Saturday, October 3, 2026
spot_imgspot_img
spot_imgspot_img

ಸುಳ್ಯ: ಅಡಕೆ ಹಳದಿ ರೋಗಕ್ಕೆ ಪ್ಯಾಕೆಜ್ ಕ್ರಮ; ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ

- Advertisement -
- Advertisement -
driving

ಸುಳ್ಯ: “ಕರಾವಳಿ ಹಾಗೂ ಮಲೆನಾಡಿನ ಅಡಕೆ ತೋಟದಲ್ಲಿ ಕಂಡು ಬಂದಿರುವ ಹಳದಿ ಎಲೆ ರೋಗಕ್ಕೆ 18 ಕೋಟಿ ರುಪಾಯಿಗಳ ಪ್ಯಾಕೆಜ್ ನೀಡುವಂತೆ ರಾಜ್ಯ ಸರಕಾರಕ್ಕೆ ತೋಟಗಾರಿಕಾ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಶೀಘ್ರ ಮಂಜೂರಾತಿ ನಿರೀಕ್ಷೆ ಹೊಂದಲಾಗಿದೆ” ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ತಿಳಿಸಿದರು.

ಅವರು ಅ.16ರ ಮೂರನೇ ಶನಿವಾರ ಸುಳ್ಯ ತಾಲೂಕಿನ ಅಮರ ಮುಡ್ನೂರು ಹಾಗೂ ಅಮರ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮಸ್ಥರ ಅಹವಾಲು ಆಲಿಸಲು ಹಾಗೂ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಡಲು ಕುಕ್ಕುಜಡ್ಕದ ಕೃಷಿ ಪತ್ತಿನ ಪ್ರಾಥಮಿಕ ಸಹಕಾರಿ ಸಂಘದ ಅಮರ ಸಹಕಾರಿ ಸಭಾಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಅಡಕೆ ಬೆಳೆಗಾರರೊಬ್ಬರು ಸಲ್ಲಿಸಿದ ಅಹವಾಲಿಗೆ ಉತ್ತರಿಸಿದರು.

“ರಾಷ್ಟ್ರೀಯ ತೋಟಗಾರಿಕಾ ಮಿಷನ್‍ನಡಿ ಪರಿಹಾರ ಕ್ರಮಕ್ಕೆ ನಿರ್ಧರಿಸಲಾಗಿದೆ. 3 ಸಾವಿರ ಎಕರೆಗಳಲ್ಲಿ ಹಳದಿ ಎಲೆ ರೋಗ ಅಧ್ಯಯನ ಹಾಗೂ ಪರ್ಯಾಯ ಬೆಳೆಗಳ ಬಗ್ಗೆ ಪ್ಯಾಕೆಜ್‍ನಲ್ಲಿ ಪ್ರಸ್ತಾಪಿಸಲಾಗಿದೆ. ರೋಗಬಾಧಿತ ಅಡಕೆ ಮರ ಕಡಿದು, ಬದಲಿ ಬೆಳೆಗಳನ್ನು ಬೆಳೆಸುವುದಕ್ಕೆ ಈ ಪ್ಯಾಕೆಜ್ ನೆರವಾಗಲಿದೆ. ಇದೇ ವೇಳೆ ಅಡಕೆ ತೋಟ ನಾಶವಾದ ಕಾರಣ ಪರಿಹಾರ ನೀಡುವಂತೆಯೂ ಬೆಳೆಗಾರರು ಆಗ್ರಹಿಸಿದ್ದಾರೆ. ಇದನ್ನೂ ಸರ್ಕಾರದ ಗಮನಕ್ಕೆ ತರಲಾಗುವುದು” ಎಂದರು.

ಅಶಕ್ತರ ಮನೆಗೆ ಲಸಿಕೆ ಅಭಿಯಾನ: “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲರೂ ಕೊರೊನಾ ಲಸಿಕೆ ಪಡೆಯಬೇಕು ಎಂಬುದು ನಮ್ಮ ಗುರಿ. ಅಲ್ಲದೆ ನಡೆದಾಡಲು ಅಸಾಧ್ಯವಾದ ಅಶಕ್ತರಿಗೆ ಮನೆಗಳಿಗೆ ತೆರಳಿ ಲಸಿಕೆ ನೀಡಲು ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಅಂತಹವರ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ” ಎಂದರು.

ಕೊರೊನಾ ಮುಕ್ತ ಸುಳ್ಯ: “ಕೊರೊನಾ ಎರಡನೇ ಅಲೆಯಲ್ಲೂ ಸುಳ್ಯ ಒಂದು ಸಂದರ್ಭ ಮುಂಚೂಣಿಯಲ್ಲಿತ್ತು. ಈಗ ಕೇವಲ ಒಂದು ಸಕ್ರಿಯ ಪ್ರಕರಣ ಇದೆ. ಈ ಹಿನ್ನೆಲೆಯಲ್ಲಿ ಕೊರೊನಾ ಮುಕ್ತ ತಾಲೂಕು ಆಗಿ ಸುಳ್ಯವನ್ನು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಲಿದ್ದಾರೆ” ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ
ತಿಳಿಸಿದ್ದಾರೆ.

- Advertisement -

Related news

error: Content is protected !!