


‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಕನ್ನಡಿಗರ ಮನೆಮಾತಾದ ರೆಬಾ ಮೋನಿಕಾ ಜಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಜೋಮೋನ್ ಅವರೊಂದಿಗೆ ರೆಬಾ ವಿವಾಹವಾಗಿದ್ದು, ಬೆಂಗಳೂರಿನ ಬ್ರಿಗೇಡ್ ರಸ್ತೆಯ ಚರ್ಚ್ನಲ್ಲಿ ಸಮಾರಂಭ ನೆರವೇರಿದೆ.

ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಶೇರ್ ಮಾಡಿರುವ ನಟಿ, ಈ ಮೂಲಕ ಎಲ್ಲರೊಡನೆ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಲಯಾಳಂ, ತಮಿಳು ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರೆಬಾಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ.

ರೆಬಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ. ಮಲಯಾಳಂನ ‘ಜಾಕೋಬಿಂಟೆ ಸ್ವರ್ಗರಾಜ್ಯಂ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ‘ಮಿಖಾಯೆಲ್’, ’ಫೊರೆನ್ಸಿಕ್’ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮಿಳಿನಲ್ಲಿ ವಿಜಯ್ ನಟನೆಯ ‘ಬಿಗಿಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿದ್ದರು. ‘ಎಫ್ಐಆರ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರೋಹಿತ್ ಪದಕಿ ನಿರ್ದೇಶನ ಹಾಗೂ ಧನಂಜಯ ನಟನೆಯ ‘ರತ್ನನ್ ಪ್ರಪಂಚ’ದ ಮೂಲಕ ಅವರು ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ಅವರ ಪಾತ್ರ ಪೋಷಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ರೆಬಾ ಮೋನಿಕಾ ಜಾನ್ ಅವರು ಮಲಯಾಳಿಯಾದರೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಈ ಹಿಂದೆ ಸಂದರ್ಶನವೊಂದರಲ್ಲಿ ನೆಚ್ಚಿನ ಸ್ಥಳ ಯಾವುದು ಎಂಬ ಪ್ರಶ್ನೆಗೆ, ಎಲ್ಲರಿಗೂ ಅಂತಿಮವಾಗಿ ಅವರವರ ಮನೆಯೇ ಇಷ್ಟವಾಗುತ್ತದೆ. ಹಾಗಾಗಿ ನನಗೆ ಬೆಂಗಳೂರೇ ಅಚ್ಚುಮೆಚ್ಚು ಎಂದಿದ್ದರು.

