

ಪುತ್ತೂರು: ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರ ಜೊತೆ ಮುಸ್ಲಿಂ ಯುವಕರು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಎದುರಿನ ಕೆಫೆಯೊಂದರಲ್ಲಿ ಪತ್ತೆಯಾಗಿ ಗೊಂದಲಕ್ಕೆ ಕಾರಣವಾದ ಘಟನೆ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಸ್ಥಳೀಯರೇ ಆಗಿದ್ದು, ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ವಿವರ::
ಪುತ್ತೂರಿನ ನೆಲ್ಲಿಕಟ್ಟೆಯ ಕೆಫೆ ಒಂದರಲ್ಲಿ ಭಿನ್ನ ಕೋಮಿಗೆ ಸೇರಿದ ಯುವಕ ಮತ್ತು ಯುವತಿಯರು ಜತೆಯಾಗಿ ಕೂತು ಆಹಾರ ಸೇವಿಸಿದ ಘಟನೆ ನಡೆದಿದ್ದು, ಇದನ್ನು ವಿರೋಧಿಸಿ ಹಿಂದೂ ಸಂಘಟನೆಯ ಯುವಕರು ಕೆಫೆ ಮುಂಭಾಗ ಜಮಾವಣೆಗೊಂಡಿದ್ದಾರೆ. ಈ ಮಾಹಿತಿ ತಿಳಿದ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೊಂದಲ ತಿಳಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಮಾಹಿತಿಯ ಪ್ರಕಾರ, ಇಬ್ಬರು ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವತಿ, ಓರ್ವ ಹಿಂದೂ ಸಮುದಾಯಕ್ಕೆ ಸೇರಿದ ಯುವತಿ ಹಾಗೂ ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ಕೆಫೆಗೆ ಗೆಟ್ ಟುಗೆದರ್ ಗೆ ಆಗಮಿಸಿದ್ದಾರೆ. ಇದನ್ನು ಗಮನಿಸಿದ ಸಂಘಟನೆಯ ಕಾರ್ಯಕರ್ತರು ಪುತ್ತೂರು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಒಂದಷ್ಟು ಸಾರ್ವಜನಿಕರು ಅಲ್ಲಿ ಜಮಾವಣೆಗೊಂಡು ಗೊಂದಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜ್ಯೂಸ್ ಸೇವಿಸುತ್ತಿದ್ದ ತಂಡವನ್ನು ವಿಚಾರಿಸಿದ್ದಾರೆ. ಯುವಕ ಯುವತಿಯರು ಪುತ್ತೂರು ಅಸುಪಾಸಿನವರೇ ಆಗಿದ್ದು ಅವರ ಮನೆಯವರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
