Thursday, May 2, 2024
spot_imgspot_img
spot_imgspot_img

ಯೋಗ ಸಾಧನೆಯಿಂದ ಆತ್ಮ ಪರಮಾತ್ಮ ಮಿಲನ – ಮಲ್ಲಿಕಾ ಜೆ ರೈ ಪುತ್ತೂರು

- Advertisement -G L Acharya panikkar
- Advertisement -

ಅವಜಾನಂತಿ ಮಾo ಮೂಢಾ: ಮಾನುಷಿಂ ತನುಮಾಶ್ರಿತಮ್ |
ಪರಂ ಭಾವಮಜಾನಂತ: ಮಮ ಭೂತಮಹೇಶ್ವರಮ್ || 09-11||

ಮೂಢರು ಮಾನವ ಶರೀರಧಾರಿಯಾಗಿ ಕಾಣುವ ನನ್ನನ್ನು ಸರಿಯಾಗಿ ತಿಳಿಯರು. ಅವರಿಗೆ ನನ್ನ ಸ್ವರೂಪ ಜ್ಞಾನವಿರದು ಎಂದು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಅರ್ಜುನನಿಗೆ ಹೇಳುತ್ತಾನೆ.

ಕೆಲವರು ಬದುಕು ನಡೆಸಲು ಅದೆಷ್ಟೋ ಕುತಂತ್ರಗಳನ್ನು ಅನುಸರಿಸುತ್ತಾರೆ. ಆದರೆ ಸರಳವಾಗಿ ಬದುಕಲು ಈ ಕುತಂತ್ರಗಳ ಅವಶ್ಯಕತೆಯೇ ಇರಲಾರದು. ಅಷ್ಟಕ್ಕೂ ಕುತಂತ್ರ ಬುದ್ಧಿಯಿಂದ ಸನ್ಮಾರ್ಗದಲ್ಲಿ ಎಂದೂ ಬದುಕು ನಡೆಸಲಾಗುವುದಿಲ್ಲ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ತನಗೆ ಇಷ್ಟು ಮಾತ್ರ ಸಾಕು ಎಂಬ ಭಾವನೆಯನ್ನು ಬೆಳೆಯಿಸುವ ಮನೋದಾರ್ಡ್ಯ ಎಂದು ಬರುತ್ತದೋ ಅಂದು ಸಹಜವಾಗಿ ಬದುಕಲು ಪ್ರಾರಂಭ ಮಾಡುತ್ತಾರೆ. ಇನ್ನೊಬ್ಬರ ಸೊತ್ತು ತನ್ನಲ್ಲೇ ಇರಿಸಿಕೊಂಡು ಅವರಿಗೆ ಅದರಿಂದ ಕೊಡಬೇಕಾದುದನ್ನು ನೀಡದೆ, ಗಣನೆಗೆ ಬಂದರೂ ತಿರಸ್ಕರಿಸಿ ಮನ ಬಂದಂತೆ ತಿಂದು ತೇಗುವ ಸಹೋದರರು ಬಂಧು ಮಿತ್ರರು ಇಷ್ಟರು ಕಣ್ಣ ಮುಂದೆಯೇ ಇದ್ದಾರೆ. ಕೊಟ್ಟವ ಕೋಡಂಗಿ ಈಸ್ಕೊಂಡವ ಈರಭದ್ರ ಎಂದು ಒಪ್ಪಿತವಾದರೂ ದೇವರ ವಿಷಯದಲ್ಲಿ ಇದು ಎಂದಿಗೂ ಸಮಂಜಸವಾಗಲಾರದು. ದೇವರು ಪ್ರತಿಯೊಬ್ಬರ ಲೆಕ್ಕವನ್ನೂ ಬರೆದಿಟ್ಟಿರುತ್ತಾನೆ.

ದಿನ ನಿತ್ಯದ ಬದುಕಿಗೆ ತೇಗು ಬರುವಷ್ಟು ತಿನ್ನುವುದು ಯಾವತ್ತೂ ಒಳ್ಳೆಯದಲ್ಲ. ಹಿತಮಿತ ಇದ್ದಾಗ ಕಿಂಚಿತ್ತಿದ್ದರೂ ಪರಮಾನ್ನ ಆಗಲು ಸಾಧ್ಯ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಹಿರಿಯರ ಅನುಭವದ ನುಡಿಗಳು ಈಗ ಅಳಿವಿನಂಚಿಗೆ ಸಾಗಿದರೂ ಈ ಕ್ಷಣದ ಮೋಡಗಳು ಶಾಶ್ವತವಾಗಿ ಇರದೇ ಸೂರ್ಯನ ಆಗಮನದ ಇನ್ನಷ್ಟು ಬೆಳಕು ಪ್ರಜ್ವಲಿಸುವಂತೆ ಸುಲಲಿತವಾಗಿ ಬಂದು ಬಿಡುತ್ತವೆ . ಹಿಂದೆಂದೂ ಕಾಣದಷ್ಟು ಶಕ್ತಿ ಒಮ್ಮೆಲೇ ಬಂದು ಬಿಟ್ಟಿದೆಯೇನೋ ಅನ್ನುವ ಹಾಗೆ ಈ ಜೀವನ ಸಾಗಿಸುತ್ತಾ ನಡೆಯುತ್ತಿರಬೇಕು. ಆಗ ವೀರ ಭುಜ ಬಲಿಗಳಾಗಲು ಸಾಧ್ಯವಿದೆ. ದಿನದಿನವೂ ನಮ್ಮನ್ನು ನಾವೇ ಹುರುಪುಗೊಳಿಸುತ್ತಿರಬೇಕು. ಅದಕ್ಕೆ ಯಾವುದೇ ತಿಂಡಿ ತಿನಿಸುಗಳು ಕಾರಣವಾಗಬೇಕಿಲ್ಲ.

ಆರೋಗ್ಯಕ್ಕೆ ಬೇಕಾದ ಯಾವುದೇ ತಿನಿಸುಗಳು ಮನಸ್ಸಿಗೆ ಹಿತವಾಗಬೇಕೆಂದೇನಿಲ್ಲ. ಮನಸ್ಸಿಗೆ ಹಿತವೆನಿಸುವ ಆಹಾರ ತಿನಿಸುಗಳು ಆರೋಗ್ಯ ವರ್ಧಕಗಳಾಗಿರುವುದೂ ಇಲ್ಲ. ಆದರೂ ಹುಡುಕಿ ಹುಡುಕಿ ಅದನ್ನೇ ತಿನ್ನಲು ಹೊರಡುವ ಕಾಲ ಇಂದಿನದಾಗಿದೆ. ಬಾಟಲುಗಳಲ್ಲಿ ತುಂಬಿಸಿದ ಪಾನೀಯ ಎಂದೋ ತಯಾರು ಮಾಡಿದವುಗಳಾಗಿರುತ್ತವೆ. ಆದರೆ ನೈಸರ್ಗಿಕವಾಗಿ ಸಿಗುವ ಪಾನೀಯಗಳನ್ನು ತಿರಸ್ಕರಿಸಿ ಅರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ. ಆಸೆಯೆಂಬ ಬಿಸಿಲು ಕುದುರೆ ಮನದೊಳಗೆ ಹೊಕ್ಕಿ ಆರೋಗ್ಯವೆಂಬ ದಾಸ್ತಾನನ್ನು ಮೂಲೆಗುಂಪು ಮಾಡುತ್ತಾ ಜೀವನ ನಡೆಸುವ ಇಂದಿನ ಜಾಯಮಾನ ಬರಿಯ ಬಾಹ್ಯ ತೋರಿಕೆಯ ಆಕರ್ಷಣೆಗೆ ಬಲಿಯಾಗುತ್ತಲಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ವಿನಾಶದ ಹೊಡೆತವನ್ನು ಎದುರಿಸುವುದೆಂತು ?

ನಾಯಿ ತನಗೆ ಆಹಾರ ದೊರೆತ ತಕ್ಷಣ ಸುಮ್ಮನೆ ಕುಯ್ ಕುಯ್ ಎನ್ನುತ್ತಾ ಕುಳಿತಿದ್ದನ್ನು ಕಂಡು ಏನಾಗಿದೆ ಎಂದು ಯೋಚಿಸಿದರೆ ಹೊಳೆಯುವ ಉತ್ತರ ಭಾವನಾತೀತ. ತನ್ನ ಮರಿಗಳಿಗೆ ತಿನಿಸಲೆಂದು ಬಾಯಲ್ಲಿ ಕುಯ್ ಕುಯ್ ಹೇಳುವ ಮೂಲಕ ಮನುಷ್ಯ ಧರ್ಮವನ್ನೂ ಮೀರಿ ಕೊಂಡೋಗುವ ಅದರ ಮಮತೆ ನಿಜಕ್ಕೂ ವರ್ಣಿಸಲಸದಳ. ಇದಕ್ಕಿಂತ ನೂರು ಪಟ್ಟು ಮಮತೆ ಹೆತ್ತ ತಂದೆ ತಾಯಿಗಳಿಗಿರುತ್ತದೆ. ಇದೂ ಸುಳ್ಳಲ್ಲ. ಅದನ್ನು ಅಂತರಾತ್ಮದ ಮುಖೇನ ಅರಿಯುವ ಮನಸ್ಸು ಮಕ್ಕಳಿಗೆ ಇರಬೇಕು. ಸಂಸ್ಕಾರ ಅರಿಯಬೇಕು. ಆದರೆ ಇಂದು ಬಿಸಾಡುವ ವಸ್ತುಗಳಂತೆ ಪರಿಗಣಿಸುವಂತಾಗಿರುವುದು ನಿಜಕ್ಕೂ ಮನುಕುಲದ ಅಂತ್ಯ ಕಾಲದ ಸೂಚನೆಯೆನ್ನುವಂತಾಗಿದೆ.

ಮನೆಯ ಹತ್ತಿರದಲ್ಲಿ ಗಿಡಗಳಿದ್ದರೆ ಅನೇಕ ತೆರನಾದ ಹಕ್ಕಿಗಳನ್ನು ನೋಡುವ ಸೌಭಾಗ್ಯ ದೊರಕುತ್ತದೆ. ಅದರ ಚೀವ್ ಚೀವ್ ಸದ್ದು ಆಹ್ಲಾದ ನೀಡುತ್ತದೆ. ಅಲ್ಲಿಂದಿಲ್ಲಿಗೆ ಹಾರುವ ವೈಖರಿ ನೋಡುವ ಕಣ್ಣಿಗೆ ಕುತೂಹಲ ಹೆಚ್ಚಿಸುತ್ತದೆ. ಹಕ್ಕಿಗಳು ಗೆಲ್ಲಿಂದ ಗೆಲ್ಲಿಗೆ ಹಾರುವಾಗ ಮನಸ್ಸು ಕೂಡಾ ಮಕ್ಕಳoತೆ ಅತ್ತಿoದಿತ್ತ ಕುಣಿಯುತ್ತದೆ. ಸಂತೋಷ ಅನುಭವಿಸುವ ಹೃದಯ ಆಗ ಸರ್ವರಿಗೂ ಒಳಿತೇ ಬಯಸುತ್ತದೆ. ಇಂತಹ ಮನಸ್ಥಿತಿ ಬರಲು ಯೋಗ ಬೇಕು.

ಬದುಕನ್ನು ಬಂಗಾರದಂತೆ ಜೋಪಾನವಾಗಿ ಪ್ರೀತಿಸಬೇಕು. ಬಂಗಾರ ಇಲ್ಲದೇ ಇದ್ದರೂ ನಡೆಯುತ್ತದೆ. ಬಂಗಾರದoತ ಗುಣ, ನಡತೆ ನಮ್ಮದಾಗಬೇಕು. ಬೇರೆಯವರನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚು ನಮ್ಮನ್ನು ನಾವೇ ಪ್ರೀತಿಸಲು ಕಲಿಯಬೇಕು. ಆಗ ಒಂದು ಅದ್ಭುತವಾದ ಆತ್ಮತೃಪ್ತಿ ಲಭಿಸುತ್ತದೆ. ಮಿಕ್ಕೆಲ್ಲ ಸಂತೋಷ ಕೇವಲ ಬಾಹ್ಯ ಅಂಶಗಳಿಂದ ದೊರಕಿದರೂ ಇಂದಲ್ಲ ನಾಳೆ ಅದರ ಅಲಭ್ಯವೂ ಆಗುವ ಸಾಧ್ಯತೆಯಿರುತ್ತದೆ. ಅಂತರಂಗದ ಗೋಡೆಯ ಮೇಲೆ ಬರೆದ ಆತ್ಮ ಸಂತೃಪ್ತಿಯು ಒಂದು ಅಳಿಸಲಾಗದ ವಜ್ರಾಯುಧವೇ ಆಗುವುದು. ಅಂತರಂಗವನ್ನು ಗೆದ್ದ ಬಳಿಕ ಬಾಕಿ ಎಲ್ಲವೂ ಅದರ ನಂತರದ ಸ್ಥಾನಕ್ಕೆ ಸೀಮಿತವಾಗುತ್ತದೆ.

ನಾನು ನನ್ನದೆಂಬ ಮಮಕಾರ ಅಳಿದು ಹೋಗುತ್ತದೆ. ಉಸಿರು ಮೂಲ ಮಂತ್ರವಾಗಿ ಸದಾ ಅಪ್ಯಾಯತೆ ದೊರಕಲ್ಪಡುತ್ತದೆ. ಕಾಲಿನ ತುಳಿತಕ್ಕೆ ಎಷ್ಟೇ ಒಳಗಾದರೂ ಹುಲ್ಲು ಮತ್ತಷ್ಟು ಮೇಲೆದ್ದು ಬರುವ ಗುಣವನ್ನು ಹೊಂದಿರುವಂತೆ ಬಿದ್ದಲ್ಲಿಂದ ಎದ್ದು ನಿಲ್ಲಬೇಕಾದರೆ ಇಚ್ಛಾಶಕ್ತಿ ಇರಲೇಬೇಕು. ಸಂಬಂಧಿಕರು ದಾಯಾದಿಗಳು ಇಷ್ಟ ಮಿತ್ರರು ಒಳಗಿಂದೊಳಗೆ ಮಾತ್ಸರ್ಯದಿಂದ ಎಷ್ಟೇ ತುಳಿದರೂ ಅದನ್ನು ಲೆಕ್ಕಿಸದೇ ಎದ್ದು ನಿಲ್ಲುವ ಛಾತಿ ಹೊಂದಿರಬೇಕು. ಆಗಲೇ ಬದುಕಿಗೊಂದು ಸೊಗಸಾದ ಸಾರ್ಥಕತೆ ಬರುವುದು. ಹೊತ್ತು ಹೋದದ್ದೇ ತಿಳಿಯದ ಹಾಗೆ ಸಾರ್ಥಕತನದ ಬದುಕು ನಡೆಸಲು ಸತ್ಕರ್ಮಗಳಿಂದ ಕೂಡಿದ ಚಿಂತನೆ ಅನುಸರಿಸಬೇಕಿದೆ. ಯೋಗ ಮಾರ್ಗ ಎಲ್ಲರಿಗೂ ಒಳಿತಾಗುವ ದಾರಿ ಒದಗಿಸುತ್ತದೆ. ಆ ಮೂಲಕ ಭರವಸೆಯ ಕಿರಣ ನಾವಾಗಲು ಸಾಧ್ಯ. ಇಂದೇ ಕಾರ್ಯೋನ್ಮುಖರಾಗೋಣ.

✍️ಮಲ್ಲಿಕಾ ಜೆ ರೈ ಪುತ್ತೂರು
ಅಂಕಣಗಾರರು, ದ ಕ.574202

- Advertisement -

Related news

error: Content is protected !!