Monday, July 20, 2026
spot_imgspot_img
spot_imgspot_img

ತೆರಿಗೆ ವಂಚನೆ ಪ್ರಕರಣ: 2 ವರ್ಷಗಳ ಅವಧಿಗೆ ವಿದೇಶಗಳಿಗೆ ತೆರಳಲು ಡಿ.ಕೆ. ಶಿವಕುಮಾರ್‌ ಅವರಿಗೆ ವಿಶೇಷ ಕೋರ್ಟ್ ಅನುಮತಿ

- Advertisement -
- Advertisement -

ಬೆಂಗಳೂರು: ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತು ಸಡಿಲಿಕೆ ಮಾಡಿರುವ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮುಂದಿನ ಎರಡು ವರ್ಷದ ಅವಧಿಯಲ್ಲಿ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ.

ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಎಸಿಜೆಎಂ) ಕೆ.ಎನ್‌. ಶಿವಕುಮಾರ್‌ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮುಂದಿನ 2 ವರ್ಷಗಳಲ್ಲಿ ಅಮೆರಿಕ, ಯುರೋಪ್‌ ರಾಷ್ಟ್ರಗಳು, ಇಂಗ್ಲೆಂಡ್‌, ಆಸ್ಟ್ರೇಲಿಯಾ, ರಷ್ಯಾ ಹಾಗೂ ಅರಬ್‌ ರಾಷ್ಟ್ರಗಳಿಗೆ ಅಧಿಕೃತ ಉದ್ಯಮ ಪ್ರವಾಸ ಕೈಗೊಳ್ಳಲು ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದ್ದಾರೆ.

ಆರೋಪಿಯು ತನ್ನ ಉದ್ಯಮದ ಅಭಿವೃದ್ಧಿ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಹಾಗೂ ರಾಜ್ಯ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದು, ವಿವಿಧ ಯೋಜನೆಯ ಭಾಗವಾಗಿ ಹಲವು ದೇಶಗಳಿಗೆ ಭೇಟಿ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಲು ಅನುಮತಿ ಕೋರಿರುವ ಆಧಾರದಲ್ಲಿ ಸತ್ಯಾಂಶ ಮತ್ತು ಪ್ರಾಮಾಣಿಕತೆ ಇದ್ದಂತೆ ಕಾಣುತ್ತಿದೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿಗೆ 8 ತಿಂಗಳು ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿಸಲಾಗಿತ್ತು. ಆದ್ದರಿಂದ, ಡಿ.ಕೆ. ಶಿವಕುಮಾರ್‌ ಅವರಿಗೆ ಅನುಮತಿ ನಿರಾಕರಿಸಲು ಸಕಾರಣವಿಲ್ಲ ಎಂದು ಮೇ 15ರ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಪ್ರತಿ ಬಾರಿಯೂ ವಿದೇಶಕ್ಕೆ ತೆರಳುವಾಗ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಪ್ರವಾಸ ವಿವರವನ್ನು ತನಿಖಾ ಸಂಸ್ಥೆಗೆ ಸಲ್ಲಿಸಬೇಕು. ನ್ಯಾಯಾಲಯ ನಿರ್ದೇಶಿಸಿದಾಗ ವಿಚಾರಗೆ ಹಾಜರಾಗಬೇಕು. ಈ ಷರತ್ತುಗಳನ್ನು ಉಲ್ಲಂಘಿಸಿದರೆ ವಿದೇಶ ಪ್ರವಾಸಕ್ಕೆ ತೆರಳಲು ಅನುಮತಿಸಿರುವ ಆದೇಶ ರದ್ದುಪಡಿಸಲು ತನಿಖಾ ಸಂಸ್ಥೆ ಅಥವಾ ಪ್ರಾಸಿಕ್ಯೂಷನ್‌ ಮನವಿ ಮಾಡಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣವೇನು?

ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್‌ ಪಟೇಲ್‌ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಸೋಲಿಸಿ, ಗಾಂಧಿ ಕುಟುಂಬಕ್ಕೆ ಮುಖಭಂಗ ಮಾಡುವ ಬಿಜೆಪಿಯ ಪ್ರಯತ್ನಕ್ಕೆ ತಡೆಯೊಡ್ಡಲು 2017ರ ಆಗಸ್ಟ್‌ನಲ್ಲಿ ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ಬೆಂಗಳೂರಿನ ಬಿಡದಿ ಸಮೀಪದ ಈಗಲ್ಟನ್‌ ರೆಸಾರ್ಟ್‌ನಲ್ಲಿ ನೆರವು ಕಲ್ಪಿಸಲಾಗಿತ್ತು. ಇದಾದ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್‌ ಮತ್ತವರ ಬೆಂಬಲಿಗರಿಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ನಡೆಸಿದ್ದರು.

ಇದರ ಮುಂದುವರಿದ ಭಾಗವಾಗಿ ತೆರಿಗೆ ವಂಚನೆ ಆರೋಪದ ಮೇಲೆ ಡಿ.ಕೆ. ಶಿವಕುಮಾರ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನೀಲ್‌ ಕುಮಾರ್‌ ಶರ್ಮಾ ಮತ್ತವರ ಸಹೋದರ ಸಚಿನ್‌ ನಾರಾಯಣ್‌, ಆಂಜನೇಯ ಹನುಮಂತಯ್ಯ ಮತ್ತು ಎನ್‌. ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ಗಳಾದ 276ಸಿ(1), 277, 278 ಮತ್ತು ಐಪಿಸಿ ಸೆಕ್ಷನ್‌ಗಳಾದ 193, 199 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಈಗಲ್ಟಟನ್‌ ರೆಸಾರ್ಟ್‌ನಲ್ಲಿ ಶೋಧ ನಡೆಸುತ್ತಿದ್ದಾಗ ಶಿವಕುಮಾರ್‌ ಅವರು ಪ್ರಮುಖ ಸಾಕ್ಷಿಯನ್ನು ನಾಶಪಡಿಸಿದ್ದಾರೆ ಎಂದು ಐಟಿ ಇಲಾಖೆ ಆರೋಪಿಸಿತ್ತು. ಆದರೆ, ಶಿವಕುಮಾರ್‌ ಅವರು ಆರೋಪವು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ, ಕೋರ್ಟ್ ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿತ್ತು. ಇದರಿಂದ, ವೈಯಕ್ತಿಕ ಉದ್ಯಮ ಹಾಗೂ ಸರ್ಕಾರದ ಮಂತ್ರಿಯಾಗಿ ವಿದೇಶಕ್ಕೆ ತೆರಳಲು ಶಿವಕುಮಾರ್‌ ಅವರು ಅನುಮತಿ ಕೋರಿದ್ದರು.

- Advertisement -

Related news

error: Content is protected !!