

ಬೆಳ್ತಂಗಡಿ: ನಾಪತ್ತೆಯಾಗಿದ್ದ ಬಾಲಕ ನೀರುಪಾಲಾಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಮೊರಂತಕಾಡು ಸೇತುವೆ ಬಳಿ ಬುದವಾರ ಸಂಭವಿಸಿದೆ. ಮೃತ ಬಾಲಕ ಮಾರ್ಟಿನ್ ಪಿಂಟೋ (15) ಎನ್ನಲಾಗಿದೆ.

ಘಟನೆಯ ವಿವರ:
ಮೃತ ಬಾಲಕನ ತಾಯಿ ಹೆಲನ್ ಪಿಂಟೋ ಅವರು ಮಾರ್ಟಿನ್ ಪಿಂಟೋ ಮತ್ತು ಮೆಲ್ ರಾಯ್ ಪಿಂಟೋ ಎಂಬ ಮಕ್ಕಳೊಂದಿಗೆ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಿಂಟೋ ನಗರ ಎಂಬಲ್ಲಿ ವಾಸವಾಗಿದ್ದು, ಗಂಡ ಮೆಲ್ವಿನ್ ಪಿಂಟೋ ವಿದೇಶದಲ್ಲಿರುತ್ತಾರೆ. ಮಗ ಮಾರ್ಟಿನ್ ಪಿಂಟೋ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯಾಗಿರುತ್ತಾನೆ.
ಅ.19ರಂದು ಮದ್ಯಾಹ್ನ ಸಮಯದಲ್ಲಿ ಹೆಲನ್ ಪಿಂಟೋ ಅವರು ನೆರೆಮನೆಯ ಮೆಲ್ವಿನ್ ರೋಡ್ರಿಗಸ್ ಮತ್ತು ಸೆಲಿನ್ ರೋಡ್ರಿಗಸ್ ರವರೊಂದಿಗೆ ಮೂಡಬಿದ್ರೆಯ ಆಸ್ಪತ್ರೆಗೆ ಹೋಗಿದ್ದರು. ಬಳಿಕ ಅಲ್ಲಿಂದ ವಾಪಸು ಮೂಡಬಿದ್ರೆಯಿಂದ ಮನೆಗೆ ಬಂದಾಗ ಮನೆಯಲ್ಲಿದ್ದ ಮಾರ್ಟಿನ್ ಪಿಂಟೋ ಕಾಣೆಯಾಗಿದ್ದು, ಇನ್ನೊಬ್ಬ ಮಗ ಮನೆಯಲ್ಲಿರುತ್ತಾನೆ.

ಈ ಬಗ್ಗೆ ಅಕ್ಕಪಕ್ಕದಲ್ಲಿ ಹುಡುಕಾಡಿದಾಗ ಮನೆಯ ಸಮೀಪದ ಮೊರಂತಕಾಡು ಸೇತುವೆ ಕೆಳಗಿರುವ ಮುರಿದ ಹಳೆಯ ಸೇತುವೆ ಬಳಿ ಕಾಣೆಯಾದ ಬಾಲಕನ ಶರ್ಟ್,ಬೈರಸು ಮತ್ತು ಚಪ್ಪಲಿ ಪತ್ತೆಯಾಗಿದೆ. ಅಲ್ಲದೇ ಮನೆಯಲ್ಲಿ ಬಟ್ಟೆ ಒಣಗಲು ಹಾಕುವ ನೈಲಾನ್ ದಾರವನ್ನು ಹೊಳೆಯ ನೀರಿನಲ್ಲಿರುವ ಗಿಡಕ್ಕೆ ಕಟ್ಟಿದ್ದು ಅದರ ಇನ್ನೊಂದು ತುದಿ ಸೇತುವೆ ಮೇಲೆ ಇರುತ್ತದೆ.
ಈ ಬಗ್ಗೆ ಬಾಲಕನ ತಂದೆ ಮೆಲ್ವಿನ್ ಪಿಂಟೋ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಿದ್ದರು. ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ಶೋದ ನಡೆಸಿ ಬಾಲಕನ ಮನೆ ಸಮೀಪವಿರುವ ಪಲ್ಗುಣಿ ನದಿಯಲ್ಲಿ ಮೊರಂತಕಾಡು ಸೇತುವೆಯ ಬಳಿ ಇಂದು ಬಾಲಕನ ಮೃತದೇಹ ಪತ್ತೆಯಾಗಿದೆ.










