
ಬೆಂಗಳೂರು: ನಕಲಿ ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆಯೊಡ್ಡಿ ರೈಲು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಶೇಷಾದ್ರಿಪುರ ಬಳಿ ನಡೆದಿದೆ. ಬಂಧಿತ ಆರೋಪಿ ಬಿಹಾರದ ರವಿ ಸಿಂಗ್ (27) ಹಾಗೂ ಉತ್ತರ ಪ್ರದೇಶದ ಸಂದೀಪ್ ಅಲಿಯಾಸ್ ರಜಪೂತ್ ಸಿಂಗ್ (32)ಎನ್ನಲಾಗಿದೆ.

‘ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಆರೋಪಿಗಳು, ಬಾರ್, ಗ್ಯಾರೇಜ್ ಹಾಗೂ ಇತರೆಡೆ ಕೆಲಸ ಮಾಡುತ್ತಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ ಆರೋಪಿಗಳು, ಸುಲಿಗೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕಾಗಿ ನಕಲಿ ಪಿಸ್ತೂಲ್ ಖರೀದಿಸಿದ್ದರು’ ಎಂದೂ ತಿಳಿಸಿದರು. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಜಾಗವಿಲ್ಲದಿದ್ದಾಗ, ತುಮಕೂರು ಕಡೆಯಿಂದ ಬರುವ ರೈಲುಗಳನ್ನು ಶೇಷಾದ್ರಿಪುರ ಬಳಿ ಕೆಲ ನಿಮಿಷ ನಿಲ್ಲಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಬೋಗಿ ಏರುತ್ತಿದ್ದ ಆರೋಪಿಗಳು, ಒಂಟಿಯಾಗಿದ್ದವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು’
ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಅದರಂತೆ ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಕಲಿ ಪಿಸ್ತೂಲ್ ಜಪ್ತಿ ಮಾಡಲಾಗಿದೆ’ ಎಂದು ತಿಳಿದುಬಂದಿದೆ.











