Monday, May 6, 2024
spot_imgspot_img
spot_imgspot_img

ಮೈದಾನದಂತಾದ ಜೀವನದಿ ನೇತ್ರಾವತಿ; ಪಶ್ಚಿಮ ಘಟ್ಟವನ್ನು ಪ್ರಯೋಗ ಶಾಲೆ ಮಾಡಿದ ಗತಿಯಿದು..! ಪೈಪ್‌ಲೈನ್ ಕಾಮಗಾರಿ ನೆಪ – ನಗರಕ್ಕೆ ನೀರು ರೇಶನಿಂಗ್ ಶುರು

- Advertisement -G L Acharya panikkar
- Advertisement -

ಪಶ್ಚಿಮ ಘಟ್ಟವನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿ ರಾಜಕೀಯ ನಾಯಕರು ಕೋಟಿಗಟ್ಟಲೆ ಹಣ ಮಾಡಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಈ ಬೇಸಿಗೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳೇ ಜ್ವಲಂತ ಸಾಕ್ಷಿ. ನಾಯಕರು ಜೇಬಿಗಿಳಿಸಲು ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವುದು ಕಂಡು ಬಂದರೂ ಅದನ್ನು ಮರೆಮಾಚಲು ಮತ್ತಷ್ಟು ಪ್ರಯತ್ನ. ಎತ್ತಿನಹೊಳೆ ಯೋಜನೆ ಸಂಪೂರ್ಣ ಆಗುವ ಹೊತ್ತಿನಲ್ಲಿ ಕರಾವಳಿ ಬರದ ನಾಡು ಆಗುತ್ತೆ ಅನ್ನುವುದು ಹಲವರ ಅಭಿಪ್ರಾಯ. ಕರಾವಳಿಯ ಜೀವನದಿ ನೇತ್ರಾವತಿಯ ಒಡಲು ಈಗಾಗಲೇ ಬತ್ತಿಹೋಗಿದೆ. ಪಶ್ಚಿಮ ಘಟ್ಟವನ್ನು ಪ್ರಯೋಗಶಾಲೆ ಮಾಡಿಕೊಂಡರೆ ಏನಾಗುತ್ತೆ. ಜನಸಾಮಾನ್ಯರು ಏನೆಲ್ಲಾ ಕಷ್ಟ ಅನುಭವಿಸುತ್ತಾರೆ ಅನ್ನೋದಕ್ಕೆ ಏರುತ್ತಿರುವ ತಾಪಮಾನ, ಅಲ್ಲಲ್ಲಿ ಗುಡ್ಡಗಳು ಬೆಂಕಿಗಾಹುತಿಯಾಗುತ್ತಿರುವುದು, ಏಪ್ರಿಲ್ ಪ್ರಾರಂಭವಾಗುವುದಕ್ಕೆ ಮೊದಲೇ ನೇತ್ರಾವತಿ ನದಿ ಬತ್ತಿರುವುದೇ ಜೀವಂತ ಸಾಕ್ಷಿಗಳು..!

ಹಿಂದೆಂದೂ ಕಾಣದ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಎತ್ತಿನಹೊಳೆ ಯೋಜನೆ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ ಅಷ್ಟರ ಮಟ್ಟಿಗೇನೋ ಬರ, ಪ್ರಕೃತಿ ವಿಕೋಪ ಬಂದಿರಲಿಲ್ಲ. ಅತಿಯಾದ ಮರಗಳ ನಾಶ, ಎತ್ತಿನ ಹೊಳೆಯಂತಹ ಪ್ರಕೃತಿ ವಿರೋಧಿ ಯೋಜನೆಗಳು, ಎಲ್ಲೆಂದರಲ್ಲಿ ತಲೆಎತ್ತಿದ ರೆಸಾರ್ಟ್‌, ಕೆರೆಗಳ ನಾಶ, ಈ ಎಲ್ಲಾ ಅವಾಂತರಗಳಿಗೆ ಮುಖ್ಯ ಕಾರಣ. ಅನ್ನ, ನೀರು, ಉಡೋಕೆ ಬಟ್ಟೆ, ಒಂದೊಳ್ಳೆ ಸೂರು ಇವು ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವುದು. ಬುದ್ಧಿವಂತರ ಜಿಲ್ಲೆಯಲ್ಲಿ ಅನ್ನ, ಬಟ್ಟೆ, ಆಶ್ರಯಕ್ಕೆ ಮುಂದೆ ತೊಂದರೆಯಾಗದಿದ್ದರೂ ಮುಂದೊಂದು ದಿನ ನೀರಿಗೆ ತತ್ವಾರ ಬರಲಿದೆ ಅನ್ನುವುದು ಪರಿಸರ ಹೋರಾಟಗಾರರ ಮಾತುಗಳು. ಈಗ ವೋಟ್‌ ಕೇಳಿಕೊಂಡು ಬರುತ್ತಾರಲ್ಲ ಅವರತ್ತ ಒಂದು ಪ್ರಶ್ನೆ ಎತ್ತಿನ ಹೊಳೆ ಯೋಜನೆ ನಿಲ್ಲಿಸುತ್ತೀರಾ.? ನಮಗೆ ನ್ಯಾಯ ಕೊಡುತ್ತೀರಾ ಎಂದು. ಇದಕ್ಕೆ ಉತ್ತರವೇ ಇಲ್ಲ ಬಿಡಿ. ಯಾಕೆಂದ್ರೆ ಎತ್ತಿನ ಹೊಳೆ ಯೋಜನೆ ಕೋಟ್ಯಾಂತರ ಹಣ ಜೇಬಿಗಿಳಿಸುವ ಹಣದ ಹೊಳೆ. ದುರದೃಷ್ಟಕರ ಎಂದರೆ ಇದು ಅರ್ಥ ಆಗೋರಿಗೆ ಮಾತ್ರ. ಪಶ್ಚಿಮ ಘಟ್ಟವನ್ನು ಉಳಿದರೆ ನಾವು. ಈಗ ಯೋಚಿಸದೇ ಹೋದರೆ ಮುಂದಾಗುವ ಆನಾಹುತಗಳನ್ನು ಊಹಿಸುವುದೂ ಅಸಾಧ್ಯ.

ಸುಮಾರು 8 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನದಿಯೊಂದು ಹರಿಯುತ್ತಿತ್ತು. ನಾಲ್ಕು ತಿಂಗಳ ಹಿಂದೆ ಹಾಗೋ ಹೀಗೋ ಹರಿಯುತ್ತಿತ್ತು. ಈಗ ನೋಡಿದ್ರೆ ಕ್ರಿಕೆಟ್ ಮೈದಾನದಂತೆ ಆಗಿ ಹೋಗಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ನಿರ್ಜೀವವಾಗಿರುವ ಬಗೆ!! ಮಳೆಗಾಲದಲ್ಲಿ ಪ್ರವಾಹದ ರೀತಿಯಲ್ಲಿ ಹರಿಯುವ ನದಿ ಏಪ್ರಿಲ್‌ಗೂ ಮುನ್ನವೇ ಈಗ ಬರಡಾಗಿದ್ದು ಹೇಗೆ? ಪರಿಸ್ಥಿತಿ ಹೀಗೇ ಮುಂದುವರಿದರೆ ಹೇಗೆ ಎಂಬ ಮಾತು ಕೇಳಿ ಬರುತ್ತಿದೆ.

ಪಶ್ಚಿಮ ಘಟ್ಟಗಳಿಂದ ಹರಿದು ಬರುವ ನೇತ್ರಾವತಿ ಮತ್ತು ಸುಬ್ರಹ್ಮಣ್ಯ ಕಡೆಯಿಂದ ಹರಿದು ಬರುವ ಕುಮಾರಧಾರ ನದಿಗಳ ಸಂಗಮ ಸ್ಥಳ. ಇಲ್ಲಿಂದ ಮುಂದಕ್ಕೆ ನದಿ ನೇತ್ರಾವತಿಯೆಂಬ ಹೆಸರಿನಲ್ಲಿ ಮುಂದುವರಿಯುತ್ತದೆ. ಈಗ ಅಸಲಿ ಸಂಗತಿ ಏನೆಂದರೆ ಉಪ್ಪಿನಂಗಡಿಯಿಂದ ಮುಂದಕ್ಕೆ ಸಾಗಿ ಸಮುದ್ರ ಸೇರುತ್ತಿರುವುದು ನೇತ್ರಾವತಿಯಲ್ಲ, ಬದಲಾಗಿ ಕುಮಾರಧಾರ! ಅಂದರೆ ನೇತ್ರಾವತಿ ನದಿ ಸಮುದ್ರ ಸೇರಲು ಹೆಚ್ಚೂ ಕಮ್ಮಿ 60 ಕಿ.ಮೀ. ಇರುವಾಗಲೇ ಈ ನದಿ ಸಂಪೂರ್ಣ ಬತ್ತಿ ಹೋಗಿದೆ. ಇನ್ನು ಇದರ ಉಪನದಿಯಾದ ಕುಮಾರಧಾರದ ಪರಿಸ್ಥಿತಿ ಉತ್ತಮವಾಗೇನೂ ಇಲ್ಲ. ಸಂಪೂರ್ಣ ಬತ್ತಿ ಹೋಗಿಲ್ಲ ಎನ್ನುವುದಷ್ಟೇ ಸಮಾಧಾನದ ಸಂಗತಿ.

ಹೇಗಿದೆ ನದಿ ತಟದ ಸ್ಥಿತಿಗತಿ..!
ಒಂದು ನದಿಯನ್ನು ಜೀವನದಿ ಅಂತ ಕರೆಯುವುದಕ್ಕೆ ಸಾಕಷ್ಟು ಕಾರಣಗಳಿವೆ. ಭೂ ಆಳದಲ್ಲಿ ಇರುವ ಅಂತರ್ಜಲದ ಮಟ್ಟವನ್ನು ನಿರ್ಧರಿಸುವುದು. ವಾತವರಣದಲ್ಲಿ ಆಗುವ ಬದಲಾವಣೆ. ಪ್ರಕೃತಿ ತಾಪಮಾನ ಇಳಿಕೆ ಏರಿಕೆಯಾಗದಂತೆ ನೋಡಿಕೊಳ್ಳುವುದು. ಸಹಸ್ರಾರು ಮರಗಳನ್ನು, ಜಲಚರಗಳನ್ನು ಪೋಷಿಸುವುದು. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಲಕ್ಷಾಂತರ ಮಂದಿಗೆ ಕುಡಿಯುವ ನೀರಿನ ಪೂರೈಕೆ ಮಾಡುವುದು. ಹೀಗೆ ಹತ್ತಾರು ಕೆಲಸಗಳನ್ನು ಈ ನದಿ ಮಾಡುತ್ತದೆ. ಇದರಿಂದಲೇ ಒಂದು ನದಿ ಜೀವ ನದಿ ಎಂತ ಕರೆಸಿಕೊಳ್ಳುತ್ತದೆ.

ಪಶ್ಚಿಮ ಘಟ್ಟದಿಂದ ಹೆಚ್ಚು ಕಡಿಮೆ 100 ಕಿ.ಮೀ. ಅಂತರದಲ್ಲೇ ಸಮುದ್ರ ಸಿಗುವುದರಿಂದ ಕರಾವಳಿಯ ನದಿಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯೂ ಇಲ್ಲ. ಇಲ್ಲಿನ ಭೌಗೋಳಿಕ ರಚನೆ ಅಣೆಕಟ್ಟುಗಳನ್ನು ಕಟ್ಟಲು ಪೂರಕವಾಗಿಲ್ಲ. ಹೀಗಾಗಿ ಅಲ್ಲಲ್ಲಿ ಸಣ್ಣಪುಟ್ಟ ಚೆಕ್ ಡ್ಯಾಂಗಳನ್ನು ಕಟ್ಟಲಾಗಿದೆ. ಅದರಲ್ಲೂ ಉಳಿಯುವ ನೀರೂ ಅಷ್ಟಕಷ್ಟೇ. ಮಳೆ ಬರುವುದು ತಡವಾದರೆ ಉಳಿದ ದಿನಗಳ ಪರಿಸ್ಥಿತಿ ದೇವರಿಗೇ ಪ್ರೀತಿ.

ನಗರಕ್ಕೆ ನೀರಿನ ರೇಶನಿಂಗ್ ಶುರು..!
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ನೀರಿಲ್ಲ ಅನ್ನುವ ಮತುಗಳು ಕೇಳಿಬರುತ್ತಿದೆ. ಪೈಪ್‌ಲೈನ್ ಬದಲಿಸುವ ತಾಂತ್ರಿಕ ನೆಪವೊಡ್ಡಿ ಏಪ್ರಿಲ್ ೨೭ ಮತ್ತು ೨೮ ರಂದು ಮಂಗಳೂರು ನಗರಕ್ಕೆ ನೀರು ಪೂರೈಕೆ ಇಲ್ಲ ಎಂದು ಮನಪಾ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿರುವ ಅಣೆಕಟ್ಟಿನಲ್ಲಿ ನೀರು ಖಾಲಿಯಾಗಿದೆ, ಇತ್ತೀಚಿಗೆ ಅಲ್ಲಿದ್ದ ನೀರನ್ನು ಮುಂದಕ್ಕೆ ಹರಿಸಲಾಗಿದೆ. ಚುನಾವಣೆ ಹೊತ್ತಲ್ಲಿ ತುಂಬೆ ಆಣೆಕಟ್ಟು ನೀರು ಖಾಲಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಈಗ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಯುತ್ತಿದ್ದು ನೀರನ್ನು ಶೇಖರಣೆ ಮಾಡುವುದು ಪಾಲಿಕೆಗೆ ಸವಾಲಾಗಿದೆ.

ಏನಿದು ಎತ್ತಿನಹೊಳೆ ಯೋಜನೆ? ಯಾಕಿಷ್ಟು ವಿರೋಧ..!
ಸಕಲೇಶಪುರದಿಂದ ಶಿರಾಡಿ ಘಾಟಿ ಇಳಿಯುವ ಪ್ರಾರಂಭದಲ್ಲಿ ಎತ್ತಿನ ಹೊಳೆ ಯೋಜನೆ, ಘಾಟಿ ಮುಗಿಯುವ ಹೊತ್ತಿಗೆ ಸಿಗುವ ಗುಂಡ್ಯದ ಬಳಿ ಕೆಂಪುಹೊಳೆ ವಿದ್ಯುಚ್ಛಕ್ತಿ ಯೋಜನೆಗಳೇ ಸಾಕು ಈ ನದಿಯನ್ನು ಆಪೋಷನ ಪಡೆಯಲು. ಇವೆರಡು ಯೋಜನೆಯಲ್ಲಿ ಬರುವ ಉಪನದಿಗಳು ಸೇರುವುದು ಕುಮಾರಧಾರವನ್ನೇ ಆದರೂ ಕುಮಾರಧಾರಾ ಸೇರುವುದು ನೇತ್ರಾವತಿಯನ್ನೇ ತಾನೇ? ಪಶ್ಚಿಮ ಘಟ್ಟದ ಮೇಲೆ ಅದೆಂತಹಾ ಗದಾಪ್ರಹಾರವಾಗಿದೆ ಎಂಬುದಕ್ಕೆ ಕಳೆದೈದು ವರ್ಷದಲ್ಲಿ ಈ ಭಾಗದಲ್ಲಿ ಆಗುತ್ತಿರುವ ಪ್ರಕೃತಿ ವಿಕೋಪಗಳೇ ಸಾಕ್ಷಿ.

ಇನ್ನೂ ಬೇಕಾ ಎತ್ತಿನಹೊಳೆ?
ಸಕಲೇಶಪುರದ ಆಸುಪಾಸಿನಲ್ಲಿ ಎತ್ತಿನಹೊಳೆ ಸೇರಿದಂತೆ 8 ತೊರೆಗಳಿಗೆ ಬ್ಯಾರೇಜ್ ಕಟ್ಟಿ ಅಲ್ಲಿ ಸಂಗ್ರಹಿಸಿದ ನೀರನ್ನು ಮೇಲಕ್ಕೆತ್ತಿ ಪೈಪುಗಳ ಮೂಲಕ ಸುಮಾರು 274 ಕಿ.ಮೀ. ಸಾಗಿಸುವುದಂತೆ! ಹಾಗಂತ ಕಳೆದ ಕೆಲ ವರ್ಷಗಳಿಂದ ಕೋಲಾರ, ತುಮಕೂರಿನ ಮುಗ್ಧ ಜನರನ್ನು ನಂಬಿಸಿ ಮತ ಕೇಳುತ್ತಲೇ ಇದ್ದಾರೆ. ಅಲ್ಲಿನ ಜನರು ಸಹ ಇಂದಲ್ಲವಾದರೆ ನಾಳೆ ಜೀವ ಜಲ ನಮ್ಮೂರು ತಲುಪೀತು ಎಂಬ ಆಶಾಭಾವನೆಯಲ್ಲಿ ಇದ್ದಾರೆ. ಈಗ ಎತ್ತಿನ ಹೊಳೆ ಸಮರ್ಥಕರು ಹೇಳುತ್ತಿರುವುದು ಮಳೆಗಾಲದ ಹೆಚ್ಚುವರಿ ನೀರನ್ನು ಲಿಫ್ಟ್ ಮಾಡುವ ಯೋಜನೆ ಇದು ಎಂದು.

ಆದರೆ ಸಕಲೇಶಪುರದಲ್ಲಿ ಕಳೆದೈದು ವರ್ಷಗಳಲ್ಲಿ ಆಗಿರುವ ದುರ್ಗತಿಯನ್ನು ಒಮ್ಮೆ ಪರಿಶೀಲಿಸಿದರೆ ಇದು ಎಲ್ಲಿಗೇ ತಲುಪೀತು ಎಂದು ಅಂದಾಜಿಸುವುದು ಕಷ್ಟ. ಒಟ್ಟಾರೆ ಇದು ಪಶ್ಚಿಮಘಟ್ಟವನ್ನು ಮುಗಿಸಲು, ಕರಾವಳಿಯ ನದಿಗಳನ್ನು ಬರುಡಾಗಿಸಿ ಒಂದಿಷ್ಟು ಮಂದಿ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳಲು ಮಾಡಿರುವ ಯೋಜನೆ ಎಂಬುದು ಹಲವರ ಆಕ್ರೋಶ.

ಪರ್ಯಾಯ ಯೋಜನೆ ರೂಪಿಸಲು ಸಕಾಲ
ಭೌಗೋಳಿಕವಾಗಿ ಕೋಲಾರ, ತುಮಕೂರು ಸೇರಿದಂತೆ ಎತ್ತಿನಹೊಳೆ ಯೋಜನೆಯ ಫಲಾನುಭವಿ ಜಿಲ್ಲೆಗಳು ಪಶ್ಚಿಮ ಫಟ್ಟಕ್ಕಿಂತ ಎತ್ತರದಲ್ಲಿವೆ. ಇಲ್ಲಿಂದ ನೀರನ್ನು ಲಿಫ್ಟ್ ಮಾಡುವುದು ಕಷ್ಟವೂ ಹೌದು, ಎಲ್ಲಾ ರೀತಿಯಿಂದ ನಷ್ಟವೂ ಹೌದು. ಹೀಗಾಗಿ ಇದಕ್ಕೆ ಪರ್ಯಾಯ ಯೋಜನೆಯನ್ನು ಕಂಡುಹಿಡಿವ ಅಗತ್ಯವಿದೆ.

ಎತ್ತಿನ ಹೊಳೆ, ಕುದುರೆಮುಖ ಯೋಜನೆಗಳೆಲ್ಲ ಭವಿಷ್ಯದ ಕರಾಳತೆಯ ವಾಸ್ತವವನ್ನು ತೆರೆದಿಡುವ ಒಂದೆರಡು ಯೋಜನೆಗಳಷ್ಟೇ. ಇಂತಹ ಹತ್ತಾರು ಅಧಿಕ ಪ್ರಸಂಗಗಳನ್ನು ಭೂಮಿ ತಾಯಿ ಸಹಿಸುತ್ತಲೇ ಬಂದಿದ್ದಾಳೆ. ಇನ್ನೂ ಪಶ್ಚಿಮ ಘಟ್ಟದ ಮೇಲೆ ಹೊಡೆತ ಕೊಡುತ್ತಲೇ ಹೋದರೆ ಮುಂದಾಗುವ ಅನಾಹುತಗಳನ್ನು ಊಹಿಸುವುದೂ ಅಸಾಧ್ಯ. ನೇತ್ರಾವತಿ ಅಂತಲ್ಲ, ಕರಾವಳಿಯ ಎಲ್ಲಾ ನದಿಗಳು ಇದೀಗ ಏಪ್ರಿಲ್ ಮುನ್ನವೇ ಬತ್ತಿ ಹೋಗಿವೆ. ಮುಂದಿನ ವರ್ಷ ಮಾರ್ಚ್ ನಲ್ಲೇ ಬತ್ತಿ ಹೋಗಬಹುದು.

ನದಿಗಳು ಬತ್ತಿರುವ ಸಮಯದಲ್ಲೇ ಚುನಾವಣೆ ಸಹ ಬಂದಿದೆ. ಮತದಾರ ಪ್ರಭುಗಳನ್ನು ರೈಲು ಹತ್ತಿಸುವ ರಾಜಕಾರಣಿಗಳು ಕರಾವಳಿಯಲ್ಲೂ ಇದ್ದಾರೆ, ಮಲೆನಾಡಲ್ಲೂ ಇದ್ದಾರೆ, ಬಯಲು ಸೀಮೆಗೂ ಬರುತ್ತಾರೆ. ಈ ಬಾರಿ ರಾಜಕಾರಣಿಗಳು ಮತಭಿಕ್ಷೆ ಬೇಡಲು ಬಂದಾಗ ಈ ವಿಚಾರ ಮುಂದಿಟ್ಟು ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದು ಕೇಳುವ ಸರದಿ ಮತದಾರರದ್ದು. ಈಗ ಬಿಟ್ಟರೆ ಮತ್ತೈದು ವರ್ಷ ಅವರ್ಯಾರೂ ಕೈಗೆ ಸಿಗರು. ಆದರೆ ಸಕಲೇಶಪುರದಲ್ಲಿ ಎತ್ತಿನ ಹೊಳೆ ಕೆಲಸ ಮಾತ್ರ ಇನ್ನೈದು ವರ್ಷ ಕಳದರೂ ಅಷ್ಟೇ ಇರುತ್ತದೆ. ಪ್ರತಿವರ್ಷ ಬಜೆಟ್ ನಲ್ಲಿ ಹಣ ಬಿಡುಗಡೆಯಾದ ಹಾಗೆ ನೂರಾರು ದೊಡ್ಡ ದೊಡ್ಡ ಪೈಪುಗಳ ರಾಶಿ ಬೀಳಬಹುದು ಹೊರತು ಅಲ್ಲಿ ಮತ್ತೇನಾಗುವುದಿಲ್ಲ.

- Advertisement -

Related news

error: Content is protected !!