೇಳಿದ್ದಾಳೆ. ಇದರಿಂದ ಕೆರಳಿದ ಗಣೇಶ್ ಕೊಡಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಆಕೆಯ ಕಿರುಚಾಟ ಕೇಳಿ ಸುತ್ತಮುತ್ತಲಿನ ಮನೆಯವರು ಆಕೆಯ ಮನೆಗೆ ಬರುವಷ್ಟರಲ್ಲಿ ಆಕೆ ನರಳಾಡುತ್ತಿದ್ದಳು. ಕೆಲವರು ಆಕೆಯನ್ನು ಉಳಿಸಲು ಮುಂದೆ ಹೋದಾಗ ಅವರನ್ನೂ ಕೊಲ್ಲುವುದಾಗಿ ಗಣೇಶ್ ಬೆದರಿಕೆ ಹಾಕಿದ್ದ. ಇದರಿಂದ ಎಲ್ಲರೂ ಹಿಂದೆ ಸರಿದರು. ಬಳಿಕ, ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ಗಣೇಶ್ ಆಕೆಯ ಹೆಣವನ್ನು ತಬ್ಬಿ ಅಲ್ಲೇ ಮಲಗಿದ್ದ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ಬಂಧಿಸಿ ವ್ಯಾನ್ನಲ್ಲಿ ಕರೆದುಕೊಂಡು ಹೋಗಲಾಯಿತು.










