Saturday, April 20, 2024
spot_imgspot_img
spot_imgspot_img

“ಮನಸ್ಸಿಗಿರಲಿ ಕಡಿವಾಣ”

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಅಂಕಣಕಾರರು

ಸಿವು ಆಗುವ ಮೊದಲೇ ಆಹಾರ ತಯಾರು ಮಾಡುವ ಅಭ್ಯಾಸ ಹೇಗೆ ಬಂತು? ಅದಕ್ಕೆ ಬೇಕಾದ ವಸ್ತುಗಳನ್ನು ತಯಾರಿಸಲು ಯಾವುದು ಪ್ರೇರಣೆಯಾಯ್ತು? ಹೋಗಲಿ ಹಸಿವಾದಾಗ ಊಟ ಅಥವಾ ಯಾವುದೇ ತಿನಿಸು ಬಾಯಲ್ಲಿಟ್ಟು ಜಗಿಯುವವರೆಗೆ ನಮ್ಮ ಅಧೀನದಲ್ಲಿ ಕಾರ್ಯ ಸಾಗುತ್ತದೆ. ಜಗಿದು ನುಂಗಿದ ಮೇಲೆ ಅದು ಎಲ್ಲಿಗೆ ಸಾಗಬೇಕು ಎಂದು ಪ್ರೇರೇಪಿಸಲ್ಪಡುವವರು ಯಾರು? ಆ ನಂತರದ ಕಾರ್ಯಗಳು ಯಾವುದೂ ನಮ್ಮ ಅಧೀನದಲ್ಲಿ ಇರುವುದಿಲ್ಲ! ಅದರೆ ತಿಂದ ಮೇಲೆ ಹಸಿವು ನಿವಾರಣೆಯಾದ ಅನುಭವ ಆಗುತ್ತದೆ. ಇದು ನಮ್ಮ ಕೈಯಲ್ಲಿಲ್ಲ. ಅದೇ ಬಾಯೊಳಗೆ ಹೋಗುವವರೆಗೆ ನಮ್ಮದೇ ಅಧಿಪತ್ಯ.

ಅದು ಬೇಕು ಇದು ಬೇಕು ಎಂಬ ಬಯಕೆಗಳು ಕಡಲಿನ ಅಲೆಗಳ ಹಾಗೆ ಭೋರ್ಗರೆದು ಅಪ್ಪಳಿಸುತ್ತಿರುತ್ತದೆ. ಆದರೆ ಅದರ ಗಾತ್ರ ಪ್ರಮಾಣ ಊಹೆಗೆ ನಿಲುಕಲಾರದು. ಜೇವನದ ಪ್ರಯಾಣದಲ್ಲಿ ಇಂತಹ ಅನುಭವಗಳು ಸರ್ವೇಸಾಮಾನ್ಯ. ಒಂದರ ಮೇಲೆ ಮತ್ತೊಂದು ಮುಗಿಯದ ರೀತಿಯಲ್ಲಿ ಜೀವನ ಶರಧಿ ಸಾಗುತ್ತಿರುತ್ತದೆ. ಲವಲವಿಕೆಯಿರುವಲ್ಲಿಯವರೆಗೆ ಮನಸಿನ ಮೂಟೆಗಳನ್ನು ಹೊರುವ ಭಾರ ಸೇರಿರುತ್ತದೆ. ಉತ್ಸಾಹದ ಚಿಲುಮೆಯು ಪ್ರಸಾದದಂತೆ ನಿಯತ್ತಾಗಿ ಸವಿಯುತ್ತಿರಬೇಕು. ಮೃಷ್ಟಾನ್ನ ಭೋಜನದ ರೀತಿ ಇರಬಾರದು.

ಕಂಡದ್ದೆಲ್ಲ ಬೇಕೆಂಬಾಸೆ ಮನಸ್ಸಿಗಿದ್ದರೆ ದೇಹಕ್ಕೆ ಅನ್ಯಾಯ ಮಾಡಿದಂತೆ. ಉಪವಾಸ ಮಾಡಿದರೆ ದೇಹವನ್ನು ದಂಡಿಸಿದಂತೆ ಆಗುವುದೇ ಹೊರತು ಮನಸ್ಸಿನ ನಿಗ್ರಹ ಎಂದು? ಇಂತಹ ಪ್ರಶ್ನೆಗಳು ಮನದಲ್ಲಿ ಎದ್ದು ಅವುಗಳಿಗೆ ನಮ್ಮಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು. ಚಿಕ್ಕ ಮಕ್ಕಳು ಚಾಕಲೇಟ್ ಬೇಕೆಂದಾಗ ಕೂಡಲೇ ತೆಗೆದುಕೊಡುವ ಗೋಜಿಗೆ ಹೋಗಬಾರದು. ಕೇಳಿಯೂ ಕೇಳಿಸದಂತೆ ಇರುವ ಪಾಡು ಒಮ್ಮೊಮ್ಮೆ ಅವಶ್ಯಕವೆನಿಸುತ್ತದೆ. ಅದೇ ರೀತಿ ದೇವರಲ್ಲಿ ಭಕ್ತಿ ಕೂಡಾ ಒಮ್ಮೆ ಮಾತ್ರ ಪ್ರಕಟಿಸುವುದಲ್ಲ. ಸದಾ ದೇವರ ಧ್ಯಾನ ಮನದೊಳಗೆ ಬರುತ್ತಲಿರಬೇಕು. ಆಗ ಮನದ ನಿಗ್ರಹ ಸಾಧ್ಯವಾಗುತ್ತದೆ.

ಕೆಸುವಿನ ಎಲೆಯ ಮೇಲೆ ಬಿದ್ದ ಮಳೆಯ ನೀರು ಎಂದಿಗೂ ನಿಲ್ಲುವುದಿಲ್ಲ. ಹಾಗೆಯೇ ಸಂಸಾರದಲ್ಲಿ ಇದ್ದೂ ಕೂಡಾ ಇರದಂತಿರಬೇಕೆಂದರೆ ಯೋಗ ಸಿದ್ದಿಸಬೇಕು. ಆಗ ಸುಖ ದುಃಖಗಳು ಎಂದಿಗೂ ಬಾಧಿಸಲಾರವು. ಬದುಕಿನ ಕಾಲಗತಿಯ ಚಕ್ರದಲ್ಲಿ ಮೇಲಕ್ಕೆ ಏರಿದವ ಕೆಳಗಿಳಿಯುವ ಹೊತ್ತು ಹೇಳಿ ಕೇಳಿ ಪಡೆದು ಬಂದಿರುವುದಿಲ್ಲ.ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಇನ್ನಿಲ್ಲದ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ಹೊರಗಿನ ಸ್ಥಿತಿಗತಿಗಳನ್ನು ಎಂದಿಗೂ ಅವಲಂಬಿಸಬಾರದು. ಮನದ ಒಳಗಿನ ಭಾವಕ್ಕೆ ದೇವರ ರೂಪ ಸದಾ ಕಾಣುವ ರೀತಿಯಲ್ಲಿ ಬದುಕಿದರೆ ಮಾತ್ರ ಜೀವನದ ಬಂಡಿ ಏನೇ ಕಲ್ಲು ಮುಳ್ಳುಗಳಿದ್ದರೂ ಸರಾಗವಾಗಿ ಎಳೆಯಲ್ಪಡುತ್ತದೆ. ಹಾಗಾಗದೇ ಹೋದಲ್ಲಿ ಪರಿಸ್ಥಿತಿಗಳು ಹತಾಶರನ್ನಾಗಿ ಮಾಡುತ್ತವೆ.

ಕೊನೆಗೆ ಬದುಕು ಬಲಹೀನವಾಗಿ ಬೇಸರವಾಗಬಹುದು. ದೇವರ ಧ್ಯಾನವೆಂಬುದು ಬದುಕಿಗೆ ಪೋಷಕಾಂಶವೆಂದರೂ ತಪ್ಪಾಗಲಾರದು. ಮನುಷ್ಯ ಮಾತ್ರರಿಂದಲೇ ಸುಳ್ಳು, ಮೋಸ, ಅನುಮಾನ, ಅಸಮಾಧಾನ, ಅಪನಂಬಿಕೆಗಳು ಮೂಡಿ ಮನಸ್ಸನ್ನು ಕಲ್ಮಶಗೊಳಿಸುತ್ತವೆ. ಹಾಗಾಗಿ ಬದುಕಿನಲ್ಲಿ ದೇವರು ಎಷ್ಟು ದಯಪಾಲಿಸುವನೋ ಅಷ್ಟಕ್ಕೇ ಸೀಮಿತವಾಗಿದ್ದು ಬಿಡಬೇಕು. ಬೇರೆಯವರನ್ನು ಎಂದಿಗೂ ಅನುಕರಿಸುವುದು ಒಳ್ಳೆಯದಲ್ಲ. ಅಷ್ಟಕ್ಕೂ ಈ ಬದುಕೆಂಬುದು ಇತರರಿಗೆ ಹೋಲಿಸಿಕೊಂಡು ಹೊರೆಯುವ ಸರಕಿನಂತಲ್ಲ.

ಮೌನವಾಗಿ ಕುಳಿತಿರುವಾಗ ನಮ್ಮೊಳಗೆ ದೇವರು ಪ್ರೀತಿಯಿಂದ ದಿನದಿನವೂ ಮಾತಾಡುತ್ತಿರುತ್ತಾನೆ. ನಮ್ಮ ಚಲನವಲನಗಳನ್ನು ಗಮನಿಸುತ್ತಿರುತ್ತಾನೆ. ತಪ್ಪು ದಾರಿ ಮನದಲ್ಲಿ ನುಸುಳಿದರೆ ಸಾಕು ಜಾಗೃತನಾಗಿಸುತ್ತಾನೆ. ಬುದ್ಧಿಮಾತಿನಿಂದ ಒಳಗಿನಿಂದಲೇ ತಿವಿಯಲು ಪ್ರಾರಂಭಿಸುತ್ತಾನೆ. ಅಷ್ಟಕ್ಕೂ ಬಗ್ಗುವ ಮನಸ್ಸು ಕೆಲವೊಮ್ಮೆ ಬಾರದೇ ಕೊನೆಗೆ ಪಶ್ಚಾತ್ತಾಪದ ದಾರಿಯೊಂದು ಕಾಣಬರುತ್ತದೆ. ಹಾಗಾಗಿ ದೇವರ ಬಳಿ ನಾವು ಸದಾ ವಿನಯವಂತರಾಗಿ ಮಾತಾಡಬೇಕು. ತುಸು ಏರು ಧ್ವನಿ ಬಂದರೂ ತಕ್ಷಣ ಜಾಗೃತರಾಗುವ ಒಳ ಮನಸ್ಸು ಬರಬೇಕು. ಹಾಗಾಗಿ ಜೀವನ ಸಾಗುವ ಎಲ್ಲಾ ಕಾಲದಲ್ಲೂ ಪರಿತಾಪ ಬರಲಾರದು. ಅಮ್ಮಾ.. ಎಂದು ಮಗು ಕರೆಯೆ ಲೋಕಮಾತೆ ಪ್ರತ್ಯಕ್ಷಳಾದಂತೆ ಅಮ್ಮ ಓಡಿ ಬರುವಂತೆ ಮನದೊಳಗೆ ಸದಾ ಮಕ್ಕಳ ಯಶಸ್ಸು ಬಯಸುವ ಮಾತೆಯೂ ಆಗಿದ್ದಾಳೆ. ಮಕ್ಕಳು ತಪ್ಪು ಮಾಡಿದಾಗ ದಂಡಿಸುವ ಕಾರ್ಯ ಆಕೆಗೆ ಸಹಜ. ಅಂತೆಯೇ ಈ ಜೀವನ ಹೊರತು ತಿರುಗಿ ಅಮ್ಮನಿಗೆ ಎದುರು ಮಾತಾಡುವ ಹಕ್ಕು ಎಂದಿಗೂ ಇಲ್ಲ.

ಈ ಚಂಚಲವಾದ ಮನಸ್ಸು ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ನಾಲಿಗೆಯನ್ನು ಬಳಸುವುದು ಸರ್ವೇಸಾಮಾನ್ಯ. ಸುಂದರ ಭಾವನೆಗಳಿರುವ ಸಂದರ್ಭದಲ್ಲಿ ಹಿತವಾದ ನುಡಿಗಳು ಪ್ರತಿಫಲಿಸುತ್ತವೆ. ಒಂದು ವೇಳೆ ಮನಸ್ಸು ದ್ವಂದ್ವಗಳಿಂದ ತೊಳಲಾಡುತ್ತಿದ್ದರೆ ಅದು ಬಾಹ್ಯವಾಗಿ ಎದುರು ಬಂದವರ ಮೇಲೆ ತೀಕ್ಷ್ಣತೆಯನ್ನು ವ್ಯಕ್ತಪಡಿಸುತ್ತದೆ. ಮನಸ್ಸನ್ನು ಸಂಯಮದಲ್ಲಿಟ್ಟುಕೊಂಡು ಬದುಕುವುದೇ ಒಂದು ದೊಡ್ಡ ತಪಸ್ಸು. ಬಾಹ್ಯ ಆಕರ್ಷಣೆಗಳು ಕಾಡಿ ಜೀವನವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಸಾಕು ಎಂಬ ಭಾವನೆಯಿದ್ದಾಗ ಆಕರ್ಷಣೆಗಳು ತಾವು ಬಂದ ದಾರಿಗೆ ಸುಂಕವಿಲ್ಲವೆಂದರಿತು ಸುಮ್ಮನಾಗುತ್ತವೆ. ಆದರೆ ಪೂರ್ತಿ ತೊಲಗಿರುವುದಿಲ್ಲ. ಹಾಗಾಗಿ ಆಕರ್ಷಣೆಗಳಿಂದ ದೂರವಿರಲು ಭಗವಂತ ನಾಮಸ್ಮರಣೆ ಪ್ರತಿಕ್ಷಣ ನಡೆಯುತ್ತಿರಬೇಕು. ಅಸ್ಥಿರವಾದ ಬದುಕಿನಲ್ಲಿ ಸುಸ್ಥಿರ ಭಾವನೆ ಬರಲು ಇದುವೇ ರಹದಾರಿ. ಅದುವೇ ಪರಮ ಗುರಿಯಾಗಿರಲಿ.

ನೀರಿನ ಗುಳ್ಳೆಯಂತೆ ಈ ಭೂಮಿಯ ಮೇಲೆ ಬದುಕು ಅಶಾಶ್ಚತವೆಂದರಿತಿದ್ದರೂ ಅಮರರೆಂದು ಭಾವಿಸುವ ಸಂತೆಯೊಳಗೆ ಬೊಂತೆ ಕಾಯುವ ಕೆಲಸ ಸರ್ವಥಾ ಸಲ್ಲದು. ಪ್ರಕೃತಿಯೊಡನೆ ಸಹಬಾಳ್ವೆ ನಡೆಸುತ್ತ ಬದುಕು ಸಾಗಿಸುವ ಭಾವ ತೀವ್ರವಾಗಬೇಕು. ಪ್ರಕೃತಿಯಿಲ್ಲದೇ ಈ ಜನಮಾನಸರಿಲ್ಲ. ಆದರೆ ಜನರಿಲ್ಲದೇ ಈ ಪ್ರಕೃತಿ ನಿತ್ಯ ನೂತನೆಯಾಗಿರಲು ಸಾಧ್ಯ. ಇದನ್ನು ಅರಿಯದ ಮೂಢ ಜನರು ಅಬ್ಬರ ಪ್ರತಿಷ್ಟೆಗಳಂತಹ ವಿವಿಧ ತೋರಿಕೆಗಳಂತಹ ಆಡಂಬರ ಕಾರ್ಯ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆಂತರಿಕವಾಗಿ ದೇವರ ಕೃಪೆಗೆ ಇವುಗಳ ಅಗತ್ಯವೇ ಇರುವುದಿಲ್ಲ. ಆಡಂಬರದ ಪೂಜೆಯನೊಲ್ಲನೋ ಶ್ರೀ ಹರಿ ಎಂದು ದಾಸವರೇಣ್ಯರು ಹೇಳಿರುವ ಮಾತು ಎಂದೆಂದಿಗೂ ನಿತ್ಯ ಸತ್ಯ. ಜಗವನ್ನು ಬೆಳಗಿಸಲು ಬರುವ ನೇಸರ ಯಾವತ್ತೂ ತನಗೆ ಅಬ್ಬರ ಆಡಂಬರ ಬೇಕೆನ್ನುವುದಿಲ್ಲ. ಕಾರ್ಯ ನಿರ್ವಹಿಸಿ ತನ್ನ ಪಾಡಿಗೆ ತಾನು ಈ ಜಗತ್ತನ್ನು ನಿತ್ಯವೂ ಬೆಳಗಿಸುತ್ತಿರುತ್ತಾನೆ. ಅಂತಹ ಸಾಧನೆಯ ಹೆಜ್ಜೆ ಪ್ರತಿದಿನ ಮನದೊಳಗೆ ನಡೆದು ಬರುತ್ತಲಿರಲಿ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಅಂಕಣಕಾರರು
[email protected]

- Advertisement -

Related news

error: Content is protected !!