

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿ ಪ್ರದೇಶದಲ್ಲಿ ಮಂಗಳೂರು ಮೂಲದ ಯುವಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಅಮಾನುಷವಾಗಿ ಥಳಿಸಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಯಸ್ಕರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ.

ಮೃತ ಯುವಕನನ್ನು ಮಂಗಳೂರು ನಿವಾಸಿ ಸಂದೀಪ್ ನಾಯಕ್ ಎಂದು ಗುರುತಿಸಲಾಗಿದೆ. ಆರಂಭಿಕ ವರದಿಗಳಲ್ಲಿ ಅವರ ಹೆಸರನ್ನು ‘ಸಂದೀಪ್ ನಾಯರ್’ ಎಂದು ಉಲ್ಲೇಖಿಸಲಾಗಿದ್ದರಿಂದ ಅವರು ಕೇರಳ ಮೂಲದವರಿರಬಹುದು ಎಂದು ತನಿಖಾಧಿಕಾರಿಗಳು ಭಾವಿಸಿದ್ದರು. ಆದರೆ ನಂತರದ ಪರಿಶೀಲನೆಯಲ್ಲಿ ಅವರು ಮಂಗಳೂರಿನ ಸಂದೀಪ್ ನಾಯಕ್ ಎಂಬುದು ದೃಢಪಟ್ಟಿದೆ.

ಜೂನ್ 9ರಂದು ಕುಲ್ತಾಲಿಯ ಸಂಕಿಜಹಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕೆಲ ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ವೀಡಿಯೊ ವೈರಲ್ ಆದ ನಂತರ ಪ್ರಕರಣದ ಸಂಪೂರ್ಣ ವಿವರಗಳು ಬಹಿರಂಗವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸಂದೀಪ್ ನಾಯಕ್ ಸುಮಾರು ಎರಡು ವಾರಗಳ ಹಿಂದೆ ತಮ್ಮ ಪರಿಚಯಸ್ಥರೊಂದಿಗೆ ಕುಲ್ತಾಲಿಗೆ ಬಂದಿದ್ದರು. ಜೂನ್ 9ರ ಬೆಳಿಗ್ಗೆ ಅವರು ಒಬ್ಬರೇ ಸ್ಥಳೀಯ ಮಾರುಕಟ್ಟೆಗೆ ತೆರಳಿದ್ದು, ಈ ವೇಳೆ ದಾರಿ ತಪ್ಪಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಗ್ರಾಮದಲ್ಲಿ ಅಲೆದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲ ಗ್ರಾಮಸ್ಥರು ಅವರನ್ನು ಪ್ರಶ್ನಿಸಿ ಗುರುತಿನ ವಿವರ ಕೇಳಿದ್ದರೂ, ಸಂದೀಪ್ ಅವರಿಗೆ ಬಂಗಾಳಿ ಭಾಷೆ ತಿಳಿದಿರದ ಕಾರಣ ಸಮರ್ಪಕವಾಗಿ ಸಂವಹನ ನಡೆಸಲು ಸಾಧ್ಯವಾಗಿಲ್ಲ. ಇದರಿಂದ ಸ್ಥಳೀಯರಲ್ಲಿ ಗೊಂದಲ ಮತ್ತು ಅನುಮಾನ ಮತ್ತಷ್ಟು ಹೆಚ್ಚಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬಳಿಕ, ಗ್ರಾಮಸ್ಥರ ಗುಂಪೊಂದು ಅವರನ್ನು ಕಳ್ಳನೆಂದು ಶಂಕಿಸಿ ಹಗ್ಗದಿಂದ ಕಟ್ಟಿ ಹಲ್ಲೆ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲದೆ, ಗರ್ಭಿಣಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಕೆಲ ನಿವಾಸಿಗಳು ತಿಳಿಸಿದ್ದಾರೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಸ್ತೆ ಬದಿಯಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಕುಲ್ತಾಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಂದೀಪ್ ಅವರನ್ನು ರಕ್ಷಿಸಿ ಜಯನಗರ-ಕುಲ್ತಾಲಿ ಗ್ರಾಮೀಣ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆರಂಭದಲ್ಲಿ ಸಾವಿನ ನಿಖರ ಕಾರಣದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳನ್ನು ಪರಿಶೀಲಿಸಿದ ಬಳಿಕ ಗುಂಪು ಹಲ್ಲೆಯ ಸಂಗತಿ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಐವರು ವಯಸ್ಕ ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಹಲ್ಲೆಯಿಂದ ಉಂಟಾದ ಗಂಭೀರ ಗಾಯಗಳೇ ಸಂದೀಪ್ ನಾಯಕ್ ಅವರ ಸಾವಿಗೆ ಕಾರಣವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಸಂದೀಪ್ ನಾಯಕ್ ಅವರ ಪೂರ್ಣ ಹಿನ್ನೆಲೆ, ಅವರು ಕುಲ್ತಾಲಿಗೆ ಬಂದ ಉದ್ದೇಶ ಹಾಗೂ ಅವರೊಂದಿಗೆ ಬಂದಿದ್ದ ಸ್ನೇಹಿತರ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳ ಆಧಾರದ ಮೇಲೂ ತನಿಖೆ ತೀವ್ರಗೊಳಿಸಲಾಗಿದೆ.








