Tuesday, June 9, 2026
spot_imgspot_img
spot_imgspot_img

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ; ಅಪರಾಧಿಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆ!

- Advertisement -
- Advertisement -

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಶಿಕ್ಷೆಗೊಳಗಾದ ಆರೋಪಿ ಮೂಲತಃ ಗದಗ ಜಿಲ್ಲೆಯ ಮೂಲದ ಹಾಗೂ ಸದ್ಯ ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಮಲ್ಲಿಕಾರ್ಜುನ ಹನುಮಂತಪ್ಪ (27) ಎನ್ನಲಾಗಿದೆ.

ಘಟನೆಯ ವಿವರ:
ಮಲ್ಲಿಕಾರ್ಜುನ ಮತ್ತು ಸಂತ್ರಸ್ತೆ ಬಾಲಕಿಯ ಮನೆ ಅಕ್ಕಪಕ್ಕದಲ್ಲಿತ್ತು. ಮಲ್ಲಿಕಾರ್ಜುನ ಮತ್ತು ಸಂತ್ರಸ್ತೆಯ ತಂದೆ ಸ್ನೇಹಿತರಾಗಿದ್ದು ಜತೆಯಲ್ಲಿಯೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮಲ್ಲಿಕಾರ್ಜುನ ತನ್ನ ಸ್ನೇಹಿತನ ಪುತ್ರಿಯಾದ 16 ವರ್ಷದ ಬಾಲಕಿಯನ್ನು ವಿವಾಹವಾಗುವುದಾಗಿ ನಂಬಿಸಿ ಪುಸಲಾಯಿಸಿ, 2017ರ ಮೇ ತಿಂಗಳಿನಲ್ಲಿ ಅಪಹರಿಸಿದ್ದ. ಬಳಿಕ ಬಾಲಕಿ ನಾಪತ್ತೆಯಾದ ಬಗ್ಗೆ ಹೆತ್ತವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿ ಗೋವಾದಲ್ಲಿ ಬಾಲಕಿಯ ಜತೆಗಿದ್ದು ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ. ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಬಾಲಕಿ ಗೋವಾದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆರೋಪಿಯು ಬಾಲಕಿ ಮತ್ತು ಮಗುವನ್ನು ಬಿಟ್ಟು ಪರಾರಿಯಾಗಿದ್ದ. ಹೆತ್ತವರಿಗೆ ಈ ವಿಚಾರ ತಿಳಿಸದಂತೆ ಜೀವ ಬೆದರಿಕೆಯನ್ನೂ ಹಾಕಿದ್ದ. ವಿಚಾರ ತಿಳಿದ ಬಾಲಕಿಯ ಹೆತ್ತವರು ಬಾಲಕಿಯನ್ನು ಆಕೆಯ ಮನೆಗೆ ಕರೆದುಕೊಂಡು ಬಂದು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿ ವಿರುದ್ಧ ಅಪಹರಣ, ಅತ್ಯಾಚಾರ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ(ಪೊಕ್ಸೋ) ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಎಸಿಪಿಗಳಾದ ರಾಜೇಂದ್ರ, ಮಂಜುನಾಥ ಶೆಟ್ಟಿ ಮತ್ತು ಶ್ರೀನಿವಾಸ ಗೌಡ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ 6 ವರ್ಷ ಕಠಿಣ ಜೈಲುಶಿಕ್ಷೆ ಹಾಗೂ 25,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಜೆ, ಅಪಹರಣ ನಡೆಸಿರುವುದಕ್ಕೆ 6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 2 ತಿಂಗಳು ಹೆಚ್ಚುವರಿ ಸಜೆ, ಮದುವೆಯಾಗುವುದಾಗಿ ಹೇಳಿ ವಂಚಿಸಿರುವುದಕ್ಕೆ 6 ತಿಂಗಳು ಕಠಿಣ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 15 ದಿನಗಳ ಸಜೆ, ಪೊಕ್ಸೋ ಕಾಯ್ದೆಯ ಕಲಂನಡಿ 12 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ 25 ಸಾಕ್ಷಿಗಳನ್ನು ವಿಚಾರಿಸಲಾಗಿದ್ದು, ಪ್ರಾಸಿಕ್ಯೂಷನ್ ಪರ ವಿಶೇಷ ಸರಸ್ಕಾರಿ ಅಭಿಯೋಜಕ (ಪೋಕ್ಸೋ) ವೆಂಕಟರಮಣ ಸ್ವಾಮಿ ಸಿ. ಅವರು ವಾದಿಸಿದ್ದರು. ಅಪರಾಧಿಗೆ ವಿಧಿಸಿರುವ ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 50,000 ರೂ. ಪರಿಹಾರ ನೀಡಬೇಕು. ಅಲ್ಲದೆ, ಸರಕಾರ 2.50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

driving
- Advertisement -

Related news

error: Content is protected !!