

ಅವರು ಖುಷಿಯಾಗಿ ಇದ್ದಾರೆ. ಇವರು ಕಷ್ಟದಲ್ಲಿದ್ದಾರೆ. ಆತ ಏನೋ ಗೊತ್ತಿಲ್ಲ ಈಗೀಗ ಮಾತಾಡುವುದು ಬಲು ಕಡಿಮೆ. ಆಕೆ ಅಷ್ಟು ಚೆನ್ನಾಗಿ ಕರೆದು ಕರೆದು ಮಾತಾಡುತ್ತಿದ್ದವಳು ಈಗ ನೋಡಿದ್ರೂ ನೋಡದವರ ಹಾಗೆ ಇರುತ್ತಾಳೆ. ಇಂತವೆಲ್ಲಾ ಮಾತುಗಳು ಸಾಮಾನ್ಯವಾಗಿ ಕಿವಿಗೆ ಕೇಳುತ್ತಿರುತ್ತವೆ. ಅದಕ್ಕೆ ಉಪ್ಪು ಖಾರ ಹುಳಿ ಬೆರೆಸಿ ಇನ್ನಷ್ಟು ಹೇಳುವವರು ಧಾರಾಳವಾಗಿ ಸಿಗುತ್ತಾರೆ. ಯಾರನ್ನು ಏನೂ ಹೇಳಿ ಪ್ರಯೋಜನವಿಲ್ಲ.
“ಅಂಡೆದ ಬಾಯಿನ್ ಮುಚ್ಚೊಲಿ, ಆಂಡ ದೊಂಡೆದ ಬಾಯಿನ್ ಮುಚ್ಚರೆ ಬಲ್ಲಿ” -(ಹಂಡೆಯ ಬಾಯಿಯನ್ನು ಮುಚ್ಚಬಹುದು, ಆದರೆ ಗಂಟಲಿಂದ ಹೊರ ಹಾಕುವ ಮಾತನ್ನು ಮುಚ್ಚಿಡಲು ಆಗುವುದಿಲ್ಲ.) ಇದು ಒಂದರ್ಥದಲ್ಲಿ ಮಾತು ಆಡಿದರೆ ಹೋಯ್ತು – ಮುತ್ತು ಒಡೆದರೆ ಹೋಯಿತು” ಅನ್ನೋ ಮಾತಿನಂತೆ ಪರಮ ಸತ್ಯ ಆಗಿದೆ. ಆಡುವ ಮಾತು ನೂರು ಸಲ ಯೋಚಿಸಿ ಆಡಬೇಕು. ಒಮ್ಮೆ ಆಡಿದೆವೋ ಆ ಮಾತು ಮತ್ತೆ ಸಾರ್ವಜನಿಕ ಸೊತ್ತು. ಅದನ್ನು ಯಾರು ಹೇಗೆ ಬೇಕಾದರೂ ಉಪಯೋಗಿಸಬಹುದು.

ಅಂದ ಹಾಗೆ ಈ ಸಾರ್ವಜನಿಕ ಸೊತ್ತು ಅಂದ್ರೆ ಕೆಲವರಿಗೆ ಒಂದು ಬಗೆಯ ತಾತ್ಸಾರ. ಯಾಕಾಗಿ ಎಂದು ಯೋಚಿಸಿದರೆ ಹೊತ್ತು ಕಳೆದು ಹೋಗುವುದೇ ಬಿಟ್ಟು ಬೇರೇನೂ ಸಿಗದು. ಬಿಟ್ಟಿ ಸಿಗುವುದೆಂದರೆ ಅದಕ್ಕೆ ಐಬು ಕಟ್ಟಿ ಕೊಡುವವರೇ ಹೆಚ್ಚು. ಅದರ ಬಗ್ಗೆ ಜಾಗ್ರತೆಯೂ ಕೊಂಚ ಕಡಿಮೆಯೆಂದೇ ಹೇಳಬಹುದು. ಜಗತ್ತಲ್ಲಿ ದುಡ್ಡು ಕೊಟ್ಟು ತಿನ್ನುವ ಪ್ರಾಣಿಯಿದೆ ಎಂದಾದರೆ ಅದು ಮನುಷ್ಯ ಮಾತ್ರ. ಉಳಿದ ಪ್ರಾಣಿ ಪಕ್ಷಿಗಳೆಲ್ಲವೂ ಪ್ರಕೃತಿದತ್ತವಾಗಿ ಬದುಕುತ್ತಾ ನಾಳೆಯ ಬಗೆಗೆ ಯಾವುದೇ ಚಿಂತೆಯಿಲ್ಲದೇ ಅತೀ ಸಂತೋಷದಿಂದ ಜೀವಿಸುತ್ತವೆ.
ಬಹಳ ಹಿಂದೆ ಮನುಷ್ಯರು ಪ್ರಾಣಿಗಳಂತೆ ಸೊಪ್ಪು, ಗಿಡಮೂಲಿಕೆ, ಗೆಡ್ಡೆ ಗೆಣಸುಗಳನ್ನು ತಿಂದು ಪ್ರಾಣಿಗಳಂತೆ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆಧುನಿಕತೆ ಕಾಲಿಟ್ಟ ಮೇಲೆ ಮನುಷ್ಯ ತಾನೇ ದೊರೆ ಯೆoಬ ರೀತಿಯಲ್ಲಿ ತನ್ನದೇ ಸಾಮ್ರಾಜ್ಯ ನಡೆಸುತ್ತಿದ್ದಾನೆ. ಈಗೀಗ ಮನುಷ್ಯ ದುಡ್ಡಿಗೋಸ್ಕರ ಏನು ಮಾಡಲೂ ಹೇಸುವವನಲ್ಲ. ಮೋಸ, ವಂಚನೆ, ಕೊಲೆ, ಸುಲಿಗೆ, ಕುಡಿತ, ಜೂಜುಗಳಂತಹ ಅವೆಷ್ಟೋ ಕೆಟ್ಟ ಕೆಲಸಗಳನ್ನು ಮಾಡಿ ಅಟ್ಟಹಾಸದಿಂದ ಮೆರೆಯುತ್ತಿದ್ದಾನೆ. ಒಳ್ಳೆಯವರು ಇಲ್ಲವೆಂದಲ್ಲ. ಅಬ್ಬರದ ಬದುಕಲ್ಲಿ ಒಳ್ಳೆಯತನ ನಿಧಾನವಾಗಿ ಗೋಚರಿಸುತ್ತದೆ. ಕೆಟ್ಟ ಕೆಲಸಗಳು ಕ್ಷಣಾರ್ಧದೊಳಗೆ ಊರು ಸುತ್ತ ಹರಡಿ ವಿಷಗಾಳಿ ಹಬ್ಬಿದಂತೆ ಕೆಟ್ಟ ಪರಿಣಾಮಗಳಿಗೆ ಔತಣ ವಾಗುತ್ತವೆ.

ಈಗಿನ ವಿದ್ಯಮಾನಗಳನ್ನು ಗಮನಿಸುವಾಗ ಇಲಿ ಹೋದಲ್ಲಿ ಹುಲಿ ಹೋಯಿತು ಎಂದು ಹೇಳಿ ಅಟಕಾಯಿಸುವವರೂ ಇದ್ದಾರೆ. ಆದರೆ ಮನದೊಳಗೆ ಸಧೃಢವಂತರಾಗಲು ಮನಸ್ಸಿಗೆ ಉತ್ತಮ ಪೌಷ್ಟಿಕಾಂಶದ ಅಗತ್ಯವಿದೆ. ಉಸಿರಿನ ಹತೋಟಿಯಿಂದ ಸಿಗುವಂತಹ ಮಾನಸಿಕ ಶಾಂತಿ ಧನಾತ್ಮಕತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಅದೇನೇ ಇರಲಿ ಮನಸ್ಸಿನ ಹಿಂದೆ ಓಡುವಾಗ ನೂರು ಸಲ ಯೋಚಿಸಿ ಮುಂದಡಿಯಿಡಬೇಕು. ಇಲ್ಲದೇ ಹೋದರೆ ಸಮಯವು ವ್ಯರ್ಥವಾಗುತ್ತದೆ.
ಕಳೆದು ಹೋದ ಸಮಯವನ್ನು ಮತ್ತೆ ಹೊಂದಿಸಲು ಆಗುವುದಿಲ್ಲ. ಆಯುಷ್ಯವೆಂಬ ಮೂಟೆಯ ಭಾರವು ದಿನಕಳೆದಂತೆ ಇಳಿಕೆಯಾಗುತ್ತ ಹೋಗುತ್ತದೆ. ಸನ್ನಿವೇಶಗಳು ಒದಗಬಹುದು. ಅವಕಾಶಗಳು ಮರುಕಳಿಸಬಹುದು. ಆದ್ರೆ ಸಮಯ ಮಾತ್ರ ಬದಲಾಗಿರುತ್ತದೆ. ಅಕ್ಕಿ ಮೂಟೆ ತರುವ ದಿನದಂದು ಚೀಲ ಭರ್ತಿಯಾಗಿರುತ್ತದೆ.

ದಿನಗಳು ಕಳೆದ ಹಾಗೆ ಮನುಷ್ಯನ ಉಪಯೋಗಕ್ಕೆ ಅನುಸಾರವಾಗಿ ಮೂಟೆ ವ್ಯಯವಾಗುತ್ತ ಹೋಗುತ್ತದೆ. ಹಾಗೆಯೇ ಆಯುಷ್ಯವೆಂಬುದು ಕೂಡಾ. ಮನುಷ್ಯ ತನ್ನ ಜೀವನವನ್ನು ಉಪಯೋಗಿಸಿಕೊಳ್ಳುವುದರಲ್ಲಿದೆ ಜಾಣ್ಮೆ. ಬರಿದೆ ವ್ಯರ್ಥವಾಗಿ ಕಳೆಯುತ್ತ ಬೇಕಾಬಿಟ್ಟಿ ಬದುಕಿದರೆ ಜೀವನ ಸಂದ್ಯಾ ಕಾಲದಲ್ಲಿ ಎಚ್ಚೆತ್ತರೂ ಚೇತನ ಮುದುಡಿ ಹೋಗುವ ಪ್ರಮೇಯವೇ ಹೆಚ್ಚಿರುತ್ತದೆ.
ದಿನವೂ ಉಲ್ಲಾಸಮಯವಾಗಿ ಜೀವನ ಸಾಗಿಸಲು ಬದುಕನ್ನು ಅಂತರಂಗದಿಂದ ಅನುಭವಿಸಬೇಕು. ಅಂತರಂಗದ ದೀಪ ಉರಿಯುತ್ತಿದ್ದರೆ ಹೃದಯವು ದೇವರ ಸ್ಮರಣೆ ಮಾಡುತ್ತಿದ್ದರೆ ಬೆಟ್ಟದಷ್ಟು ಕಗ್ಗಂಟಾಗಿರುವ ಕಾರ್ಯಗಳು ಹಕ್ಕಿ ಪುರ್ರನೆ ಹಾರಿ ಹೋಗುವಂತೆ ಸಲೀಸಾಗುತ್ತದೆ.

ಭಕ್ತನಾಗಬೇಕೆoದರೂ ಅದಕ್ಕೆ ತಕ್ಕ ಸಮಯ ಒದಗಬೇಕು. ಮನದಲ್ಲಿರುವ ಭಕ್ತಿಯನ್ನು ತೋರ್ಪಡಿಸಲು ಹೊರಗಿನ ಬಿಂಕ ಬಿನ್ನಾಣಗಳು ಬೇಕಾಗಿಲ್ಲ. ಅಂತರಂಗದ ಮಾತಿಗೆ ದೇವರು ಕಿವಿಯಾಗುತ್ತಾನೆ. ಅರ್ಥೈಸುವ ಮೂಲಕ ನಿರೀಕ್ಷೆಯ ಫಲಾಫಲಗಳು ದೊರೆಯುತ್ತವೆ. ನಂಬಿಕೆಗೆ ತಕ್ಕಂತೆ ಯೋಗ. ನಂಬಿದ ಮೇಲೆ ಆತನ ಮೇಲೆ ಭಾರ ಹೊರಿಸಿದರೆ ಹೆಗಲು ಹಗುರವೇ ಆಗುವುದು. ಹಾಗೇನೇ ತಲೆಯೂ ಹಗುರಗೊಳ್ಳುವುದು.
ಈ ಬದುಕಿನ ಪಯಣಕ್ಕೆ ಆತನದೇ ಸಿದ್ಧಾಂತ. ಆದರೂ ಮನುಷ್ಯ ಪ್ರಯತ್ನ ಪಡಲೇ ಬೇಕು. ಮಂತ್ರಕ್ಕೆ ಮಾವಿನ ಕಾಯಿ ಎಂದೂ ಬಿದ್ದಿಲ್ಲ. ನಡೆಯದೇ ದಾರಿ ಎಂದೂ ಪೂರ್ಣವಾಗೋದಿಲ್ಲ. ಅಂತರಂಗದ ದಾರಿಯಲ್ಲಿ ನಡೆದಷ್ಟು ಮನಸ್ಸು ವಿಕಸಿತಗೊಳ್ಳುತ್ತದೆ. ಬದುಕಿನ ದಾರಿ ನೇರವಾಗುತ್ತದೆ. ಆಗ ಗುರಿಯತ್ತ ಪಯಣ ಪಾರದರ್ಶಕದಂತೆ ನೇರ ಹಾಗೂ ಸರಳವಾಗುತ್ತದೆ.
? ಮಲ್ಲಿಕಾ ಜೆ ರೈ ಪುತ್ತೂರು ದ ಕ. ಅಂಕಣಕಾರರು .ಕವಯಿತ್ರಿ











