



ಬೆಂಗಳೂರು: ಬೇಸಿಗೆಗೆ ಬೆಂದಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ, ಹಲವು ಅವಘಡಗಳ ಜೊತೆ 10 ಜನರ ಪ್ರಾಣವನ್ನು ತೆಗೆದಿದ್ದು, ಒಂದೇ ಜಾಗದಲ್ಲಿ 7 ಜನ ಗೋಡೆ ಕುಸಿದು ಅಸುನೀಗಿದರೆ, ಉಳಿದ ಮೂವರು ಪ್ರತ್ಯೇಕ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಅರ್ಧ ಗಂಟೆ ಸುರಿದ ಮಳೆಗೆ ನಗರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ 10 ಜನ ಅಸುನೀಗಿದ್ದಾರೆ. ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದು 7 ಜನ ಮೃತಪಟ್ಟಿದ್ದಾರೆ. ದುರಂತ ಅಂದರೆ ಘಟನೆಯಾದ 100 ಮೀಟರ್ ದೂರದಲ್ಲಿ ಗಾಡಿ ಪಾರ್ಕ್ ಮಾಡುತ್ತಿದ್ದ ಸೈಯದ್ ಸೂಫಿಯಾನ್(17), ಗೋಡೆ ಕುಸಿದ ಕಾರಣ ಬೆಸ್ಕಾಂ ವಿದ್ಯುತ್ ವೈಯರ್ ತಾಗಿ ಕರೆಂಟ್ ಶಾಕ್ನಿಂದ ಪ್ರಾಣ ಬಿಟ್ಟಿದ್ದಾನೆ.
ಕೆಜಿ ಹಳ್ಳಿಯ ವೆಂಕಟೇಶ್ ಪುರಂ ನಿವಾಸಿ ಸೈಯದ್ ತನ್ನ ತಾಯಿ ಜೊತೆ ಖುಷಿಯಿಂದ ಬಟ್ಟೆ ಖರೀದಿಗೆ ಬಂದಿದ್ದ. ತಾಯಿ ಜೊತೆ ಬಂದಾತ ಪಾರ್ಕ್ ಮಾಡಲು ಹೋದಾಗ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದಿದೆ. ಇದೇ ವೇಳೆ ದೂರದ ಬೆಸ್ಕಾಂ ಕಂಬಕ್ಕೆ ಹಾನಿಯಾಗಿ ವೈಯರ್ ಕಟ್ ಆಗಿದ್ದು, ಪಾರ್ಕ್ ಮಾಡುತ್ತಿದ್ದ ಸೈಯದ್ಗೆ ವಿದ್ಯುತ್ ತಂತಿ ತಗುಲಿ ಶಾಕ್ನಿಂದ ತಾಯಿ ಮುಂದೆಯೇ ಸೈಯದ್ ಪ್ರಾಣ ಬಿಟ್ಟಿದ್ದಾನೆ. ತನ್ನ ಕಣ್ಣ ಮುಂದೆಯೇ ನಡೆದ ದುರಂತ ಕಂಡ ತಾಯಿ ಕೂಡ ಮಗನ ಸಾವಿನಿಂದ ಶಾಕ್ಗೆ ಒಳಗಾಗಿ ಐಸಿಯು ಸೇರಿದ್ದಾರೆ.
ಇನ್ನೂ ಮಳೆಗೆ ಮತ್ತೊಂದು ಪ್ರಕರಣದಲ್ಲಿ ಗೋಡೋನ್ ಶೀಟ್ಗಳು ಬಿದ್ದು ವ್ಯಕ್ತಿ ದುರಂತ ಸಾವನ್ನಪ್ಪಿದ್ದಾರೆ. ಮೈಸೂರು ರಸ್ತೆ ಕಸ್ತೂರಿ ಬಾಯಿನಗರ ಅಶ್ವಥ್ ಕಟ್ಟೆ ರಸ್ತೆಯ ಮನೆಯಲ್ಲಿದ್ದ ಮಂಜು(35) ಮೇಲೆ ಸಿಮೆಂಟ್ ಶೀಟ್ ಬಿದ್ದಿದೆ. ಕುಟುಂಬದ ಜೊತೆ ಮನೆ ಒಳಗೆ ಇದ್ದ ವ್ಯಕ್ತಿ ಸಾವನ್ನಪ್ಪಿದ್ದು, ಬಿರುಗಾಳಿ ಮಳೆಗೆ ಗೋಡೌನ್ ಶೀಟ್ಗಳು ಹಾರಿ ಮನೆಗಳ ಮೇಲೆ ಬಿದ್ದು, ಹಲವು ಮನೆಗಳು, ಗೋಡೌನ್ಗಳಿಗೆ ಹಾನಿಯಾಗಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








