Monday, July 20, 2026
spot_imgspot_img
spot_imgspot_img

ವಿಟ್ಲ: ಪೆರುವಾಯಿ ಸೊಸೈಟಿ ಆವರಣದಿಂದ 4 ಜಾನುವಾರುಗಳ ಕಳವು-ಸಿಸಿಟಿವಿ ದೃಶ್ಯ ವೈರಲ್-ಪ್ರಕರಣ ದಾಖಲು

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಪೆರುವಾಯಿ ಸೊಸೈಟಿ ಆವರಣದಲ್ಲಿ ರಾತ್ರಿ ವೇಳೆ ಕಟ್ಟಿಹಾಕಿದ್ದ ನಾಲ್ಕು ದನಗಳನ್ನು ಮುಸುಕುಧಾರಿ ಕಳ್ಳರು ಕಳವು ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯದ ದೃಶ್ಯಾವಳಿಗಳು ಸೊಸೈಟಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರುವಾಯಿ ಗ್ರಾಮದ ಅಡಿವಾಯಿ ನಿವಾಸಿ ಗಣೇಶ್ ರೈ (39) ಮತ್ತು ನಾರಾಯಣ ನಾಯ್ಕ ಎಂಬುವವರಿಗೆ ಸೇರಿದ ತಲಾ ಎರಡು ದನಗಳು ನ.18ರಂದು ಪೆರುವಾಯಿ ಸೊಸೈಟಿ ಮೈದಾನದಲ್ಲಿ ಮೇಯುತ್ತಿದ್ದವು. ಸಂಜೆಯಾದರೂ ದನಗಳು ಮನೆಗೆ ಬಾರದೆ ಸೊಸೈಟಿ ಆವರಣದಲ್ಲೇ ಉಳಿದುಕೊಂಡಿದ್ದವು. ರಾತ್ರಿ ವೇಳೆ ಸುರಕ್ಷತೆಯ ದೃಷ್ಟಿಯಿಂದ ಸೊಸೈಟಿಯ ಸಿಬ್ಬಂದಿ ಗೇಟಿಗೆ ಬೀಗ ಹಾಕಿ ತೆರಳಿದ್ದರು.
ಆದರೆ, ಮರುದಿನ (ನ.19) ಬೆಳಿಗ್ಗೆ ಬಂದು ನೋಡುವಾಗ ಆವರಣದಲ್ಲಿದ್ದ ನಾಲ್ಕು ದನಗಳು ಕಾಣೆಯಾಗಿದ್ದವು. ತಕ್ಷಣ ಎಚ್ಚೆತ್ತ ದನಗಳ ಮಾಲೀಕರು ಹಾಗೂ ಸೊಸೈಟಿ ಸಿಬ್ಬಂದಿ ಸೇರಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದ್ದು, ನ. 19ರಂದು ನಸುಕಿನ ಜಾವ ಸುಮಾರು 2:30ರ ಹೊತ್ತಿಗೆ ಸೊಸೈಟಿಯ ಬಳಿ ಬಂದ ಮೂವರು ಮುಸುಕುಧಾರಿಗಳು, ಸೊಸೈಟಿಯ ಗೇಟಿನ ಬೀಗ ಮುರಿದು ಒಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಬಳಿಕ ಆವರಣದೊಳಗಿದ್ದ ದನವನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ದನಗಳನ್ನು ಕಳೆದುಕೊಂಡ ಗಣೇಶ್ ರೈ ಅವರು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!