Saturday, April 27, 2024
spot_imgspot_img
spot_imgspot_img

ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಮೆಗಾ ವಿಸ್ತರಣೆ; ಯಾರಿಗೆಲ್ಲಾ ಅವಕಾಶ? ಇಲ್ಲಿದೆ ಸಂಪೂರ್ಣ ವಿವರ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಶೀಘ್ರ ನಡೆಯಬಹುದು ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದ ಚಿಂತಕರ ಚಾವಡಿಯಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಐದು ರಾಜ್ಯಗಳು ಮತ್ತು 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 2ನೇ ಅವಧಿಯ ಮೊದಲ ಸಚಿವ ಸಂಪುಟ ವಿಸ್ತರಣೆಗೆ ಹೆಸರುಗಳ ಆಯ್ಕೆ ಬಹುತೇಕ ಅಂತಿಮಗೊಂಡಿವೆ.

ಕರ್ನಾಟಕದಿಂದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚು. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಸಿಗುವಂತಾಗುವಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಮಹತ್ತರ ಪಾತ್ರ ನಿರ್ವಹಿಸಿದ್ದರು.

ಅಸ್ಸಾಂನಲ್ಲಿ ಬಿಜೆಪಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ಮುಖ್ಯಮಂತ್ರಿ ಗಾದಿಯನ್ನು ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬಿಟ್ಟುಕೊಟ್ಟ ಸರ್ಬಾನಂದ ಸೋನಾವಾಲ್ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಅವಕಾಶಗಳು ನಿಚ್ಚಳವಾಗಿವೆ.

ರಾಮ್​ ವಿಲಾಸ್ ಪಾಸ್ವಾನ್ ನಿಧನದ ನಂತರ ತೆರವಾಗಿರುವ ಸಚಿವ ಸ್ಥಾನವಿನ್ನೂ ಬಾಕಿಯಿದೆ. ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಅಥವಾ ಅವರ ಸೋದರ ಸಂಬಂಧಿ ಪಶುಪತಿ ಪಾರಸ್​ ಅವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತಯಿದೆ. ಕಳೆದ ತಿಂಗಳು ಲೋಕ ಜನಶಕ್ತಿ ಪಕ್ಷವನ್ನು (ಎಲ್​ಜೆಪಿ) ವಿಭಜಿಸಿ ಚುಕ್ಕಾಣಿ ಹಿಡಿದ ಪಶುಪತಿ ಪಾರಸ್​ ಅವರಿಗೇ ಅಧಿಕಾರದ ಗಾದಿ ಒಲಿಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ (ಜೆಡಿಯು) ಕೇಂದ್ರ ಸಂಪುಟವನ್ನು ಸೇರಲಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಸೂಚನೆ ಸಿಕ್ಕಿಲ್ಲ. ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ತಮ್ಮ ಪಕ್ಷಕ್ಕೆ ಎರಡು ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ನಿತೀಶ್​ ಕುಮಾರ್ ಅವರದು. 2019ರಲ್ಲಿ ಬಿಜೆಪಿಯು ಜೆಡಿಯುಗೆ ಒಂದು ಸ್ಥಾನ ನೀಡುವ ಪ್ರಸ್ತಾವ ಮುಂದಿಟ್ಟಿತ್ತು. ಆದರೆ ಸಂಪುಟದಿಂದ ಹೊರಗುಳಿಯುವ ನಿರ್ಧಾರವನ್ನು ನಿತೀಶ್ ಪ್ರಕಟಿಸಿದರು. ಆದರೆ ಬಾರಿ ಎರಡು ಸಚಿವ ಸ್ಥಾನ ಪಡೆದುಕೊಳ್ಳಲು ನಿತೀಶ್​ ಪ್ರಯತ್ನಿಸುತ್ತಿದ್ದಾರೆ.

ಜೆಡಿಯು ನಾಯಕರಾದ ಲಲನ್ ಸಿಂಗ್, ರಾಮನಾಥ್ ಠಾಕೂರ್ ಮತ್ತು ಸಂತೋಷ್ ಕುಷವಾಲ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.ಬಿಹಾರದ ನಾಯಕ ಸುಶೀಲ್ ಮೋದಿ, ಮಹಾರಾಷ್ಟ್ರ ನಾಯಕರಾದ ನಾರಾಯಣ ರಾಣೆ, ಬಿಜೆಪಿ ಕೇಂದ್ರ ಘಟಕದ ಬಿಹಾರ ಮತ್ತು ಗುಜರಾತ್ ಉಸ್ತುವಾರಿ ಭೂಪೇಂದ್ರ ಯಾದವ್ ಸಹ ಸಂಪುಟಕ್ಕೆ ಸೇರುವ ಸಾಧ್ಯತೆಯಿದೆ. ಸುಮಾರು ಒಂದು ತಿಂಗಳ ಸಮಾಲೋಚನೆಯ ನಂತರ ಸಂಭಾವ್ಯ ಸಚಿವರ ಪಟ್ಟಿ ಸಿದ್ಧಪಡಿಸಲಾಗಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ವಿವಿಧ ಸಚಿವರ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಆಕಾಂಕ್ಷೆಯಿರುವ ಯಾವುದೇ ಪಕ್ಷಕ್ಕೆ ಮಹತ್ವದ್ದೆನಿಸಿರುವ ಉತ್ತರ ಪ್ರದೇಶಕ್ಕೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಹೆಚ್ಚು ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ. ವರುಣ್ ಗಾಂಧಿ, ರಾಮಶಂಕರ್ ಕಟಾರಿಯಾ, ಅನಿಜ್ ಜೈನ್, ರೀಟಾ ಬಹುಗುಣ ಜೋಶಿ ಮತ್ತು ಖಾಫರ್ ಇಸ್ಲಾಂ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಅಪ್ನಾದಳ್​ನ ಅನುಪ್ರಿಯಾ ಪಟೇಲ್ ಅವರನ್ನೂ ಆಹ್ವಾನಿಸುವ ಸಾಧ್ಯತೆಯಿದೆ.

ಉತ್ತರಾಖಂಡದಿಂದ ಅಜಯ್​ಭಟ್ ಅಥವಾ ಅನಿಲ್ ಬಲುನಿ ಅವರಿಗೆ ಸಚಿವ ಸ್ಥಾನ ಸಿಗಬಹುದು. ಕರ್ನಾಟಕದಿಂದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಸಚಿವ ಸ್ಥಾನ ಒಲಿಯಬಹುದು ಎಂದು ಹೇಳಲಾಗಿದೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕರೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಂಪುಟ ಪ್ರವೇಶಿಸಲಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ಗೆ ತಕ್ಕಮಟ್ಟಿಗಿನ ಪೈಪೋಟಿ ನೀಡಲು ನೆರವಾದವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಬಹುದು. ಜಗನ್ನಾಥ ಸರ್ಕಾರ್, ಶಂತನ ಠಾಕೂರ್ ಮತ್ತು ನಿಹೀತ್ ಪ್ರಾಮಾಣಿಕ್ ಅವರ ಹೆಸರುಗಳು ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ ಎಂದು ಹಲವರು ಹೇಳುತ್ತಿದ್ದಾರೆ.

ಚಾಲ್ತಿಗೆ ಬಂದಿರುವ ಇತರ ಹೆಸರುಗಳೆಂದರೆ ಬ್ರಿಜೇಂದ್ರ ಸಿಂಗ್ (ಹರ್ಯಾಣ), ರಾಹುಲ್ ಕಾಸ್ವಾನ್ (ರಾಜಸ್ಥಾನ್), ಅಶ್ವನಿ ವೈಷ್ಣವ್ (ಒಡಿಶಾ), ಪೂನಂ ಮಹಾಜನ್ ಅಥವಾ ಪ್ರತಿಮಾ ಮುಂಡೆ (ಮಹಾರಾಷ್ಟ್ರ) ಮತ್ತು ಪರ್ವೇಶ್ ಶರ್ಮಾ ಅಥವಾ ಮೀನಾಕ್ಷಿ ಲೇಖಿ (ದೆಹಲಿ) ಅವರದು.ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಳೆದ ತಿಂಗಳು ಸರಣಿ ಸಭೆಗಳನ್ನು ನಡೆಸಿದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚನೆ ನಡೆಸಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, 3ನೇ ಅವಧಿಗೆ ಪ್ರಧಾನಿಯಾಗಬೇಕು ಎಂಬ ಆಕಾಂಕ್ಷೆ ಮೋದಿ ಅವರಿಗಿದೆ.

ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನೂ ಈ ಆಶಯಕ್ಕೆ ಅನುಗುಣವಾಗಿಯೇ ನಡೆಸುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.ಕೊವಿಡ್ 2ನೇ ಅಲೆಯ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸಚಿವರು ಹೇಗೆ ಕಾರ್ಯನಿರ್ವಹಿಸಿದರು ಎಂಬ ಬಗ್ಗೆ ವಿವರವಾಗಿ ಪರಿಶೀಲಿಸಲಾಗಿತ್ತು. ಹೆಚ್ಚುವರಿ ಜವಾಬ್ದಾರಿ ಹೊಂದಿರುವ 9 ಸಚಿವರ ಅಧಿಕಾರ ವ್ಯಾಪ್ತಿಯಿಂದ ಕೆಲ ಇಲಾಖೆಗಳನ್ನು ಹೊರತರುವ ಉದ್ದೇಶವೂ ಬಿಜೆಪಿ ನಾಯಕರಿಗೆ ಇದೆ.

ಪ್ರಕಾಶ್ ಜಾವಡೇಕರ್, ಪೀಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಹರ್ಷವರ್ಧನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ಮತ್ತು ಹರ್​ದೀಪ್ ಸಿಂಗ್ ಪುರಿ ಅವರು ಮುಂದಿನ ದಿನಗಳಲ್ಲಿ ಸಚಿವರಾಗಿ ಮುಂದುವರಿದರೂ ಒಂದಿಷ್ಟು ಇಲಾಖೆಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.ಕೇಂದ್ರ ಸಚಿವ ಸಂಪುಟಕ್ಕೆ 81 ಸಚಿವರನ್ನು ಹೊಂದುವ ಅವಕಾಶವಿದೆ. ಪ್ರಸ್ತುತ 53 ಮಂದಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಲೆಕ್ಕಾಚಾರದಲ್ಲಿ ಇನ್ನೂ 28 ಮಂದಿಗೆ ಸಚಿವ ಸ್ಥಾನ ಪಡೆದುಕೊಳ್ಳಲು ಅವಕಾಶ ಸಿಗಲಿದೆ.

- Advertisement -

Related news

error: Content is protected !!