Saturday, May 18, 2024
spot_imgspot_img
spot_imgspot_img

ಸಂಬಂಧದ ಬೆಸುಗೆಯ ನಾಗರ ಪಂಚಮಿ

- Advertisement -G L Acharya panikkar
- Advertisement -

ನಾಗಾರಾಧನೆ ಕರಾವಳಿಯಲ್ಲಿ ಪರಿಸರ ಆರಾಧನೆಯಾದರೆ ಉತ್ತರ ಕರ್ನಾಟಕದಲ್ಲಿ ಸಹೋದರ – ಸಹೋದರಿಯರ ಭ್ರಾತೃತ್ವ ಮೆರೆಸುವ ಹಬ್ಬ.ಅರಸಿನ, ಸಿಯಾಳ, ಹಿಂಗಾರ, ಸಂಪಿಗೆ, ಹೂ ಮತ್ತು ಹಾಲನ್ನು ತನು ಎರೆಯುವ ಮೂಲಕ ನಾಗನ ಕಲ್ಲಿನ ವಿಗ್ರಹದಲ್ಲಿ ದೇವರನ್ನು ಕಾಣುವ ಸಂಪ್ರದಾಯ ದಕ್ಷಿಣ ಕನ್ನಡದಲ್ಲಾದರೆ, ಉತ್ತರ ಕರ್ನಾಟಕದಲ್ಲಿ ಜೀವಂತ ನಾಗನಿಗೆ ಹಾಲಿಟ್ಟು ಸೇವೆ ನಡೆಸುತ್ತಾರೆ. ಕುಟುಂಬದ ಮೂಲ ಸ್ಥಾನದಲ್ಲಿ ಒಂದುಗೂಡುವ ಕಟ್ಟುಪಾಡು ಸಂಸಾರವನ್ನು ಒಟ್ಟಾಗಿಸುವ ಪ್ರಕ್ರಿಯೆ ನಡೆಸುತ್ತದೆ.ಧರೆಯ ಹೊತ್ತ ಆದಿಶೇಷನನ್ನು ತನುವಾಗಿಸುವ ಈ ಬಾರಿಯ ನಾಗರಪಂಚಮಿ ನಿಜಶ್ರಾವಣದ ಪಂಚಮಿಯಂದು ಅಂದರೆ 2023ರ ಆಗಸ್ಟ್ 21ರಂದು. ಮೇಘಮಾಲೆಯೊಡೆದು ವರ್ಷಧಾರೆ ಸುರಿದು ಅಂಭುದಿಗೆ ಹಾಲೊಯ್ಯುವುದೆಂಬುದು ವಾಸ್ತವಿಕ ಮತ್ತು ಕಾಣದ ಭಗವದನುಗ್ರಹವೇ ಸರಿ. ಅರಶಿನ ಮತ್ತು ಹಾಲು, ಕಾದ ನೆಲಕೆ ನೀರ ಸ್ಪರ್ಶದಿಂದ ಉಂಟಾದ ವಿಷ ಜೀವಿಗಳಿಂದುದ್ಭವವಾದ ರೋಗಾಧಿಗಳಿಗೆ ಔಷಧಿ ಹಚ್ಚುವ ತಂಪೆರೆಯುವ ದಿನವೆಂಬುದು ವೈಜ್ಞಾನಿಕ ಸತ್ಯ. ಸಂಬಂಧಗಳ ಬೆಸುಗೆಯೇರಿಸುವ, ನಾರಿಯರು ಸಂಭ್ರಮಿಸುವ “ನಾಗರಪಂಚಮಿ ನಾಡಿಗೆ ದೊಡ್ಡದು ” ಎನ್ನುವ ಈ ಹಬ್ಬಕ್ಕೆ ರಾಜ್ಯ ಸರಕಾರದ ಮನ್ನಣೆಯಿಲ್ಲ ಎಂದರೆ ರಜೆ ಇಲ್ಲ ಎಂಬುದೇ ಗುನುಗುಣಿಸುವ ಮಾತು. ಅದೇ ದಿನ ಸಂಜೆ ಸಾಂಧರ್ಭಿಕವಾಗಿ ದೊರೆಯುವ ರೋಗನಿರೋಧಕ ಶಕ್ತಿ ಯನ್ನು ಹೆಚ್ಚಿಸಿಕೊಂಡ ಅರಸಿನ ಎಲೆಯಲ್ಲಿ ಅಕ್ಕಿ, ಬೆಲ್ಲ, ತೆಂಗಿನ ತುರಿ ಮುಂತಾದವುಗಳ ಮಿಶ್ರಣದಿಂದ ಮಾಡಿದ ಕಡುಬು ಪರಿಮಳ ಸಾರುತ್ತದೆ. ಧರೆಗೂ, ಮನುಷ್ಯ ಶರೀರಕ್ಕೂ ಅನ್ಯೋನ್ಯತೆ ಇದ್ದು, ನಾಗನಿಗೆ ಹಾಲೆರೆದು ಭೂಮಿ ತನುವಾಗಿಸಿದರೆ ಶರೀರದ ಚರ್ಮದ ಕಾಯಿಲೆ ಬದಿ ಸರಿಯುತ್ತದೆ ಎಂಬುದಕ್ಕೆ ಸಾಮಾಜಿಕ ಮನ್ನಣೆಯಿದೆ. ಬಂಜೆತನ ನಿವಾರಣೆ , ಬಿಳಿ ಚರ್ಮದ ಕಾಯಿಲೆಗೆ ನಾಗರಾಧನೆ ಬಲು ಮುಖ್ಯ ಎಂಬಲ್ಲಿ ನಂಬಿಕೆ. ಕೃಷಿ ಸಮುದಾಯವೊಂದು ತನ್ನ ಕೃಷಿ ಭೂಮಿಯ ಚಾಕರಿಯವರನ್ನೆಲ್ಲ ಒಂದುಗೂಡಿಸಿ ನಾಗಬನ ನಿರ್ಮಿಸಿ ಒಟ್ಟಾಗಿ ಹಾಲೆರೆಯುತ್ತಿದ್ದರೆಂಬುದಕ್ಕೆ ಈಗೀಗ ಒಂದೇ ಮೂಲ ನಾಗಬನಕ್ಕೆ ವಿಭಿನ್ನ ಜಾತಿಯ ಸಮುದಾಯ ಒಟ್ಟು ಸೇರಿ ಹಾಲೆರೆಯುವುದನ್ನು ಕಾಣುತ್ತೇವೆ.
ಕುಟುಂಬದ ನಾಗನಡೆಯಲ್ಲಿ ಯಥೇಚ್ಚ ಕಾಣಿಕೆಯ ಜತೆ ನಾಗತಂಬಿಲ, ಕ್ಷೀರಾಭಿಷೇಕ, ಆಶ್ಲೇಷಪೂಜಾದಿ ಸೇವೆಗಳಲ್ಲದೆ ವಾರ್ಷಿಕವಂತಿಗೆಗಳೆಂಬ ಹಣಸಂಗ್ರಹಗಳ ವ್ಯವಸ್ಥೆಗಳು ಮುಗ್ದ ನಂಬಿಕೆಗಳ ಮೇಲೆ ಬರೆ ಎಳೆಯುತಿದೆ. ದೂರದೂರಿಗೆ ಕೊಂಡೊಯ್ದ ಹಾಲಿನ ಪ್ಲಾಸ್ಟಿಕ್ ಬಾಟಲಿಗಳು ಹತ್ತಿರದ ಹೊಳೆ ಸೇರುತ್ತದೆ. ಹೂ, ಸಿಯಾಳ ಒಯ್ದ ಪ್ಲಾಸ್ಟಿಕ್ ಪೊಟ್ಟಣಗಳು ಅನಾಥವಾಗಿ ಮಣ್ಣು ಸೇರುತ್ತವೆ. ನಾಗರಾಧನೆ ಬ್ರಾಹ್ಮಣ ಅರ್ಚಕರಿಂದಲೇ ನಡೆಯಬೇಕಾಗಿದ್ದರಿಂದ ಅರ್ಚಕವರ್ಗಕ್ಕೆ ಬಿಡುವಿಲ್ಲದ ದಿನವಾಗಿದೆ. ಊರದನದ ಹಾಲು ದುಬಾರಿಯಾಗಿ, ಕೊರತೆ ಕಂಡಾಗ ಪ್ಯಾಕೆಟ್ ಹಾಲು ಒಯ್ಯುವ ಪರಿಪಾಠವಿದೆ. ಅಂತು ಬೆಳಿಗ್ಗೆ ಪರಿಶುದ್ಧತೆ ಕಂಡ ಹಾಲು ಸಂಜೆ ಮನೆ ಸೇರುವಾಗ ಅರಸಿನ, ಸಿಯಾಳ ಮಿಶ್ರಿತ ಮೊಸರ ತೀರ್ಥವಾಗಿ ಹೊಟ್ಟೆ ಸೇರುತ್ತದೆ. ಎರೆದ ತನು ಭೂಮಿ ಸೇರಬೇಕೆಂಬ ಇರಾದೆ ಡ್ರಮ್ ಸೇರಿ ಬಟುವಾಡೆಯಾಗುವುದು ಎಷ್ಟು ಸರಿಎಂಬ ಜಿಜ್ಞಾಸೆ ಇತ್ತೀಚೆಗೆ ಜಾಲತಾಣದಲ್ಲಿ ಹರಿಯುತ್ತಿದೆ. ಇವೆಲ್ಲದರ ನಡುವೆ, ಎಲ್ಲವನ್ನೂ ಸಮಾಧಾನದಿಂದ ಆಲಿಸಿ ಕೊಟ್ಟ ತನುವಿಗೆ ಅನು ಕೊಡುವ ಭೂಮಿ ತಾಯಿಯನ್ನು ಹೊತ್ತು ಪೋಷಿಸುವ ಆದಿಶೇಷ ನಂಬಿಕೆಗೆ ಚ್ಯುತಿ ಬಾರದಂತೆ ಅನುಗ್ರಹಿಸಲಿ. ನಾಗರಪಂಚಮಿಯ ಶುಭಾಶಯಗಳು.
?️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!