ಉತ್ತರ ಪ್ರದೇಶ: ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ. ಯುವತಿ ದೇಹದ ಮೇಲೆ ಹಲವು ಗಾಯದ ಗುರುತುಗಳಿದ್ದು, ಎದೆಗೆ ಗುಂಡು ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಯುವತಿ ಅಂದಾಜು ೨೨ ವರ್ಷದವಳಾಗಿದ್ದು, ಕೊಲೆಗೈದು ಮೃತದೇಹವನ್ನು ಎಕ್ಸ್ ಪ್ರೆಸ್ ವೇಯಲ್ಲಿ ತಂದು ಎಸೆಯಲಾಗಿದೆ. ಯುವತಿಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದ್ದು, ವಿಧಿವಿಜ್ಞಾನ ತಂಡವನ್ನೂ ಕರೆಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಕ್ಸ್ ಪ್ರೆಸ್ ವೇಯಲ್ಲಿ ರಾಯ್ ಕಟ್ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರ್ಮಿಕರು ಸೂಟ್‌ಕೇಸ್ ಬಿದ್ದಿರುವುದನ್ನು ಗಮನಿಸಿದ್ದರು. ಅದು ಕಾರಿನಿಂದ ಬಿದ್ದಿರಬಹುದು ಎಂದು ಅವರು ಶಂಕಿಸಿದ್ದರು. ಬಳಿಕ ಸನಿಹಕ್ಕೆ ಹೋದಾಗ ಒಳಗಿನಿಂದ ರಕ್ತ ಸೋರುವುದು ಕಂಡು ಬಂದಿದೆ. ಕೂಡಲೇ ಇತರ ವಾಹನಗಳು ಕೂಡಾ ನಿಂತು ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಸೂಟ್‌ಕೇಸ್ ತೆರೆದಾಗ ಅದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಪಾಲಿಥಿನ್‌ನಲ್ಲಿ ಮೊದಲು ಶವವನ್ನು ಸುತ್ತಿ ಸೂಟ್‌ಕೇಸ್‌ಗೆ ತುಂಬಿಸಲಾಗಿದೆ ಎನ್ನಲಾಗಿದೆ. ದೇಹದ ಮೇಲೆ ಹಲವು ಗಾಯಗಳಿದ್ದು, ಎದೆಗೆ ಗುಂಡು ಹಾರಿಸಿ ಕೊಲೆಗೈದಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.