Monday, May 6, 2024
spot_imgspot_img
spot_imgspot_img

ಅಧಿಕಾರಿಗಳಲ್ಲಿ ಭಯ ಹುಟ್ಟಿಸಲಿದೆ ಐಎಎಸ್ ನಿಯೋಜನೆ ನಿಯಮಗಳ ಬದಲಾವಣೆ; ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ

- Advertisement -G L Acharya panikkar
- Advertisement -
suvarna gold

ಭಾರತೀಯ ಆಡಳಿತ ಸೇವೆ ನಿಯಮಗಳಲ್ಲಿ ಕೇಂದ್ರ ಸರ್ಕಾರವು ತರಲು ಉದ್ದೇಶಿಸಿರುವ ಬದಲಾವಣೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರೋಧಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ನಿಯಮಗಳಿಗೆ ಬದಲಾವಣೆ ತರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೊದಲು ವಿರೋಧ ಪಕ್ಷಗಳ ಆಳ್ವಿಕೆ ಇರುವ ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು ಈ ಹಿಂದೆ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಆಕ್ಷೇಪಿಸಿದ್ದವು. ಈ ಪ್ರಸ್ತಾವಗಳು ರಾಜ್ಯಗಳ ಆಡಳಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಕೇಂದ್ರ ಸರ್ಕಾರವು ಪ್ರಸ್ತಾಪಿತ ಬದಲಾವಣೆಗಳನ್ನು ಜಾರಿ ಮಾಡಬಾರದು ಎಂದು ಈ ರಾಜ್ಯಗಳು ಆಗ್ರಹಿಸಿದ್ದವು.

‘ಕೇಂದ್ರ ಸರ್ಕಾರವು ಜಾರಿ ಮಾಡಲು ಉದ್ದೇಶಿಸಿರುವ ನಿಯಮಗಳಲ್ಲಿ ನಿಯೋಜನೆಯ ವಿಚಾರವೂ ಇದೆ. ಇದು ಐಎಎಸ್​ ಅಧಿಕಾರಿಗಳು ರಾಜ್ಯ ಸರ್ಕಾರದ ನೀತಿಗಳನ್ನು ಜಾರಿ ಮಾಡಲು ಪೂರ್ಣಪ್ರಮಾಣದಲ್ಲಿ ಪರಿಶ್ರಮ ಹಾಕಲು ಹಿಂಜರಿಯುವಂತೆ ಮಾಡುತ್ತವೆ. ಕೇಂದ್ರ ಸರ್ಕಾರದಲ್ಲಿ ಒಂದು ಪಕ್ಷ, ರಾಜ್ಯದಲ್ಲಿ ಮತ್ತೊಂದು ಪಕ್ಷದ ಅಧಿಕಾರ ಇದ್ದ ಸಂದರ್ಭಗಳಲ್ಲಿ ಅಧಿಕಾರಿಗಳಲ್ಲಿ ಹಿಂಜರಿಕೆ ಪ್ರವೃತ್ತಿ ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ಪಿಣರಾಯಿ ವಿಜಯನ್ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದರು.

ಪ್ರಸ್ತಾಪಿತ ನಿಯೋಜನಾ ನಿಯಮಗಳು ಕೇಂದ್ರ ಸರ್ಕಾರದ ಪರವಾಗಿಯೇ ಇವೆ. ಹೀಗಾಗಿ ಒಕ್ಕೂಟ ವ್ಯವಸ್ಥೆಗೆ ಇದರಿಂದ ಧಕ್ಕೆಯಾಗುತ್ತದೆ. ಈ ತಿದ್ದುಪಡಿ ಪ್ರಸ್ತಾವವನ್ನೇ ಕೈಬಿಡಬೇಕೆಂದು ವಿಜಯನ್ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಸಂವಿಧಾನವು ಕೆಲ ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿರುವುದು ನಿಜ. ಹಾಗೆಂದು ಕೇಂದ್ರ ಸರ್ಕಾರಕ್ಕಿಂತಲೂ ರಾಜ್ಯ ಸರ್ಕಾರಗಳು ಕಡಿಮೆಯಲ್ಲ. ಎರಡೂ ಸರ್ಕಾರಗಳನ್ನು ಜನರೇ ಚುನಾಯಿಸಿರುತ್ತಾರೆ ಎಂದು ಅವರು ನೆನಪಿಸಿದ್ದಾರೆ.

ನಾವು ಪ್ರಖರವಾಗಿರುವ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ನಿಯಮಗಳನ್ನು ಗುರುತಿಸಿ, ರೂಪಿಸಬೇಕಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಎರಡು ಪ್ರತ್ಯೇಕ ರಾಜಕೀಯ ವಿಚಾರಧಾರೆ ಇರುವ ಪಕ್ಷಗಳು ಆಡಳಿತ ನಡೆಸಿದರೂ ದೈನಂದಿನ ಆಡಳಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ವ್ಯವಸ್ಥೆ ರೂಪುಗೊಳ್ಳಬೇಕಿದೆ ಎಂದು ವಿಜಯನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

vtv vitla

ಏನಿದು ಹೊಸ ನಿಯಮ? ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಡೆಪ್ಯುಟೇಶನ್ ಮೇಲೆ ಕೇಂದ್ರ ಸರ್ಕಾರಕ್ಕೆ ಕರೆಸಿಕೊಳ್ಳಲು ನಿಯಮಗಳಿಗೆ ಬದಲಾವಣೆ ತರಲು ಹೊರಟಿದೆ. ರಾಜ್ಯ ಸರ್ಕಾರಗಳ ಒಪ್ಪಿಗೆ ಇಲ್ಲದೆಯೂ ಕೇಂದ್ರ ಸರ್ಕಾರದ ಸೇವೆಗೆ ಕರೆಸಿಕೊಳ್ಳಲು ಕರಡು ನಿಯಮ ರೂಪಿಸಿ ರಾಜ್ಯಗಳಿಗೆ ಕಳಿಸಿದೆ. ಇದಕ್ಕೆ ಈಗ ರಾಜ್ಯ ಸರ್ಕಾರಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಕೇವಲ, ಬಿಜೆಪಿಯೇತರ ರಾಜ್ಯ ಸರ್ಕಾರಗಳಿಂದ ಮಾತ್ರವಲ್ಲ, ಬಿಜೆಪಿ ಆಳ್ವಿಕೆಯ ರಾಜ್ಯಗಳಿಂದಲೂ ವಿರೋಧ ವ್ಯಕ್ತವಾಗುತ್ತಿರುವುದು ವಿಶೇಷ. ಮೋದಿ ಸರ್ಕಾರದ ಧೋರಣೆಯನ್ನು ವಿರೋಧಿಸುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಅಧಿಕಾರಿಗಳ ಡೆಪ್ಯುಟೇಶನ್ ಮೇಲೆ ಕಳಿಸುವುದಕ್ಕೂ ತೀವ್ರ ವಿರೋಧ ವ್ಯಕ್ತಪಡಿಸುವುದರಲ್ಲಿ ಮುಂಚೂಣಿಯಲ್ಲಿರುವುದು ವಿಶೇಷ.

- Advertisement -

Related news

error: Content is protected !!