Tuesday, July 21, 2026
spot_imgspot_img
spot_imgspot_img

‘ಹೊರ್ಮುಜ್ ನಲ್ಲಿ ಇನ್ನೂ 13 ಭಾರತೀಯ ನೌಕೆಗಳು ಬಾಕಿ’- ಎಲ್‌ಪಿಜಿ ನೌಕೆಯ ಎಂಜಿನಿಯರ್ ರಮೇಶ್ ಶೆಟ್ಟಿ ಮಾತು

- Advertisement -
- Advertisement -

ಮಂಗಳೂರು: “ನಾವು ಕೊನೆಗೂ ಸುರಕ್ಷಿತವಾಗಿ ಮನೆ ತಲುಪಿದ್ದೇವೆ. ಆದರೆ ಹೊರ್ಮುಜ್‌ನಲ್ಲಿ ಇನ್ನೂ ಭಾರತದಲ್ಲಿ ನೋಂದಾಯಿತ 13 ಸರಕು ನೌಕೆಗಳು ಬಾಕಿಯಾಗಿವೆ. ಅವುಗಳಲ್ಲಿ ಸುಮಾರು 450 ಮಂದಿ ನಾವಿಕರು 70 ದಿನಗಳಿಂದ ಅಲ್ಲಿಯೇ ಇದ್ದಾರೆ. ಹೊರ್ಮುಜ್ ಇನ್ನೂ ಪೂರ್ಣ ಸಹಜತೆಗೆ ಬಂದಿಲ್ಲ. ಈಗ ಅಲ್ಲಿ ನೇರ ಯುದ್ಧ ನಡೆಯುತ್ತಿಲ್ಲವಾದರೂ ಅಲ್ಲಿ ಬಾಕಿಯಾಗಿರುವ ನಾವಿಕರಲ್ಲಿ ಆತಂಕ ಇದ್ದೇ ಇದೆ” ಎಂಬುದಾಗಿ ಹೊರ್ಮುಜ್‌ನಲ್ಲಿ 21 ದಿನಗಳ ಕಾಲ ಸಿಲುಕಿಕೊಂಡು ಕಳೆದ ಮಂಗಳವಾರ ಮನೆ ತಲುಪಿರುವ ಮಂಗಳೂರು ನಿವಾಸಿ, ಎಲ್‌ಪಿಜಿ ನೌಕೆಯೊಂದರ ಮುಖ್ಯ ಎಂಜಿನಿಯರ್ ರಮೇಶ್ ಶೆಟ್ಟಿ ತಿಳಿಸಿದ್ದಾರೆ.

ರಮೇಶ್ ಶೆಟ್ಟಿ ಮಂಗಳೂರಿನ ಸೀತಾರಾಮ ಶೆಟ್ಟಿ ಮತ್ತು ಸುಮತಿ ಶೆಟ್ಟಿ ಅವರ ಪುತ್ರ. “ನಮ್ಮ ನೌಕೆ 46,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತುಕೊಂಡಿತ್ತು. ಅದು ತುಂಬಾ ಅಗತ್ಯದ ಸರಕು ಮತ್ತು ಅಪಾಯಕಾರಿ ಕೂಡ. ಹಾಗಾಗಿ ಒಂದು ಹಂತದಲ್ಲಿ ಅಂತಹ ನೌಕೆಗಳನ್ನು ಮಾತ್ರ ಬಿಡಲಾಯಿತು. ಉಳಿದಂತೆ ಕಚ್ಚಾ ತೈಲ, ರಸಗೊಬ್ಬರ, ಇತರ ಕೆಲವು ಸರಕುಗಳನ್ನು ಹೊತ್ತಿರುವ ನೌಕೆಗಳು ಇನ್ನೂ ಹೊರ್ಮುಜ್ ದಾಟಿಲ್ಲ. ಯುದ್ಧ ನಡೆಯುತ್ತಿಲ್ಲವಾದರೂ ಕೆಲವೊಮ್ಮೆ ದಾಳಿ, ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಇದು ನಾವಿಕರ ಆತಂಕಕ್ಕೆ ಕಾರಣವಾಗಿದೆ.

ನಮ್ಮ ನೌಕೆಯಲ್ಲಿದ್ದ ಎಲ್‌ಪಿಜಿಯನ್ನು ಗುಜರಾತ್, ಮಂಗಳೂರು ಮತ್ತು ಮುಂಬಯಿ ಬಂದರುಗಳಲ್ಲಿ ಇಳಿಸಿದ್ದೇವೆ. ಈಗ ಎಲ್‌ಪಿಜಿಗಾಗಿ ಕೊಲ್ಲಿ ರಾಷ್ಟ್ರಗಳ ಕಡೆಗೆ ನೌಕೆಗಳು ಹೋಗುತ್ತಿಲ್ಲ. ಬದಲಾಗಿ ಕೆಲವು ನೌಕೆಗಳು ಅಮೆರಿಕ- ಮೆಕ್ಸಿಕೋ ಕಡೆಗೆ ಹೋಗುತ್ತಿವೆ. ಕೊಲ್ಲಿ ಹೊರತುಪಡಿಸಿದರೆ ಎಲ್‌ಪಿಜಿ ರಷ್ಯಾದಲ್ಲಿ ದೊರೆಯುತ್ತದೆ. ಆದರೆ ಅಲ್ಲಿಯೂ ಉಕ್ರೇನ್ ಯುದ್ಧದ ಸ್ಥಿತಿ ಹಾಗೆಯೇ ಇದೆ. ಹಾಗಾಗಿ ನಾವು ಅಮೆರಿಕವನ್ನೇ ಅವಲಂಬಿಸಬೇಕಾಗಿದೆ.

ಹೊರ್ಮುಜ್‌ನಲ್ಲಿ ಈಗಲೂ ಚೀನ ಹೊರತುಪಡಿಸಿದರೆ ಇತರ ದೇಶಗಳ ನೌಕೆಗಳ ಸಂಚಾರ ತುಂಬಾ ಕಡಿಮೆ ಇದೆ. ಬಾಕಿ ಉಳಿದಿರುವ ನೌಕೆಗಳಲ್ಲಿ ಒಂದು ವಾರದ ಹಿಂದೆ ದಾಳಿಗೊಳಗಾದ ಯೂರಿಯಾ ಹೊತ್ತಿರುವ ನೌಕೆ ಕೂಡ ಇದೆ. ವಿವಿಧ ದೇಶಗಳ ಸುಮಾರು 600 ಹಡಗುಗಳು ಅಲ್ಲಿಯೇ ಉಳಿದುಕೊಂಡಿರುವ ಮಾಹಿತಿ ಇದೆ. ಕೊಲ್ಲಿಯಿಂದ 15 ದಿನಗಳಲ್ಲಿ ಭಾರತಕ್ಕೆ ಎಲ್‌ಪಿಜಿ ತರಬಹುದಾಗಿದೆ. ಆದರೆ ಅಮೆರಿಕದಿಂದ ತರಲು 90 ದಿನಗಳು ಬೇಕು. ಹಾಗಾಗಿ ಇದು ತುಂಬಾ ವೆಚ್ಚದಾಯಕವಾಗುತ್ತದೆ ಎಂದು ರಮೇಶ್ ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!