Saturday, July 25, 2026
spot_imgspot_img
spot_imgspot_img

ವಿಟ್ಲ ಪೊಲೀಸ್ ಠಾಣೆ ಸಿಸಿ ಕ್ಯಾಮೆರಾ ಫೂಟೇಜ್ ಹಾಜರುಪಡಿಸಲು ಜಿಲ್ಲಾ ಹಾಗೂ ಸತ್ರ ಪೋಕ್ಸೋ ನ್ಯಾಯಾಲಯ ಆದೇಶ

- Advertisement -
- Advertisement -

ಮಂಗಳೂರು: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರೈಮ್ ನಂ.121/2025 ಸಂಬಂಧಿಸಿದ ಪೋಕ್ಸೋ ಪ್ರಕರಣದಲ್ಲಿ, ಠಾಣೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾ ಫೂಟೇಜ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರಿನ ಮೊದಲ ಜಿಲ್ಲಾ ಹಾಗೂ ಸತ್ರ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶವನ್ನು ಸ್ಪೆಷಲ್ ಕೇಸ್ ನಂ.184/2025ರಲ್ಲಿ ಹೊರಡಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಅಪ್ರಾಪ್ತೆಯ ಮೇಲಿನ ಅನುಚಿತ ವರ್ತನೆ ಆರೋಪದಡಿ ತಾಯಿ ನೀಡಿದ ದೂರಿನ ಆಧಾರದ ಮೇಲೆ ಗುರುಪ್ರಸಾದ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ದೂರು ನೀಡುವ ಸಂದರ್ಭದಲ್ಲಿ ದೂರುದಾರರು ಸೇಸಪ್ಪ ಬೆದ್ರಕಾಡು ಎಂಬ ವ್ಯಕ್ತಿಯೊಂದಿಗೆ ಠಾಣೆಗೆ ಆಗಮಿಸಿದ್ದರೆಂಬುದು ತಿಳಿದುಬಂದಿದೆ.

ಇದೇ ವೇಳೆ, ಸೇಸಪ್ಪ ಬೆದ್ರಕಾಡು ಮತ್ತು ಆರೋಪಿಯ ಚಿಕ್ಕಪ್ಪ ಆನಂದ ಸುರುಳಿಮೂಳೆ ಅವರ ನಡುವೆ ಹಳೆಯ ವೈಷಮ್ಯವಿದ್ದು, ಅದರ ಹಿನ್ನೆಲೆ ಈ ಪ್ರಕರಣ ಸುಳ್ಳಾಗಿ ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಯ ಚಿಕ್ಕಪ್ಪ ಈ ಕುರಿತು ವಕೀಲರ ಮೂಲಕ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.ಆರೋಪಿಯ ಪರ ವಕೀಲ ಶಿವಾನಂದ ವಿಟ್ಲ ಅವರು, ದೂರು ನೀಡಿದ ದಿನ ದೂರುದಾರರು ಹಾಗೂ ಸಂಬಂಧಿತರು ಠಾಣೆಗೆ ಬಂದಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ ಎಂದು ತಿಳಿಸಿ, ಅವುಗಳನ್ನು ಸಂರಕ್ಷಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ತನಿಖಾಧಿಕಾರಿಗೆ ನೋಟಿಸ್ ನೀಡಿದ್ದರು. ಆದರೆ ದೋಷಾರೋಪಣಾ ಪಟ್ಟಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿಲ್ಲ ಎಂದು ವಾದಿಸಿದರು.

ಇದರ ಜೊತೆಗೆ, ದೂರುದಾರರು ನಂತರ ನೀಡಿದ ಹೇಳಿಕೆಗಳಲ್ಲಿ ಸೇಸಪ್ಪ ಬೆದ್ರಕಾಡು ಪರಿಚಯವಿಲ್ಲ ಎಂದು ಹೇಳಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, 13-09-2025ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಿಸಿ ಕ್ಯಾಮೆರಾ ಫೂಟೇಜ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ.ಸಿಸಿ ಕ್ಯಾಮೆರಾ ಫೂಟೇಜ್ ಹಾಗೂ ಘಟನೆ ದಿನದ ಟವರ್ ಲೊಕೇಶನ್ ದಾಖಲೆಗಳ ಆಧಾರದ ಮೇಲೆ ಪ್ರಕರಣದ ನಿಜಸ್ವರೂಪ ಹೊರಬರುವ ಸಾಧ್ಯತೆ ಇದೆ. ಪ್ರಕರಣ ಸುಳ್ಳಾಗಿದ್ದರೆ ಸಂಬಂಧಪಟ್ಟವರು ಕಾನೂನು ಕ್ರಮಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಆರೋಪಿಯ ಪರ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

- Advertisement -

Related news

error: Content is protected !!