Wednesday, April 24, 2024
spot_imgspot_img
spot_imgspot_img

ಹದಗೆಟ್ಟ ಪೊಲೀಸ್ ಆಡಳಿತ ವ್ಯವಸ್ಥೆ; ನ್ಯಾಯಕ್ಕಾಗಿ ಕನ್ನಡಿಗ ಪೊಲೀಸರು ಕೋರ್ಟ್ ಮೊರೆ

- Advertisement -G L Acharya panikkar
- Advertisement -
suvarna gold

ಬೆಂಗಳೂರು: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ನಿಯಮ ಬಾಹಿರ ತೀರ್ಮಾನಗಳು, ಕನ್ನಡ ವಿರೋಧಿ ನೀತಿ ಅವರನ್ನೇ ಪೇಚಿಗೆ ಸಿಲುಕಿಸುತ್ತಿವೆ. ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸುತ್ತಿರುವ ಡಿಜಿಪಿ ಪ್ರವೀಣ್ ಸೂದ್ ಅವರ ವಿರುದ್ಧ ಪದೇ ಪದೇ ನ್ಯಾಯಾಂಗ ನಿಂದನೆ ನೋಟಿಸ್‌ಗಳು ಜಾರಿಯಾಗಿ ಡಿಜಿಪಿ ಕಚೇರಿ ಕದ ತಟ್ಟುತ್ತಿವೆ.

vtv vitla
vtv vitla

ವರ್ಗಾವಣೆ, ಬಡ್ತಿ, ಐಪಿಎಸ್ ನಾನ್ ಐಪಿಎಸ್ ಹುದ್ದೆಗಳ ಹಂಚಿಕೆ ಸೇರಿದಂತೆ ಪೊಲೀಸ್ ಆಡಳಿತ ವ್ಯವಸ್ಥೆಗೆ ಸಂಬಂಧಸಿದಂತೆ ಡಿಜಿಪಿ ಅನುಸರಿಸುತ್ತಿರುವ ಧೋರಣೆ ವಿರುದ್ಧ ಇಲಾಖೆಯಲ್ಲಿ ತೀವ್ರ ಅಸಮಾಧಾನ ಹುಟ್ಟಿಕೊಂಡಿದೆ. ಅದು ಡಿಜಿಪಿ ನಿರ್ಣಯಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ನಿರ್ದೇಶನ ಕೊಡಿಸುತ್ತಿದ್ದಾರೆ. ಈ ಬೆಳವಣಿಗೆ ಗಮನಿಸಿದರೆ ರಾಜ್ಯದಲ್ಲಿ ಪೊಲಿಸ್ ಆಡಳಿತ ಕುಸಿದಿದೆಯೇ ಎಂಬ ಅನುಮಾನ ಕಾಡುತ್ತದೆ.

ಸರಣಿ ನ್ಯಾಯಾಂಗ ನಿಂದನೆ ಪ್ರಕರಣ:

ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುತ್ತದೋ ಆ ರಾಜ್ಯ ಶಾಂತಿಯುತವಾಗಿರುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕಾದರೆ, ಮೊದಲು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿ ಕೂಡ ಚೆನ್ನಾಗಿರಬೇಕು. ಆದರೆ, ರಾಜ್ಯದಲ್ಲಿ ಹಾಲಿ ಡಿಜಿಪಿ ಪ್ರವೀಣ್ ಸೂದ್ ಅವರು, ವರ್ಗಾವಣೆ, ಬಡ್ತಿ, ನಾನ್ ಐಪಿಎಸ್ ಹುದ್ದೆಗಳಿಗೆ ಅರ್ಹರ ನಿಯೋಜನೆ ವಿಚಾರದಲ್ಲಿ ಹೊರಡಿಸಿರುವ ನಿಯಮ ಬಾಹಿರ ಆದೇಶಗಳಿಂದ ಅನ್ಯಾಯಕ್ಕೆ ಒಳಗಾದವರು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ನ್ಯಾಯ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆ ಅರ್ಜಿಗಳು ನ್ಯಾಯಾಂಗ ನಿಂದನೆ ಅರ್ಜಿಗಳಾಗಿ ಮಾರ್ಪಟ್ಟು ಡಿಜಿಪಿ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ನ್ಯಾಯಾಲಯಗಳು ತೀರ್ಪು ನೀಡಿದ ಬಳಿಕವಾದರೂ ಎಚ್ಚೆತ್ತುಕೊಂಡು ಪರಿಹಾರ ಕಂಡುಕೊಳ್ಳದೇ ಡಿಜಿಪಿ ಅಫೀಲು ಹಾಕಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆದರೆ, ಡಿಜಿಪಿ ಅವರ ಅಪೀಲು ನಡೆ ನೋಡಿ ರೋಸಿ ಹೋಗಿರುವ ಪೊಲೀಸ್ ಸಿಬ್ಬಂದಿ ಇದೀಗ ಡಿಜಿಪಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಗುಜರಾಯಿಸುತ್ತಿದ್ದಾರೆ. ಡಿಜಿಪಿ ಪ್ರವೀಣ್ ಸೂದ್ ಅವರ ವಿರುದ್ಧ ಕೆಎಟಿಗೆ ಸಲ್ಲಿಸಿರುವ ಅರ್ಜಿಗಳು ಹಾಗೂ ನ್ಯಾಯಾಂಗ ನಿಂದನೆ ಪ್ರಕರಣಗಳ ವಿವರ ಇಲ್ಲಿದೆ ನೋಡಿ.

ನ್ಯಾಯಾಂಗ ನಿಂದನೆ ನೋಟಿಸ್ ಜಾರಿ:

ಪೊಲೀಸ್ ಸಿಬ್ಬಂದಿಗೆ ಬಡ್ತಿ ನೀಡುವಲ್ಲಿ ಮಹಾ ಪ್ರಮಾದ ಎಸಗಿದ್ದು, ಅದನ್ನು ಸರ್ಕಾರ ಸರಿಪಡಿಸಿದರೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅದನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದ್ದರು. ಈ ಸಂಬಂಧ ಪೊಲೀಸ್ ಸಿಬ್ಬಂದಿ ದಾಖಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ( KAT) ಡಿಜಿಪಿ ಪ್ರವೀಣ್ ಸೂದ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿದೆ. 1986 ರಿಂದ 1992 ರ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಪೊಲೀಸ್ ಸಿಬ್ಬಂದಿಗೆ ಬಡ್ತಿ ನೀಡದೇ 1993 ರಿಂದ 1997 ರ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಸಿಬ್ಬಂದಿಗೆ ಬಡ್ತಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಪೊಲೀಸ್ ಸಿಬ್ಬಂದಿ ಕೆಎಟಿ ಮೊರೆ ಹೋಗಿದ್ದರು. ಈ ಸಂಬಂಧ ನ್ಯಾಯ ಬದ್ಧ ಬಡ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಗೃಹ ಇಲಾಖೆಗೆ ಕೆಎಟಿ ಸೂಚಿಸಿ ಆದೇಶಿಸಿತ್ತು. ಕೆಎಟಿ ಆದೇಶದ ಹಿನ್ನೆಲೆಯಲ್ಲಿ ಬಡ್ತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಆದರೆ, ಡಿಜಿಪಿಯವರು ಈ ಕಡತವನ್ನು ಕಣ್ಣಾಡಿಸಲೇ ಇಲ್ಲ. ಸರ್ಕಾರದ ಆದೇಶವನ್ನು ಜಾರಿಗೆ ತರಲಿಲ್ಲ. ಇದರಿಂದ ನೊಂದ ಪೊಲೀಸ್ ಸಿಬ್ಬಂದಿ ಕೆಎಟಿ ಮೊರೆ ಹೋಗಿದ್ದರು. ಇದೀಗ ಕೆಎಟಿ ಪ್ರವೀಣ್ ಸೂದ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿದೆ.

ಸೂದ್ ವಿರದ್ಧ ನಾನ್ ಬೇಲೆಬಲ್ ವಾರಂಟ್ :

ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ವಿರುದ್ಧ ಕರ್ನಾಟಕ ಹೈಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ನಲ್ಲಿ ತಡೆಯಾಜ್ಞೆ ತರುವ ಮೂಲಕ ಸ್ವಲ್ಪ ನಿರಾಳರಾಗಿದ್ದಾರೆ. ಡಿವೈಎಸ್ಪಿಯೊಬ್ಬರು ತನ್ನ 24 ವರ್ಷದ ಸೇವಾವಧಿಯಲ್ಲಿ 30 ಕ್ಕೂ ಹೆಚ್ಚು ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ತಲೆ ಕೆಡಿಸಿಕೊಂಡಿರಲಿಲ್ಲ. ಸುಳ್ಳು ಪ್ರಮಾಣ ಪತ್ರ ನೀಡಿದ್ದರು. ಡಿಜಿಪಿ ಖುದ್ದು ಹಾಜರಾತಿಗೆ ಹೈಕೋರ್ಟ್ ಸೂಚಿಸಿದ್ದರೂ ಹೋಗಿರಲಿಲ್ಲ. ಪೊಲೀಸ್ ಮಹಾ ನಿರ್ದೇಶಕರು ಕೋರ್ಟ್ ನಿರ್ದೇಶನ ಬಗ್ಗೆ ತೋರಿದ ಉದಾಸೀನತೆ ಬಗ್ಗೆ ಕೆಂಡಾಮಂಡಲವಾಗಿದ್ದ ನ್ಯಾಯಪೀಠ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆಗ ಎಚ್ಚೆತ್ತ ಡಿಜಿಪಿ ಪ್ರವೀಣ್ ಸೂದ್ ಹೈಕೋರ್ಟ್ ಜಾಮೀನು ರಹಿತ ವಾರಂಟ್ ಗೆ ಸುಪ್ರೀಂಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಒಬ್ಬ ಪೊಲೀಸ್ ಅಧಿಕಾರಿ ಮನವಿ ಆಲಿಸಿ ಸಮಸ್ಯೆ ಇತ್ಯರ್ಥ ಪಡಿಸಿದ್ದರೆ, ಕೋರ್ಟ್ ಹೊಗುವ ಪ್ರಮೇಯವೇ ಇರುತ್ತಿರಲಿಲ್ಲ. ಒಬ್ಬ ಅಧಿಕಾರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ನ್ಯಾಯಾಲಯ ನೀಡುವ ತೀರ್ಪನ್ನು ಪರಿಗಣಿಸದ ಕಾರಣ ಈ ಸಮಸ್ಯೆ ಎದುರಾಗಿದ್ದು ಸ್ಮರಿಸಬಹುದು.


ಡಿಜಿಪಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಗುಜರಾಯಿಸಿದ ಪಿಎಸ್‌ಐ

ವರ್ಗಾವಣೆ ಬಯಸಿ ಪಿಎಸ್‌ಐ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪರಿಗಣಿಸಿಲ್ಲ. ಬಳ್ಳಾರಿ ವಲಯದ ಅಧಿಕಾರಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಸ್ವೀಕೃತವಾಗಿಲ್ಲ ಎಂಬ ಕಾರಣದಿಂದ ಪಿಎಸ್‌ಐ ವರ್ಗಾವಣೆ ಮನವಿಯನ್ನು ಪರಿಗಣಿಸಿರಲಿಲ್ಲ. ಡಿಜಿಪಿಯವರ ಈ ಕ್ರಮ ಪ್ರಶ್ನಿಸಿ ಪಿಎಸ್‌ಐ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ಪ್ರವೀಣ್ ಸೂದ್ ಅವರಿಗೆ ಬೆಳಗಾವಿ ಆಡಳಿತಾತ್ಮಕ ನ್ಯಾಯಮಂಡಳಿ ಸಮನ್ಸ್ ಜಾರಿಗೊಳಸಿದೆ. ಅದಕ್ಕೆ ಹಾಲಿ ಡಿಜಿಪಿಯವರು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ತನ್ನ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈ ಬಿಡುವಂತೆ ಪ್ರವೀಣ್ ಸೂದ್ ಕೋರಿದ್ದಾರೆ.

ಕೋರ್ಟ್ ಗೆ ಕಡ್ಡಾಯ ಹಾಜರು ಸಿಎಸ್ ಸುತ್ತೋಲೆ :

ವರ್ಗಾವಣೆ, ಬಡ್ತಿ ಸೇರಿದಂತೆ ಪೊಲೀಸ್ ಆಡಳಿತಕ್ಕೆ ಸಂಬಂಧಿಸಿದಂತೆ ಹಾಲಿ ಡಿಜಿಪಿ ವಿರುದ್ಧ ಅನೇಕ ಪ್ರಕರಣಗಳ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ದಾಖಲಾಗಿವೆ.ಕೆಲವು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿವೆ. ಎಲ್ಲದರ ಲೆಕ್ಕ ನೋಡಿದರೆ ಡಿಜಿಪಿ ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಗಳಗೆ ಹೋಗಿ ಬರುವುದರಲ್ಲಿ ಕಾಲ ಕಳೆಯಬೇಕಾಗುತ್ತದೆ. ಪೊಲೀಸ್ ಮಹಾ ನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗದೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ನೋಟಿಸ್ ರವಾನೆಯಾಗುತ್ತಿವೆ. ಇದರಿಂದ ಬೇಸತ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ” ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಕಡ್ಡಾಯವಾಗಿ ಪೊಲೀಸ್ ಅಧಿಕಾರಿಗಳು ಹಾಜರಾಗಬೇಕು ಎಂದು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆಡಳಿತ ವಿಚಾರದಲ್ಲಿ ಅನುಸರಿಸುತ್ತಿರುವ ನೀತಿಯಿಂದ ಅನಿವಾರ್ಯವಾಗಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಆಡಳಿತ ನಡೆಸುವಂತಾಗಿದೆ. ಇಲಾಖೆಯ ಸಿಬ್ಬಂದಿಯ ಸಮಸ್ಯೆಗೆ ನ್ಯಾಯ ಸಮ್ಮತ ನೆಲೆಗಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಕೂಡ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರುವಾಗುವುದಿಲ್ಲ. ಎರಡು ವರ್ಷದಿಂದ ಪೊಲೀಸ್ ಪೇದೆಗಳಿಂದ ಹಿಡಿದು ಎಸ್ಪಿ ದರ್ಜೆ ವರೆಗಿನ ಅಧಿಕಾರಿಗಳು ಕೋರ್ಟ್ ಮೂಲಕವೇ ತಮಗೆ ಆದ ಅನ್ಯಾಯ ಸರಿ ಪಡಿಸಿಕೊಳ್ಳಲು ಹೊರಟಿದ್ದು, ಪೊಲೀಸ್ ಆಡಳಿತ ವ್ಯವಸ್ಥೆಯ ಬಗ್ಗೆ ನಿರಾಸೆಗೊಂಡಿದ್ದಾರೆ.

vtv vitla
vtv vitla

ಪರಿಸ್ಥಿತಿ ಮುಂದುವರೆದ್ರೆ ಚುನಾವಣೆಯಲ್ಲಿ ಫಲಿತಾಂಶ ಗ್ಯಾರೆಂಟಿ :

ಸಿದ್ದರಾಮಯ್ಯ ಐದು ವರ್ಷ ದಕ್ಷ , ಭ್ರಷ್ಟಾಚಾರ ರಹಿತ ಅಡಳಿತ ನೀಡಿದ್ರೂ ಮತ್ತೆ ಅಧಿಕಾರಕ್ಕೆ ಬರಲಿಕ್ಕೆ ಸಾಧ್ಯವಾಗಲಿಲ್ಲ. ಜನರೊಂದಿಗೆ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ಹಸ್ತಕ್ಷೇಪದಿಂದ ರೋಸಿ ಹೋಗಿದ್ದರು. ಸದಾ ಜನರ ಸಮಸ್ಯೆ ಪರಿಹರಿಸುವ ಪೊಲೀಸರ ಮಾತು ಜನ ಸಾಮಾನ್ಯರು ಮೀರಲ್ಲ. ಹೀಗಾಗಿ ಕೆಂಪಯ್ಯ ಮೇಲಿನ ಸಿಟ್ಟನ್ನು ಪಕ್ಷದ ಮೇಲೆ ತೋರಿಸಿದ್ದರು. ಬಹುಶಃ ಪೊಲೀಸ್ ಇಲಾಖೆಯ ಈಗಿನ ಆಡಳಿತ ವೈಖರಿ ನೋಡಿದ್ರೆ, ಬಿಜೆಪಿ ಸರ್ಕಾರದ ಮೇಲೆ ಪರಿಣಾಮ ಬೀರುವ ದಟ್ಟ ಲಕ್ಷಣ ಗೋಚರಿಸುತ್ತಿದೆ. ಗೃಹ ಸಚಿವರು, ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು, ಪೊಲೀಸ್ ಇಲಾಖೆಯಲ್ಲಿ ಆಡಳಿತದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಗೃಹ ಸಚಿವರೇ ಎಚ್ಚೆತ್ತುಕೊಳ್ಳಿ:

ಪೊಲೀಸ್ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಬಡ್ತಿ, ವೇತನ ಪರಿಷ್ಕರಣೆ, ಸೇವೆಗೆ ಸಂಬಂಧಿಸಿದಂತೆ ತಲೆದೋರಿರುವ ಸಮಸ್ಯೆಗಳನ್ನು ಅರಿಯುವ ನಿಟ್ಟಿನಲ್ಲಿ ಸಿಬ್ಬಂದಿಯ ಸಭೆ ನಡೆಸಿ ಸಮಸ್ಯೆಗಳ ಪಟ್ಟಿ ಮಾಡಿಕೊಳ್ಳಬೇಕು. ಅದೇ ರೀತಿ ಪಿಎಸ್‌ಐ, ಇನ್‌ಸ್ಪೆಕ್ಟರ್, ಡಿವೈಎಸ್ಪಿ, ಎಎಸ್ಪಿ, ನಾನ್ ಐಪಿಎಸ್ ಎಸ್ಪಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಸಭೆ ನಡೆಸಿ ಸಮಸ್ಯೆಗಳ ಪಟ್ಟಿ ಮಾಡಿ ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠರಿಗೆ ಮನವರಿಕೆ ಮಾಡುವುದು ಆಡಳಿತ ದೃಷ್ಟಿಯಿಂದ ಸೂಕ್ತ. ಕೇವಲ ಕೇಂದ್ರ ಸೇವೆಯ ಐಪಿಎಸ್ ಅಧಿಕಾರಿಗಳಿಗೆ ಮಣೆ ಹಾಕಿ, ಕನ್ನಡಿಗ ಅಧಿಕಾರಿಗಳಿಗೆ ಆಗಿರುವ ಅನ್ಯಾಯ ಎಸಗಲಾಗಿದೆ. ಇದರ ಬಗ್ಗೆ ಕೂಲಂಕುಶ ಮಾಹಿತಿ ಪಡೆದು ತ್ವರಿತವಾಗಿ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ, ಪೊಲೀಸ್ ಆಡಳಿತ ವ್ಯವಸ್ಥೆ ಅದಃಪತನಕ್ಕೆ ಇಳಿಯುವುದರಲ್ಲಿ ಸಂದೇಹವೇ ಇಲ್ಲ !

- Advertisement -

Related news

error: Content is protected !!