Sunday, May 5, 2024
spot_imgspot_img
spot_imgspot_img

ಮಣ್ಣಿನ ಗುಣ ಯೋಗ ನಡಿಗೆಯ ಪಾತ್ರಕ್ಕೆ ಪ್ರೇರಣೆ – ಮಲ್ಲಿಕಾ ಜೆ ರೈ ಪುತ್ತೂರು

- Advertisement -G L Acharya panikkar
- Advertisement -
vtv vitla

ಮತ್ತ: ಪರತರಂ ನಾನ್ಯತ್
ಕಿಂಚಿದಸ್ತಿ ಧನಂಜಯ |
ಮಯಿ ಸರ್ವಮಿದಂ ಪ್ರೋತಮ್
ಸೂತ್ರೇ ಮಣಿಗಣಾ ಇವ ||7-7||
ಭಗವಂತನೇ ಸಮಸ್ತ ವಿಶ್ವದ ಪರಮ ಕಾರಣ ಮತ್ತು ಪರಮಾಧಾರನಾಗಿದ್ದಾನೆ. ಹಾಗಾಗಿ ಸ್ವಭಾವತಃ ಇದು ಭಗವಂತನ ಸ್ವರೂಪವಾಗಿದೆ ಮತ್ತು ಅವನಿಂದಲೇ ವ್ಯಾಪ್ತವಾಗಿದೆ. ಹಾಗಾಗಿ ಈ ಮಾತನ್ನು ಸ್ಪಷ್ಟಪಡಿಸುವುದಕ್ಕಾಗಿ ಭಗವಂತನು ಹೇಳುತ್ತಾನೆ. ಹೇ ಧನಂಜಯನೇ, ನನಗಿಂತ ಶ್ರೇಷ್ಠವಾದ ಇನ್ನೊಂದು ವಸ್ತು ಯಾವುದೂ ಇಲ್ಲ. ಈ ಸಂಪೂರ್ಣ ಜಗತ್ತು ದಾರದಲ್ಲಿ ಪೋಣಿಸಿದ ಮಣಿಗಳಂತೆ ನನ್ನಲ್ಲಿ ಪೋಣಿಸಲ್ಪಟ್ಟಿವೆ. ದಾರ ಮತ್ತು ದಾರದ ಮಣಿಗಳ ದೃಷ್ಟಾಂತದಿಂದ ಭಗವಂತನು ತನ್ನ ಸರ್ವರೂಪತೆಯನ್ನು ಮತ್ತು ಸರ್ವವ್ಯಾಪಕತೆಯನ್ನು ಸಿದ್ಧಪಡಿಸಿದನೆoಬುದು ನಾವು ತಿಳಿಯತಕ್ಕಅಂಶಗಳಾಗಿವೆ.

ಅನುಭವಗಳು ಬಹುರೂಪಿಯಾಗಿರುತ್ತವೆ. ಅಂದರೆ ಒಂದಕ್ಕಿಂತ ಹೆಚ್ಚು ಧನಾತ್ಮಕ ಅಥವಾ ಋಣಾತ್ಮಕ ಅನುಭವಗಳು ಎಲ್ಲರ ಗಮನಕ್ಕೆ ಬಂದೇ ಬರುತ್ತವೆ. ಆದರೆ ಅದನ್ನು ಶುದ್ಧ ಹೃದಯದಿಂದ ಅರಿಯುವ ಪ್ರಯತ್ನವಾಗಬೇಕು. ಅವನ್ನು ಕುದಿಸಿ ಸೋಸುವಂತ ಪ್ರಕ್ರಿಯೆಗೆ ಒಳಪಡಿಸಬೇಕು.ಅದಕ್ಕೆ ಒಳ್ಳೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಗ ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿ ಬಿಡುತ್ತೇವೆ. ಆಗ ಮಾತ್ರ ಬದುಕನ್ನು ಆನಂದದಿಂದ ಅನುಭವಿಸಲು ಸಾಧ್ಯವಾಗುತ್ತದೆ. ಅನುದಿನವೂ ಮಾಡುವ ಅಭ್ಯಾಸಗಳೇ ನಮ್ಮನ್ನು ಬಲಯುತವನ್ನಾಗಿ ಮಾಡುತ್ತವೆ. ದಿನವೂ ದೇಹಕ್ಕೆ ಶ್ರಮಭರಿತ ದುಡಿಮೆ ದೃಢಚಿತ್ತವನ್ನು ಹೆಚ್ಚಿಸುವಂತೆ ಪ್ರೇರೇಪಣೆ ಮಾಡುತ್ತದೆ.

ಹಾಗಾಗಿ ದೇಹವನ್ನು ಪರಿಪೂರ್ಣಗೊಳಿಸುವುದಕ್ಕೆ ನಾವು ಒಂದರ್ಧ ಗಂಟೆಯಾದರೂ ಯೋಗಕ್ಕೆ ನೀಡಿದಲ್ಲಿ ದಿವ್ಯ ಅನುಭವವನ್ನು ಪಡೆಯಲು ಸಾಧ್ಯ. ಯೋಗಕ್ಕೆ ದೇಹ, ಪ್ರಾಣಾಯಾಮಕ್ಕೆ ಉಸಿರು, ಧ್ಯಾನಕ್ಕೆ ಮನಸ್ಸು ಕ್ರಮವಾಗಿ ಜೋಡಿಸಿಕೊಳ್ಳಬೇಕು. ಇವಕ್ಕೆಲ್ಲ ಭಾವನೆ ಮುಖ್ಯವಾಗಿ ಇರಬೇಕು. ಆಗ ಮಾತ್ರ ಮಾಡಿದಂತಹ ಕ್ರಿಯೆಗಳು ಸಾರ್ಥಕ ಪಡೆಯುತ್ತವೆ. ಕತ್ತಲೆ ಇರುವಲ್ಲಿ ದೀಪದ ಬುಡ್ಡಿ ಇಡುತ್ತೇವೆ ಅಥವಾ ಟಾರ್ಚ್ ಹಾಕುತ್ತೇವೆ. ಆಗ ಬೆಳಕಿನ ಮಹತ್ವ ಅರಿಯುತ್ತೇವೆ. ‘ಸ್ಥಿರಂ ಸುಖಂ ಆಸನಂ’ ಈ ಸೂಕ್ತಿಯನ್ನು ಅನುಸರಿಸಿದಲ್ಲಿ ದಿವ್ಯ ಅನುಭವ ಪಡೆಯುತ್ತೇವೆ. ಅಲ್ಲಿಯೂ ಒಂದು ಮಾತಿದೆ. ನಾನು ನನ್ನಿಂದ ಎಂಬ ಅಹಂ ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಈ ಶರೀರವೆಂಬುದು ಮಣ್ಣಿನ ಮಡಕೆಯೇ ಆಗಿದೆ. ದೇವರು ಕೊಟ್ಟಂತಹ ಈ ಮಣ್ಣಿನ ಮಡಿಕೆಯಲ್ಲಿ ನಾವು ತುಂಬಿದ್ದನ್ನು ಚೆಲ್ಲುತ್ತಿರಬೇಕು. ಹಾಗೆಯೇ ಧನಾತ್ಮಕ ಅಂಶಗಳೊಂದಿಗೆ ಹೊಸದನ್ನು ತುಂಬುತ್ತಿರಬೇಕು. ಕಳೆದುಕೊಂಡ ಮೇಲೆ ತಾನೇ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದು.

ಯೋಗ ಅಂದರೆ ಯೋಗ್ಯತೆ. ಯೋಗ ಮಾಡಲು ಮನಸ್ಸು ಬೇಕು. ಮನಸೇ ಬಾರದಿದ್ದರೆ ಯೋಗವೂ ಇಲ್ಲ, ಯೋಗ್ಯತೆಯು ಬರಲ್ಲ. ಹಾಗಾಗಿ ನಮ್ಮ ದೇಹದ ಎಲ್ಲಾ ಭಾಗಗಳನ್ನು ಸಡಿಲಗೊಳಿಸುತ್ತಾ ನಾವು ಪ್ರಕೃತಿಯೊಂದಿಗೆ ಲೀನವಾಗಬೇಕು. ನಾವು ಹುಟ್ಟಿ ಬರುವಾಗ ಹೇಗೆ ಪ್ರಕೃತಿಯೊಡನೆ ಒಂದಾಗಿ ಬೆಳೆಯುತ್ತೇವೋ ಹಾಗೆ. ಆದರೆ ಬರ ಬರುತ್ತಾ ಬೆಳೆಯುತ್ತಾ ನಮ್ಮ ಮನಸ್ಸನ್ನು ಸಂಕುಚಿತಗೊಳಿಸಿ ನಾನು ನನ್ನದು ಎಂಬ ಭಾವಕ್ಕೆ ಬಲಿಪಶುವನ್ನಾಗಿ ಮಾಡುತ್ತೇವೆ. ಯೋಗ ಸಾಧನೆಯಿಂದ ನಾನು ನನ್ನದು ಎಂಬ ಭಾವ ಕ್ಷೀಣಗೊಂಡು ಅಂತರಾತ್ಮನೊಡನೆ ಸಖ್ಯ ಬೆಳೆಸುವ ಪಯಣದಿಂದ ವಿಕಸನಗೊಳ್ಳುತ್ತೇವೆ. ಈ ದಿವ್ಯ ಅನುಭವವನ್ನು ಪಡೆಯಲು ನಮ್ಮ ದೇಹವನ್ನು ಹಿತವಾಗಿ ದಂಡಿಸುವ ಯೋಗ್ಯತೆಯನ್ನು ಪಡೆದುಕೊಳ್ಳಬೇಕು. ನಮ್ಮ ದೇಹದೊಳಗೆ ಸಪ್ತ ಚಕ್ರಗಳು ಸುತ್ತುತ್ತಿರುತ್ತವೆ. ಮೇರುದಂಡದಿಂದ ಈ ಸಪ್ತ ಚಕ್ರಗಳು ಜಾಗೃತಗೊಳ್ಳುತ್ತವೆ. ನಂಬಿಕೆ ಅದೇ ರೀತಿ ತೊಡಗಿಸಿಕೊಳ್ಳುವಿಕೆ ಮಾತ್ರ ನಮ್ಮೊಳಗೆ ದಿನನಿತ್ಯವೂ ಮೊಳಕೆಯೊಡೆಯುತ್ತಿರಬೇಕು. ‘ಯದ್ಭಾವಂ ತದ್ಭವತೇ’ ನಮ್ಮೊಳಗೆ ನಾವು ಧನಾತ್ಮಕತೆಯನ್ನು ಹೊಂದುತ್ತಾ ಸತ್ಸಂಗಿಗಳಾಗಬೇಕು.

ಈಗಿನ ಹೆಚ್ಚಿನ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಋಣಾತ್ಮಕ ವಿಷಯಗಳು ಬರುತ್ತಿರುತ್ತವೆ. ಆ ಋಣಾತ್ಮಕ ವಿಷಯಗಳಿಗೆ ಮನಸ್ಸನ್ನು ಕೆಡಿಸಿಕೊಳ್ಳಬಾರದು. ಬದಲಾಗಿ ಧನಾತ್ಮಕ ಅಂಶಗಳನ್ನು ಮನಸ್ಸಿನೊಳಗಡೆ ತುಂಬಿಸಿಕೊಳ್ಳುತ್ತಿರಬೇಕು. ಆಗಲೇ ಬರಿದಾಗುವಿಕೆ ಪ್ರಾರಂಭವಾಗುತ್ತದೆ. ಅಪರಿಗ್ರಹ ಎಂದರೆ ಹಾಗೆ . ಆಹಾರ ಸೇವಿಸುವ ಮೊದಲು ನಾವು ಪಾತ್ರವನ್ನು ಹೇಗೆ ಸ್ವಚ್ಛಗೊಳಿಸುತ್ತೇವೆಯೋ ಅದೇ ರೀತಿ ಮನಸ್ಸಿನಲ್ಲಿರಬಹುದಾದಂತಹ ಕೆಟ್ಟ ಭಾವನೆಯನ್ನು ಗದ್ದೆಯಲ್ಲಿರುವ ಕಳೆಯನ್ನು ಕಿತ್ತು ತೆಗೆದು ಸ್ವಚ್ಛಗೊಳಿಸುವಂತೆ ತೊಡೆದುಬಿಡಬೇಕು. ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಹಾಕಿ ಸ್ವ ಅಧ್ಯಾಯ ಮಾಡುತ್ತಿರಬೇಕು. ಎಲ್ಲವೂ ಆ ಭಗವಂತನದೇ “ಈಶ್ವರ ಪ್ರಣಿದಾನ” ಎಂಬಂತೆ ನಿನ್ನ ಕರ್ಮ ನೀನು ಮಾಡು, ಅದರ ಫಲವನ್ನು ಮೇಲೊಬ್ಬ ಕೊಟ್ಟೇ ಕೊಡುತ್ತಾನೆ ಎಂಬ ನಂಬಿಕೆಯಿಂದ ಕೂಡಿ ಅಷ್ಟಾಂಗ ಯೋಗ ಜೀವನ ಮಾಡಬೇಕು. ಅಂದರೆ ಸುಳ್ಳು ಹೇಳಬಾರದು ಇತರರಿಗೆ ನೋವು ಮಾಡಬಾರದು. ಹಾಗಾದಲ್ಲಿ ಸಾಧಕರಾಗಲು ಇದುವೇ ಸುಲಭವಾದ ದಾರಿಯಾಗಿದೆ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಯಾವಾಗಲೂ ನಾವು ಶಿಷ್ಯರೇ ಎಂಬಂತಹ ಭಾವನೆಯೊಂದಿಗೆ ಮನುಜರು ಬಾಳುವೆ ನಡೆಸಬೇಕಿದೆ. ಭಗವಾನ್ ಬುದ್ಧನ ಜ್ಞಾನೋದಯದ ಪ್ರಭಾವ ಎಷ್ಟು ಇತ್ತೆoದರೆ ಬುದ್ಧ ನಡೆದು ಬರುವನೆಂದು ದಾರಿಯಲ್ಲಿ ಹೂಗಳೆಲ್ಲ ಅರಳಿ ನಿಲ್ಲುತ್ತಿದ್ದವಂತೆ. ಆತನ ಪ್ರಭಾವದ ಸೆಳಹು ತಮಗೂ ಬರಲಿ ಎಂದು. ಅಂತಹ ತನ್ಮಯತೆ ಆ ಹೂವುಗಳಿಗಿತ್ತು. ನಾವು ಕೂಡಾ ಅಂತಹ ತನ್ಮಯತೆಯಿಂದ ಒಳಿತಾಗುವುದನ್ನು ಮಾಡಿ ಈ ಮಾನುಷ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಅಂತಹ ದಿಟ್ಟ ನಿರ್ಧಾರಕ್ಕೆ ಮನ ಮಾಡಬೇಕು. ಹೇಗೆಂದರೆ ಬುದ್ಧನೊಮ್ಮೆ ಹೊಳೆಯಲ್ಲಿ ಸ್ನಾನ ಮಾಡಬೇಕಾದಾಗ ಒಂದು ದಿನ ಚೇಳು ನೀರಲ್ಲಿ ಮುಳುಗ್ತಾ ಇರುವುದನ್ನು ನೋಡಿ ತಂದು ದಡದ ಮೇಲಿಟ್ಟ. ಅದರ ಸ್ವಭಾವತ: ಗುಣವನ್ನು ಬಿಡದೆ ಆತನ ಬೆರಳಿಗೆ ಕಚ್ಚಿತು. ಬುದ್ಧ ಸುಮ್ಮನಿದ್ದ. ಆದರೂ ಆ ಚೇಳು ಚಲಿಸುತ್ತಾ ಪುನಃ ಹೊಳೆಯ ಕಡೆಗೆ ಸರಿದು ನೀರಿಗೆ ಪುನಃ ಬಿತ್ತು. ಯಥಾ ಸ್ಥಿತಿಯಂತೆ ಬುದ್ಧ ಇನ್ನೊಮ್ಮೆ ಎತ್ತಿ ಚೇಳನ್ನು ದಡದಲ್ಲಿ ಬಿಟ್ಟ. ಪುನಃ ಕಚ್ಚಿ ಬಿಟ್ಟಿತು. ಆದರೂ ಬುದ್ಧ ಅದಕ್ಕೆ ಏನೂ ಮಾಡಲಿಲ್ಲ. ಇದರಿಂದ ಆತನ ಶಿಷ್ಯರಿಗೆ ಕೋಪ ಬಂತು. ಬುದ್ಧ ಚೂರೂ ಮನವನ್ನು ನೋಯಿಸಿಕೊಳ್ಳಲಿಲ್ಲ. ಶಿಷ್ಯರು ಆತನಲ್ಲಿ ಪ್ರಶ್ನಿಸಿದಾಗ ಹೀಗೆ ಹೇಳುತ್ತಾನೆ. ಅದರ ಗುಣ ಕಚ್ಚುವುದು ಆದರೆ ನನ್ನ ಗುಣ ಉಳಿಸುವುದು ಎನ್ನುತ್ತಾನೆ. ಎಲ್ಲವನ್ನೂ ಒಳ್ಳೆಯದು ಮಾಡಬೇಕು, ಇನ್ನೊಬ್ಬರನ್ನು ನೋಯಿಸಬಾರದು, ನರಳಿಸಬಾರದು. ಇದು ಇಂದಿನ ವಾಸ್ತವಿಕತೆಗೆ ಮೂಲ ಪಾಠವಾಗಿದೆ. ಹಾಗಾಗಿ ಅದಕ್ಕೆ ಸ್ವ ಅಧ್ಯಾಯ ಮಾಡಬೇಕು. ಭಾವನೆ ಹೇಗಿದೆಯೋ ಆಚರಣೆಗಳು ಹಾಗೇ ಇರುತ್ತದೆ.

ಉತ್ತಮ ಭಾವನೆಗಳನ್ನು ಬೆಳೆಸಿಕೊಳ್ಳುವಲ್ಲಿ ಯೋಗ ಒಂದು ಸರಳ ಸೂತ್ರವಾಗಿದೆ. ಮಣ್ಣಿನೊಡನೆಯೂ ಇದೇ ರೀತಿಯ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹಕಾರಿ. ಇನ್ನೊಬ್ಬರ ಭೂಮಿಯನ್ನು ಕಬಳಿಸಿ ತಾನೊಬ್ಬನೇ ಅನುಭವಿಸುವುದು ಕೊಲೆ ಮಾಡುವುದಕ್ಕಿಂತಲೂ ಹೆಚ್ಚು ಅಪರಾಧವಾಗಿದೆ. ಮಣ್ಣಿನ ಸಹಬಾಳ್ವೆಯ ಗುಣವನ್ನು ಮನುಷ್ಯ ಅರಿತಾಗ ಮಾತ್ರ ಮಣ್ಣು ಮಣ್ಣಾಗಿ ಉಳಿಯಲು ಸಾಧ್ಯವಾಗುವುದು. ಆ ಮನುಜ ನನ್ನನ್ನು ಮುಟ್ಟಬೇಡ, ಈ ಮನುಜ ನನ್ನಲ್ಲಿ ಹೆಜ್ಜೆಯಿಡಬೇಡ ಎಂದು ಯಾವತ್ತೂ ತಾತ್ಸರ್ಯ ಮಾಡಿಲ್ಲ. ಹಾಗಾಗಿ ಮಣ್ಣು ಸಕಲ ಕಲಾ ವಲ್ಲಭರಿಂದ ಹಿಡಿದು, ಅಣು ರೇಣು ತೃಣ ಕಾಷ್ಟಗಳಿಗೂ ಸಲ್ಲುವಂತಹುದೇ ಆದಂತೆ, ಮನುಷ್ಯ ಪ್ರಾಣಿಯೂ ಎಲ್ಲರಿಗೂ ಒಳಿತನ್ನೇ ಬಯಸುವ ಮನವನ್ನು ಹೊಂದಿಸಲು ಯೋಗನಡಿಗೆಯ ಪಾತ್ರಕ್ಕೆ ಒಳಗಾಗಬೇಕಿದೆ.

✍️ ಮಲ್ಲಿಕಾ ಜೆ ರೈ ಪುತ್ತೂರು
ಅಂಕಣಕಾರರು
ದರ್ಬೆ ಪುತ್ತೂರು 574202

- Advertisement -

Related news

error: Content is protected !!