Friday, May 3, 2024
spot_imgspot_img
spot_imgspot_img

ನಮ್ಮೊಳಗಿರುವುದು ನಂದದ ಸ್ವರ್ಗ – ಮಲ್ಲಿಕಾ ಜೆ ರೈ ಪುತ್ತೂರು

- Advertisement -G L Acharya panikkar
- Advertisement -

ಇಲ್ಲದೇ ಇರುವುದನ್ನು ಬಯಸಬಾರದು. ಅದರ ಯೋಚನೆಯಲ್ಲಿಯೇ ಮುಳುಗಿದ ಮನಸ್ಸಿಗೆ ಆಸೆಯ ರುಚಿ ಜಾಸ್ತಿಯಾಗತೊಡಗುತ್ತದೆ. ಬರ ಬರುತ್ತಾ ಆಸೆಯು ಬೆನ್ನು ಬಿಡದ ಬೇತಾಳನಂತೆ ವರ್ತಿಸತೊಡಗುತ್ತದೆ. ಇದರಿಂದ ಮನವು ಅಸಂತೋಷದಲ್ಲೇ ತುಂಬಿರುತ್ತದೆ.

ಸುಪ್ತ ಪ್ರತಿಭೆ ಇದ್ರೆ ತಾವಾಗಿಯೇ ಬೆಳಕಿಗೆ ಬರುತ್ತೆ. ಆದರೆ ಕಾಲ ಕೂಡಿ ಬರಬೇಕು. ಎಲ್ಲರ ಜೀವನವೂ ಚಕ್ರದ ಮೇಲೇ ನಿಂತಿರುವುದು. ಮೇಲೆ ಏರಿದ್ದೇವೆಂದು ಸಂಭ್ರಮಿಸಬೇಕಾಗಿಲ್ಲ. ಕೆಳಗೆ ಇದ್ದೇವೆಂದು ವ್ಯಥೆ ಪಡಬೇಕಾಗಿಲ್ಲ.

ಅದಕ್ಕೆ ನಾವು ಅರ್ಜುನನಂತಾಗಬೇಕು. ದುರ್ಯೋದನನಂತಾಗಬಾರದು. ಏಕಾಗ್ರತೆಯಿಲ್ಲದೆ ಜೀವನದಲ್ಲಿ ಪರಿವರ್ತನೆ ಎಂಬುದು ಕನಸಿನ ಗಂಟಿನಂತಾಗುತ್ತದೆ. ಸಂಸ್ಕಾರವೆಂಬ ತೋಟವನ್ನು ಮನದೊಳಗೆ ಬೆಳೆಸಿಕೊಳ್ಳಬೇಕು. ಅಮೃತ ವಚನದ ರೀತಿ ಮನಸ್ಸನ್ನು ಅಮೃತವನ್ನಾಗಿ ಮಾಡಿಕೊಳ್ಳಬೇಕು. ಈ ಕ್ಷಣವನ್ನು ನಾವು ಆನಂದಿಸಿಕೊಳ್ಳಬೇಕು. ನಾವು ಎಲ್ಲಿ, ಹೇಗೆ, ಏನು, ಮಾಡುತ್ತಿದ್ದೇವೆ ಎಂಬ ಅರಿವಿನೊಂದಿಗೆ ಬಾಳಬೇಕು. ದೇವರೊಡನೆ ಸದಾ ಉಪವಾಸದಿಂದಿರಬೇಕು. ಕೊಡು ಕೊಳ್ಳುವಿಕೆ ಕೇವಲ ತಾತ್ಕಾಲಿಕ.

ಹುಟ್ಟಿ ಬಂದಾಗ ನಾವು ಏನು ತಂದಿದ್ದೇವೆ ಅದನ್ನೇ ಹೊತ್ತುಕೊಂಡು ಹೋಗುವವರಿದ್ದೇವೆ. ಆದರೆ ಕಾಲವನ್ನು ಹೇಗೆ ಕಳೆದಿದ್ದೇವೆ ಅನ್ನುವುದೇ ಪ್ರಾಮುಖ್ಯವಾಗುತ್ತದೆ. ಹಾಗಾಗಿ ಮನಸ್ಸಿಗೆ ಒಳ್ಳೆಯ ಸಂಸ್ಕಾರ ಕೊಟ್ಟು ಕೊಳ್ಳಬೇಕು. ಜೀವನಕ್ಕೆ ಬೇಕಾಗಿ ನಾವು ಗ್ರಹಿಕೆಯನ್ನು ಅಳವಡಿಸಿಕೊಳ್ಳಬೇಕು. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡದೇ ಹೃದಯದಲ್ಲಿ ಸಾಕ್ಷಿ ಭಾವದೊಳಗೆ ಅನುಭವಿಸಬೇಕು. ತಾಯಿ ತನ್ನ ಮಗುವನ್ನು ಓಲೈಸುವಂತೆ. ಪ್ರತೀ ಮಾತು ಮನಸ್ಸನ್ನು ಗೆದ್ದು ಬದುಕು ಬದುಕನ್ನು ಸಂಭ್ರಮಿಸುತ್ತಿರಬೇಕು. ಉಸಿರಾಟ ಮಾಡ್ತಾ ದೇಹ, ದೇಶ ಸ್ವಚ್ಛವಾಗಿದೆ ಎಂಬ ಭಾವನೆಯಲ್ಲಿ ಬೆರೆತು ಬದುಕಬೇಕು. ಅದಕ್ಕಾಗಿ ಮಾನಸಿಕ ಸಿದ್ಧತೆ ಎಂಬುದು ಆಗಲೇಬೇಕು.

ಹೃದಯದ ಬಡಿತವನ್ನು ಪ್ರತೀ ಕ್ಷಣ ಗಮನಿಸಬೇಕು. ಪ್ರಕೃತಿಯ ಅನುಭವವನ್ನು ಜೊತೆ ಜೊತೆಗೆ ಗಮನಿಸಬೇಕು. ಆತ್ಮ ಪರಮಾತ್ಮ ನೊಂದಿಗೆ ಸಂಪರ್ಕ ಮಾಧ್ಯಮವನ್ನಾಗಿ ಮಾಡಿಕೊಳ್ಳಬೇಕು. ದೇಹ ಪ್ರಜ್ಞೆ ಮತ್ತು ಪ್ರಕೃತಿಯೊಂದಿಗಿನ ಸೂಕ್ಷ್ಮತೆಯನ್ನು ಗಮನಿಸಿ ಕೊಳ್ಳಬೇಕು. ಕಿವಿಯಿಂದ ಕೇಳಿದ ಬಳಿಕ ಹೃದಯದಲ್ಲಿ ತರ್ಕ ಮಾಡದೇ ಅದನ್ನು ಅನುಭವಕ್ಕೆ ಇಳಿಸಬೇಕು. ಮನಸ್ಸಿನಲ್ಲಿ ಸದಾ ಉಸಿರು ಮುಖ್ಯವಾಗಬೇಕು. ಮನಸ್ಸು ಜೋಡಿಸಿಕೊಳ್ಳುವಲ್ಲಿ ಉಸಿರು ಪ್ರಮುಖ ಪಾತ್ರ ವಹಿಸುತ್ತದೆ. ಉಸಿರಿನೊಂದಿಗೆ ಮನಸ್ಸು ಬದಲಾಗುತ್ತದೆ. ಅನ್ನಮಯ ಕೋಶದೊಳಗೇ ಇದ್ದು ಕೊಂಡು ಬದುಕನ್ನು ಬರಡಾಗಿಸಿಕೊಳ್ಳಬಾರದು . ನಿರ್ವಾತ ಸ್ಥಿತಿ ತಲುಪಬೇಕು. ಆಲೋಚನೆಗಳಿಲ್ಲದೆ ಆನಂದವನ್ನು ಅನುಭವಿಸಿಕೊಳ್ಳಬೇಕು. ಪ್ರತೀ ಕ್ಷಣದೊಳಗೆ ಮನಸ್ಸು ಮಾಗುತ್ತಿರಬೇಕು. ದೇಹದ ಎಲ್ಲಾ ಕ್ರಿಯೆಗಳನ್ನು ಆ ದೇವರೇ ಕೈಗೊಳ್ಳುತ್ತಿದ್ದಾರೆ. ಕ್ಷಣ ಕ್ಷಣಕ್ಕೆ ದೇಹದಲ್ಲಿ ರಚನೆಗಳು ಬೇರೆ ಬೇರೆಯಾಗುತ್ತಿರುತ್ತವೆ. ಮೈ ಮನಗಳು ಸುಂದರ ಪ್ರಕೃತಿಯೊಂದಿಗೆ ಬೆರೆತು ಇಡೀ ದೇಹವನ್ನು ಓಂಕಾರ ಸ್ಥಿತಿಗೆ ಜೋಡಿಸಿಕೊಳ್ಳಬೇಕು. ನಾಭಿಯಿಂದಲೇ ದೀರ್ಘವಾಗಿ ಉಸಿರಿನೊಂದಿಗೆ ಜೊತೆಯಾಗಬೇಕು.

ಸಾಧಕರ ಕುರಿತು ಯೋಚಿಸುವಾಗ ಒಳ್ಳೆಯ ಸಂಸ್ಕಾರವಂತರನ್ನು ಗುರುಗಳಾಗಿ ನೋಡುತ್ತೇವೆ. ಯಮ ನಿಯಮದಲ್ಲಿದ್ದುಕೊಂಡು ತಪಸ್ಸು, ಸ್ವಾಧ್ಯಾಯ ಮಾಡಬೇಕು. ಈ ಕ್ಷಣ ಏನು ಮಾಡುತ್ತೇವೆ, ಏನು ಮಾಡುತ್ತಿದ್ದೇವೆ ಎಂಬ ಅರಿವು ಸದಾ ಇರಬೇಕು. ದೇಹಕ್ಕೆ ಸಂಸ್ಕಾರ ಕೊಟ್ಟರೆ ವ್ಯಾಯಾಮ, ಹಾಗೇ ಉಸಿರಿಗೆ ಸಂಸ್ಕಾರ ಕೊಟ್ಟಾಗ ಪ್ರಾಣಾಯಾಮ ಮತ್ತು ಮನಸ್ಸಿಗೆ ಸಂಸ್ಕಾರ ಕೊಟ್ಟಾಗ ಮಾತ್ರ ಯೋಗ ಆಗುತ್ತದೆ. ಚೈತನ್ಯ, ಸಂಸ್ಕಾರದಿಂದ ಯೋಗ ಫಲ ಲಭಿಸುತ್ತದೆ.

ದೇಹ, ಉಸಿರು, ಹಾಗೂ ಮನಸ್ಸು ಒಟ್ಟಾಗಿರಬೇಕು. ಆಗ ಅಲೌಕಿಕ ಅನುಭವ ತಾನಾಗಿ ದೊರೆಯುತ್ತದೆ. ಹೇಗೆ ಹಾಲು, ಅದರೊಳಗೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇರುವಂತೆ. ನೋಡಲು, ರುಚಿಯಲ್ಲಿ ಹಾಗೂ ಬಾಳಿಕೆಯಲ್ಲಿ ವ್ಯತ್ಯಾಸಗಳಿದ್ದೇ ಇರುತ್ತವೆ.

ನಾವು ಈ ಲೋಕದಲ್ಲಿ ಬೇರೆ ಬೇರೆಯಾಗಿ ಕಾಣ ಬರುತ್ತೇವೆ. ಬರುವಾಗ ಎಲ್ಲರೂ ಒಂದೇ ಭಾವದಲ್ಲೇ ಬಂದು ಬಿಡುತ್ತೇವೆ. ಮಗು ಭಾವ ಸಾಕ್ಷಾತ್ ದೇವರ ರೂಪ. ಬೆಳೆಯುತ್ತ ಲೌಕಿಕ ನೆಲೆಯಲ್ಲಿ ಪ್ರಯಾಣಿಸುತ್ತಾ ಮನುಷ್ಯರಾಗುವುದು. ಅಂಧಕಾರ ತುಂಬಿಕೊಂಡಂತೆ ಅಹಂಕಾರ ಕೂಡಾ. ಕಿಟಕಿ, ಬಾಗಿಲು ಮುಚ್ಚಿದ ಕೋಣೆಗೆ ಸಣ್ಣ ದೀಪವನ್ನು ಉರಿಸಿದಾಗ ಅಂಧಕಾರ ಹೇಗೆ ಮಾಯವಾಗುತ್ತದೆಯೋ ಅದೇ ರೀತಿ ಮನಸ್ಸಿನ ಅಂಧಕಾರವನ್ನು ಬೆಳಗುವ ಅಂತರಾತ್ಮ ಸದ್ಗುರುವೇ ಹೌದು. ಆದರೆ ಸದಭಿರುಚಿ ಬೆಳೆಸುವಲ್ಲಿ ಶ್ರಮಪಡಬೇಕು. ಅಂದರೆ ನೀರಿನಲ್ಲಿರುವ ಗುಳ್ಳೆಯಂತೆ ಈ ಬದುಕು. ನಾವು ನೆನೆದ ರೀತಿ ಇರಬೇಕೆಂದೇನಿಲ್ಲ . ಸಮುದ್ರಕ್ಕೆ ನೀರು ಹೇಗೆ ಸೇರುತ್ತದೆಯೋ ಹಾಗೆ. ನಾವು ಕುಡಿಯುವ ನೀರು ಎಲ್ಲರಿಗೂ ಬೇಕಾಗುವಂತಾದ್ದು. ಒಬ್ಬೊಬ್ಬರ ಸೊತ್ತು ಅಲ್ಲವೇ ಅಲ್ಲ. ಹಾಗೇ ಹಸಿವು ಇರಬೇಕು, ಅಂತಿಂಥ ಹಸಿವಿರದೇ ಜ್ಞಾನದ ಹಸಿವು ತುಂಬಿರಬೇಕು.

ಬದುಕೆಂಬ ಪಯಣದಲ್ಲಿ ನಿರಂತರ ಚಲನೆ ಆಗುತ್ತಿರಬೇಕು. ಆಗ ಎಲ್ಲಿಯೂ ಎಡವಿ ಬೀಳುವ ಸಂದರ್ಭ ಬರಲಾರದು. ಒಂದಿನ ಕುಳಿತೆವೋ ಮಾರನೇ ದಿನ ಮನಸ್ಸು ಅದನ್ನೇ ಬಯಸುತ್ತದೆ. ಒಂದಿನ ಕಾರ್ಯ ಮಾಡಿ ಉಲ್ಲಾಸ ಪಡಕೊಂಡೆವೋ ಮರುದಿನ ಉತ್ಸಾಹ ಇಮ್ಮಡಿಯಾಗುತ್ತದೆ. ಒಳಿತಿನ ದಾರಿ ಎಲ್ಲೆಲ್ಲೂ ಇರುತ್ತದೆ. ನಡೆದು ಮುಂದೆ ಹೋಗುವುದು ಕರ್ತವ್ಯ ವಾಗಬೇಕು. ಉಸಿರಿನ ಗತಿಯೊಂದಿಗೆ ಪಯಣ ಅನುಭವಿಸುವಂತಾಗಬೇಕು. ಗತಿಯಲ್ಲಿ ವ್ಯತ್ಯಾಸವಾದಾಗ ಬದುಕು ತಾಳ ತಪ್ಪುತ್ತದೆ. ನೋವು ಅನುಭವಿಸುವ ಮೂಲಕ ಒಳಿತು ಕೆಡುಕುಗಳ ಪರಾಮರ್ಶೆ ನಡೆಸಲಾಗುತ್ತದೆ. ಆದರೆ ನಾವು ಇಲ್ಲಿ ನೆಪ ಮಾತ್ರ. ಹುಟ್ಟು ಆದಾಗ ಗೊತ್ತಿರುವುದಿಲ್ಲ. ಬೆಳೆಯುತ್ತ ಸಮಾಜದೆಡೆಗೆ ಮುಖ ಮಾಡುತ್ತ ಎಲ್ಲಾ ಸಂಸ್ಕಾರಗಳನ್ನು ಕಲಿತರೂ ಮೂಲ ಉದ್ದೇಶ ಮರೆಯಬಾರದು.

ಒಳಿತು ಮಾಡಲು ಮನಸ್ಸನ್ನು ಕೊಡುವುದು ಕೂಡಾ ಆ ದೇವರೇ. ಆದರೆ ದಾರಿ ತುಂಬಾ ಅಥವಾ ಅನೇಕ ಇರುವಾಗ ನಿರ್ಧಾರ ನಮ್ಮ ಆಯ್ಕೆಯೇ ಆಗಿರುತ್ತದೆ. ಅದಕ್ಕೆ ತಕ್ಕಂತೆ ಯಾವ್ಯಾವುದೋ ನಿಲ್ದಾಣದಲ್ಲಿ ಬಂದು ಸೇರುತ್ತೇವೆ. ಕಾರ್ಯಗಳಿಗೆ ಕೈ ಜೋಡಿಸುತ್ತೇವೆ. ಪ್ರತಿಫಲ ನಿರೀಕ್ಷಿಸುತ್ತ ಇದ್ದಂತೆ ಕೆಲವರಿಗೆ ಸುಖ, ಸಂತೋಷ, ನೆಮ್ಮದಿ ಸಿಗುತ್ತದೆ. ಇನ್ನು ಕೆಲವರಿಗೆ ನೋವು, ಬೇಸರ, ದುಃಖ ಬಂದೊದಗುತ್ತವೆ. ಆದರೆ ಇವೆಲ್ಲಾ ಬಾಹ್ಯದಲ್ಲಿ ದೊರಕಿರುತ್ತದೆ. ಇವ್ಯಾವುದೂ ಶಾಶ್ವತವಲ್ಲ. ಕಾಲಾಯ ತಸ್ಮೈ ನಮಃ ಹೊತ್ತು ಮೀರುವ ಮುನ್ನ ಮನೆ ಸೇರಿಕೋ ಎಂದು ಹಿರಿಯರು ಬುದ್ಧಿ ಮಾತು ಹೇಳುವಂತೆ ಹೊತ್ತು ನಮ್ಮ ಸೊತ್ತಲ್ಲ. ಅದನ್ನು ಉಪಯೋಗಿಸಿ ಪರನಿಂದೆ ಮಾಡದೇ ಸದಾ ನಮ್ಮೊಳಗಿನ ಆಗು ಹೋಗು ಗಮನಿಸುತ್ತ ಅಂತರಾತ್ಮದ ಎಚ್ಚರಿಕೆಯಲ್ಲಿ ಬದುಕುವುದು ಧರ್ಮ. ಅದು ಹೊರತು ಬಾಹ್ಯ ಪ್ರಚೋದನೆಗೆ ಒಳಗಾಗಿ ದ್ವೇಷ ದಳ್ಳುರಿ ಮಾಡುತ್ತ ಮಾನವ ಜೀವನವನ್ನು ವ್ಯರ್ಥಗೊಳಿಸುವುದು ಮೂರ್ಖತನ.

ಈ ದೇಹ ಒಂದು ದೊಡ್ಡ ಕಾರ್ಖಾನೆಯೇ ಹೌದು. ನಾವೆಲ್ಲ ಅದರ ಕೋಟಿ ಕೋಟಿ ಒಡೆಯರೇ ಆಗಿದ್ದೇವೆ. ಅದು ದೇವರು ನಮಗೆ ನೀಡಿದ ಶ್ರೇಷ್ಠ ಸಂಪತ್ತೂ ಆಗಿದೆ. ಅದನ್ನು ನಾವು ದೇವರ ಕಾರ್ಯಗಳಿಗೆಂದೇ ಸಮರ್ಪಿಸಬೇಕು. ಅನ್ಯರನ್ನು ವಂಚಿಸಿ, ಅಥವಾ ನೋವು ಕೊಟ್ಟು ನಮ್ಮ ದೇಹವನ್ನು ಜೋಪಾನ ಮಾಡುವುದು ಎಷ್ಟು ಸರಿ? ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇನ್ನೊಬ್ಬರನ್ನು ಸುಲಿಗೆ ಮಾಡುತ್ತಿರುತ್ತಾರೆ. ಆದರೆ ಪರಮಾತ್ಮ ಎಲ್ಲವನ್ನೂ ನೋಡುತ್ತಿರುತ್ತಾನೆ. ಅಂತರಂಗದೊಳಗೆ ಎಷ್ಟು ಸಾರಿ ಇಣುಕುತ್ತೇವೋ ಅದರ ನೂರು ಪಾಲು ದೇವರು ನಮ್ಮನ್ನು ಗಮನಿಸುತ್ತಿರುತ್ತಾನೆ. ನಮ್ಮರಿವಿಗೆ ಬಾರದ ರೀತಿಯಲ್ಲಿ ಕೆಲವು ಘಟನೆಗಳು ಜರುಗುತ್ತವೆ. ಅನುಭವದ ಸಾರವನ್ನು ವರ್ಣಿಸಲು ಸಾಧ್ಯವೇ ಆಗದಷ್ಟು ಅನಿಸಿಕೆಗಳು ವ್ಯಕ್ತ ಪಡಿಸಲಾಗದ ರೀತಿಯಲ್ಲಿ ದೇವರ ಅಭೀಷ್ಟವೇ ನೆರವೇರುತ್ತದೆ. ಮನಸ್ಸು ಮನನ ಮಾತ್ರದಿಂದ ಪುಳಕಿತಗೊಳ್ಳುತ್ತದೆ ಹೊರತು ಇನ್ನೊಬ್ಬರ ಪ್ರತಿಕ್ರಿಯೆಯಿಂದಲ್ಲ.

ಹಾಗಾಗಿ ಇನ್ನೊಬ್ಬರ ಹೊಗಳುವಿಕೆಗೆ ಕಾಯುವುದು ತರವಲ್ಲ. ನಮ್ಮೊಳಗೆ ನಾವು ಕಾಯುವಂತಾಗಬೇಕು.
ಆ ಕಾಯುವಿಕೆ ಮನವನ್ನು ಮಾಗಿಸಿ ಕೊನೆಗೆ ಸವಿಯಾದ ಹಣ್ಣಿನ ರುಚಿಯೇ ತರುವಂತೆ ಭವ ಬಂಧನಗಳಿಂದ ದೊರಕದ ಆನಂದ ಸ್ವರ್ಗ ಮನವು ಮಾಗಿದಾಗ ದೊರಕುವುದು. ನಂದದ ಸ್ವರ್ಗ ನಮ್ಮೊಳಗೆಯೇ ಇದೆ. ಅನುಭವಿಸುವಲ್ಲಿ ಸೋತಿದ್ದೇವೆ. ಅಂತರಂಗದ ಆತ್ಮೋದ್ಧಾರದ ಗುರುಬಲ ನಮ್ಮದಾಗಲಿ.

✍️ ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು

- Advertisement -

Related news

error: Content is protected !!